ಬಡವರು ಕಷ್ಟಪಟ್ಟು ಕಟ್ಟಿರುವ ಮನೆಯನ್ನು ಉಳಿಸುವುದಕ್ಕಾಗಿ ಸಲಹೆ ನೀಡಿದ್ದೇನೆ ಅಷ್ಟೇ: ನಂದೀಶ್ ರೆಡ್ಡಿ
ಬೆಂಗಳೂರು: ನನ್ನ ವಾದ ಹಾಗಾಗಿರಲಿಲ್ಲ. ಕಳೆದ 8 ವರ್ಷಗಳ ಹಿಂದೆ ನೀರು ಹೋಗಲು ಮೋರಿ ಕಟ್ಟಿದ್ದಾರೆ. ಇದೀಗ ನೀರು ಹೋಗುತ್ತಿರುವ ಜಾಗ ಬಿಟ್ಟು ಬೇರೆ ಜಾಗ ಗುರುತಿಸುತ್ತಿದ್ದಾರೆ. ಅಲ್ಲಿ ಮನೆಗಳಿವೆ ಹಾಗಾಗಿ ಬಡವರು ಕಷ್ಟಪಟ್ಟು ಕಟ್ಟಿರುವ ಮನೆಗಳನ್ನು ಉಳಿಸುವುದಕ್ಕಾಗಿ ಸಲಹೆ ನೀಡಿದ್ದೇನೆ ಅಷ್ಟೇ. ನಾನು ಅಲ್ಲಿ ವಾದಿಸಿದ್ದಲ್ಲ. ನನ್ನ ಅಭಿಪ್ರಾಯ ಹೇಳಿದ್ದು ಎಂದು ತೆರವು ಕಾರ್ಯಕ್ಕೆ ಅಡ್ಡಿಪಡಿಸಿದ ವಿಚಾರವಾಗಿ ಬಿಜೆಪಿ ಮುಖಂಡ ನಂದೀಶ್ ರೆಡ್ಡಿ (Nandish Reddy) ಸ್ಪಷ್ಟನೇ ನೀಡಿದ್ದಾರೆ.

ಮಹದೇವಪುರದಲ್ಲಿ ತೆರವು ವೇಳೆ ಬಿಜೆಪಿ ಮುಖಂಡ ನಂದೀಶ್ ರೆಡ್ಡಿ (Nandish Reddy) ಕಿರಿಕ್ ಮಾಡಿದ್ದರು. ಚಿನ್ನಪ್ಪನಹಳ್ಳಿ (Chinnapana Halli) ಒತ್ತುವರಿ ತೆರವು (Demolition Of Illegal Structures) ಕಾರ್ಯಚರಣೆ ವೇಳೆ ಮಧ್ಯಪ್ರವೇಶ ಮಾಡಿದ ಅವರು, ಪಾಲಿಕೆ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿದ್ದರು.

ಈ ಬಗ್ಗೆ ಪಬ್ಲಿಕ್ ಟಿವಿ (Public TV) ಜೊತೆ ಮಾತನಾಡಿದ ಅವರು, ಬಸವನಪುರ ವಾರ್ಡ್‍ನಲ್ಲಿ ಒತ್ತುವರಿ ಮಾಡಿ ಮನೆ ನಿರ್ಮಿಸಿದ್ದರು. ನಾನು ಶಾಸಕನಾದ ಕೆಲವೇ ತಿಂಗಳಲ್ಲಿ ಅಲ್ಲಿ ನೀರು ನಿಂತು ಸಮಸ್ಯೆ ಆಗಿತ್ತು. ಬಡವರೆಲ್ಲ ಅಲ್ಲಿ ಮನೆ ಕಟ್ಟಿಕೊಂಡಿದ್ದರು. ಅವರಿಗೆ ರಾಜಕಾಲುವೆ ಒತ್ತುವರಿ ಬಗ್ಗೆ ಗೊತ್ತಿರಲಿಲ್ಲ. ಈ ವೇಳೆ ಸರ್ಕಾರದಿಂದ ವಿಶೇಷ ಅನುಮತಿ ಪಡೆದು ರಸ್ತೆಯ ಒಳಭಾಗದಲ್ಲಿ ನೀರು ಹೋಗುವ ರೀತಿಯ ಕಾಮಗಾರಿ ಮಾಡಿಸಿದ್ದೇನೆ. ನಿಯಮದ ಪ್ರಕಾರ ಮನೆಗಳನ್ನು ಕೆಡವಬೇಕಾಗಿತ್ತು. ಆದರೆ ಆರೀತಿ ಮಾಡದೆ ಪರಿಹಾರ ಕಂಡುಕೊಂಡಿದ್ದೇವೆ ಎಂದರು.
ಹಾಗಾಗಿ ಚಿನ್ನಪ್ಪನಹಳ್ಳಿಯಲ್ಲೂ ಈ ರೀತಿ ಪರಿಹಾರ ಕಂಡುಕೊಳ್ಳಬಹುದು ಎಂದು ಪರಿಹಾರ ಸೂಚಿಸಿದ್ದೇನೆ. ಇದೀಗ ಇರುವ ಮ್ಯಾಪ್‍ನ್ನು ಗುರುತಿಸಲು ಸಾಧ್ಯವಿಲ್ಲ. ಈ ಹಿಂದಿನ ಸರ್ವೇ ಕಲ್ಲು ಇದೀಗ ಎಲ್ಲೂ ಸಿಗಲ್ಲ. ಕೆರೆ ನೀರು, ರಾಜಕಾಲುವೆ ನೀರು ಹೇಗೆ ಹೋಗಬೇಕೆಂಬುದಕ್ಕೆ ಇದೀಗ ಪರಿಹಾರ ಕಂಡುಕೊಳ್ಳಲು ಸಾಧ್ಯ. ಇದೀಗ ಬಂದಿರುವ ತಂತ್ರಜ್ಞಾನಗಳ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಕಟ್ಟಿಂಗ್ ಮೆಷಿನ್‍ಗಳ ಮೂಲಕ ಎಷ್ಟು ಜಾಗ ಬೇಕು ಅಷ್ಟನ್ನು ಮಾತ್ರ ತೆರವುಗೊಳಿಸಬಹುದಾಗಿದೆ ಅಂತಹ ಕ್ರಮಗಳನ್ನು ಅಳವಡಿಸಿ ಎಂದು ಸಲಹೆ ನೀಡಿದ್ದೇನೆ ಎಂದು ತಿಳಿಸಿದರು.
ರಾಜಕಾಲುವೆಯನ್ನು ಗೊತ್ತಿದ್ದು ಒತ್ತುವರಿ ಮಾಡಿದ್ದರೆ ಅಂತದ್ದನ್ನು ತೆರವುಗೊಳಿಸಿ. ಪ್ರಭಾವಿಗಳನ್ನು ಬಿಟ್ಟು ಬಡವರ ಮನೆಗಳನ್ನು ಒಡೆಯುವುದಲ್ಲ. ಯಾರೆಲ್ಲ ಒತ್ತುವರಿ ಮಾಡಿದ್ದಾರೆ ಅಂತವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಆಗಬೇಕೆಂದರು.