ರಾಜ್ಯ ಪ್ರಸಿದ್ಧಿಯ ಪ್ರವಾಸಿ ತಾಣ ಪಿಲಿಕುಳ ನಿಸರ್ಗ ಧಾಮ, ಮಾನವ ನಿರ್ಮಿತ ವನ್ಯಜೀವಿ ಧಾಮಕ್ಕೀಗ ೨೫ರ ಸಂಭ್ರಮ
ಕೈಕಂಬ: ಕರ್ನಾಟಕ ರಾಜ್ಯ ಪ್ರವಾಸೋದ್ಯಮ ನಕ್ಷೆಯಲ್ಲಿ ದೊಡ್ಡ ಹೆಸರಿರುವ ಮಂಗಳೂರಿನ ಪಿಲಿಕುಳ ನಿಸರ್ಗ ಧಾಮಕ್ಕೆ ಈಗ ೨೫ರ ಸಂಭ್ರಮ. ಅಂದರೆ, ರಜತ ಮಹೋತ್ಸವದ ಸಡಗರ. ಸುಮಾರು ೪೫೦ರಿಂದ ೫೦೦ ಎಕ್ರೆ ಪ್ರದೇಶದಲ್ಲಿ ವ್ಯಾಪಿಸಿರುವ ನಿಸರ್ಗ ಧಾಮದಲ್ಲಿ, ಸರಿ ಸುಮಾರು ೨೫ ವರ್ಷಗಳ ಹಿಂದೆ ಕಿರು ಪ್ರಾಣಿ ಸಂಗ್ರಹಾಲಯ ಅಸ್ತಿತ್ವಕ್ಕೆ ಬಂದಿತ್ತು. ಇದರ ಜೊತೆ ಜೊತೆಯಲ್ಲೇ ಪಿಲಿಕುಳ ಕೆರೆಯು ಬೃಹತ್ ಸರೋವರವಾಗಿ ಮಾರ್ಪಟ್ಟಿತ್ತು. ಮುಂದಿನ ದಿನಗಳಲ್ಲಿ ಇಲ್ಲಿ ಬೃಹತ್ ಪ್ರಾಣಿ ಸಂಗ್ರಹಾಲಯ, ವಿಜ್ಞಾನ ಕೇಂದ್ರ, ಪ್ಲಾನಿಟೋರಿಯಂ, ಗಾಲ್ಫ್ ಕ್ಲಬ್, ಜಂಗಲ್ ಲಾಡ್ಜ್ಗಳು, ಹೆರಿಟೇಜ್ ವಿಲೇಜ್(ಗುತ್ತಿನ ಮನೆ), ಬಾಟನಿಕಲ್ ಗಾರ್ಡನ್(ಸಸ್ಯ ಶಾಸ್ತ್ರೀಯ ಉದ್ಯಾನ) ಮತ್ತಿತರ ಪ್ರವಾಸಿಗರ ಆಕರ್ಷಣೀಯ ಕೇಂದ್ರಗಳು ಸ್ಥಾಪನೆಗೊಂಡಿವೆ.
ಪಿಲಿಕುಳದ ಸಂಕ್ತಿಪ್ತ ಚಿತ್ರಣ:
ಸುಮಾರು ೭೦ ವರ್ಷಗಳ ಹಿಂದೆ, ಅಂದಾಜು ೫೦೦ ಎಕ್ರೆಯಷ್ಟು ವಿಸ್ತಾರವಾದ ಪಿಲಿಕುಳ ಪ್ರದೇಶವು ಕೆಂಪು ಕಲ್ಲು ಮತ್ತು ಮುಳಿ ಹುಲ್ಲಿಗೆ ಪ್ರಸಿದ್ಧಿಯಾಗಿತ್ತು. ಇಲ್ಲಿನ ಕೋರೆಗಳಿಂದ ತೆಗೆಯಲಾದ ಲಕ್ಷಾಂತರ ಕೆಂಪು ಕಲ್ಲುಗಳು ಮಂಗಳೂರು ಮತ್ತು ನೆರೆಯ ಜಿಲ್ಲೆಗಳಿಗೆ ರಫ್ತಾಗಿತ್ತು. ಸರ್ಕಾರದ ಜಾಗವಾಗಿದ್ದ ಇಲ್ಲಿ ಸಾಕಷ್ಟು ಅರಣ್ಯ ಮರಗಳು ಬೆಳೆದಿದ್ದವು. ೧೯೫೫ರ ಸುಮಾರಿಗೆ ಇಲ್ಲೇ ಹತ್ತಿರದ ಮೂಡುಶೆಡ್ಡೆಯಲ್ಲಿ ಸರ್ಕಾರಿ ಕ್ಷಯ ರೋಗ ಚಿಕಿತ್ಸಾ ಆಸ್ಪತ್ರೆ ಸ್ಥಾಪನೆಯಾದ ಬಳಿಕ ಸುತ್ತಮುತ್ತ ಸುಮಾರು ಐದಾರು ಕಿಮೀ ಅಂತರದಲ್ಲಿ ಯಾವೊಂದು ಮನೆಯೂ ಇರಲಿಲ್ಲ. ಸುತ್ತಲ ನೀರು ಸೇರುವ ಜಾಗವೇ ಪಿಲಿಕುಳವಾಗಿದ್ದು, ಇದಕ್ಕೆ ಮದಗ'ಎನ್ನಲಾಗುತ್ತಿತ್ತು. ಇದರ ನೀರು ದೂರದ ಕೃಷಿಗೆ ಹರಿಯುತ್ತಿತ್ತು. ಈಗ ಪ್ರವಾಸಿಗರ ತಾಣವಾಗಿ ಮಾರ್ಪಟ್ಟಿರುವ ಪಿಲಿಕುಳ ಸರೋವರ ಅಥವಾ
ಮದಗ’ ಸುಮಾರು ೧೦ ಎಕ್ರೆ ಪ್ರದೇಶದಲ್ಲಿ ವ್ಯಾಪಿಸಿಕೊಂಡಿದೆ. ಆಳವಾದ ಈ ಕೆರೆಯಲ್ಲಿ ಸಾಕಷ್ಟು ಕೆಸರು ತುಂಬಿಕೊಂಡಿತ್ತು.
೧೯೯೭ರ ಹೊತ್ತಿಗೆ ದಕ್ಷಿಣ ಕನ್ನಡ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ಆಗಮಿಸಿದ್ದ ಭರತ್‌ಲಾಲ್ ಮೀನಾ ಅವರೊಂದಿಗೆ ಆಗಿನ ಸಹಾಯಕ ಆಯುಕ್ತ ಜೆ. ಆರ್. ಲೋಬೊ ಮತ್ತು ಪ್ರಸಕ್ತ ನಿಸರ್ಗ ಧಾಮದ ನಿರ್ದೇಶಕರಾಗಿರುವ ಜಯಪ್ರಕಾಶ ಭಂಡಾರಿ ಚರ್ಚಿಸಿ ಪಿಲಿಕುಳ ನಿಸರ್ಗ ಧಾಮ ಸ್ಥಾಪಿಸುವ ಯೋಜನೆ ರೂಪಿಸಿದರು. ನಂತರದ ದಿನಗಳಲ್ಲಿ ಸರ್ಕಾರದ ವತಿಯಿಂದ ಇಲ್ಲೊಂದು ಪ್ರಾಣಿ ಸಂಗ್ರಹಾಲಯ ಸ್ಥಾಪಿಸುವ ಪ್ರಯತ್ನ ನಡೆದಿದ್ದರೂ ಅದು ವಿಫಲಗೊಂಡಿತ್ತು.
೧೯೯೭ರ ಬಳಿಕ ಇಲ್ಲಿ ಸರ್ಕಾರದ ಅನುದಾನವಿಲ್ಲದೆ ಸಣ್ಣ ಪ್ರಮಾಣದ ಪ್ರಾಣಿ ಸಂಗ್ರಹಾಲಯ ಸ್ಥಾಪಿಸಲಾಯಿತು. ಆ ಹೊತ್ತಿಗಾಗಲೇ ಮುಚ್ಚಲ್ಪಟ್ಟ ಕದ್ರಿ ಪ್ರಾಣಿ ಸಂಗ್ರಹಾಲಯದಿಂದ ಇಲ್ಲಿಗೆ ಜಿಂಕೆ, ಕಡವೆ ಮೊದಲಾದ ಸಣ್ಣ ಪ್ರಾಣಿಗಳನ್ನು ತರಲಾಯಿತು. ನಂತರದ ವರ್ಷಗಳಲ್ಲಿ ಪಿಲಿಕುಳ ನಿಸರ್ಗ ಧಾಮದಲ್ಲಿ ಪ್ರವಾಸೋದ್ಯಮಕ್ಕೆ ಸಂಬಂಧಿಸಿ ಅನೇಕ ಅಭಿವೃದ್ಧಿ ಕೆಲಸಗಳು ನಡೆದಿವೆ. ಇದೇ ಹೊತ್ತಿಗೆ ಪಿಲಿಕುಳ ಕೆರೆ ಅಭಿವೃದ್ಧಿಪಡಿಸಿ, ಇಲ್ಲಿನ ಮಣ್ಣು ಮತ್ತು ಕೆಸರನ್ನು ಹತ್ತಿರದಲ್ಲಿದ್ದ ಕಲ್ಲಿನ ಕೋರೆಗಳ ಗುಂಡಿ ಮುಚ್ಚಲಾಯಿತು.
೧೨೫ ಮನೆಗಳ ಸ್ಥಳಾಂತರಿಸಲಾಗಿತ್ತು. ಗಾಳಿ ಮತ್ತು ಅಕೇಶಿಯಾ ಮರಗಳನ್ನು ಕಡಿದು, ಪಶ್ಚಿಮ ಘಟ್ಟದ ಮರಗಳನ್ನು ನೆಡಲಾಯಿತು. ಹೀಗೆ ಸಂಪೂರ್ಣ ಕಾಡಿವ ವಾತಾವರಣದಲ್ಲಿ ಬೃಹತ್ ಪಿಲಿಕುಳ ಪ್ರಾಣಿ ಸಂಗ್ರಹಾಲಯ(ಝೂ) ಮತ್ತು ಕೆರೆ ಅಭಿವೃದ್ಧಿಪಡಿಸಲಾಯಿತು.
ಅಚ್ಚರಿಯ ಸಂಗತಿಯೆಂದರೆ, ಈಗ ಸ್ಥಾಪನೆಯಾಗಿರುವ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದಡಿ ಪ್ರಾಣಿ ಸಂಗ್ರಹಾಲಯ ಮತ್ತು ಪಿಲಿಕುಳ ಬೋಟಿಂಗ್ ಕೆರೆ ಒಳಪಟ್ಟಿದ್ದರೂ, ಇದಕ್ಕೆ ಸರ್ಕಾರದಿಂದ ಯಾವುದೇ ಅನುದಾನ ಸಿಗುವುದಿಲ್ಲ. ಇದು ಸಂಪೂರ್ಣವಾಗಿ ಸಾರ್ವಜನಿಕ ಸಂಸ್ಥೆಗಳ ಎಸ್‌ಆರ್‌ಎಸ್ ನಿಧಿ ಹಾಗೂ ದಾನಿಗಳ ನೆರವು ಅವಲಂಬಿಸಿದೆ. ಇಲ್ಲಿ ಪ್ರಾಣಿ-ಪಕ್ಷಿಗಳ ಯೋಗ ಕ್ಷೇಮ ನೋಡಿಕೊಳ್ಳಲು ಪಶು ಆಸ್ಪತ್ರೆ, ವೈದ್ಯರು ಇದ್ದಾರೆ. ೨೦೦೧ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರು ಪಿಲಿಕುಳ ನಿಸರ್ಗ ಧಾಮ ಉದ್ಘಾಟಿಸಿದ್ದರು.
ಮಾಜಿ ರಾಷ್ಟ್ರಪತಿ ದಿ. ಎಪಿಜೆ ಕಲಾಂ ಸಹಿತ ಅನೇಕ ಗಣ್ಯಾತಿಗಣ್ಯರು ಭೇಟಿ ನೀಡಿ ನಿಸರ್ಗಧಾಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಾಣಿಗಳ ಓಡಾಟಕ್ಕೆ ಯಥೇಚ್ಛ ಸ್ಥಳಾವಕಾಶವಿದೆ. ಸಿಂಹ, ಹುಲಿಗಳ ವಿಹಾರಕ್ಕೆ ಪ್ರತ್ಯೇಕ ಕಾಡಿನ ವಾತಾವರಣವಿದೆ. ಇತ್ತೀಚಿನ ವರ್ಷಗಳಲ್ಲಿ ಪಿಲಿಕುಳದಲ್ಲಿ ಗುತ್ತಿನ ಮನೆ, ವಿಜ್ಞಾನ ಕೇಂದ್ರ(ಪ್ಲಾನಿಟೋರಿಯಂ), ಬಾಟೊನಿಕಲ್ ಗಾರ್ಡನ್, ಮಾನಸ ವಾಟರ್ ಪಾರ್ಕ್ನಂತಹ ಹತ್ತು ಹಲವು ಪ್ರವಾಸಿಗ ರ ಆಕರ್ಷಣೆಯ ಕೇಂದ್ರಗಳು ಸ್ಥಾಪನೆಯಾಗಿವೆ.
ಕೆಲವು ಸಮಯದ ಇಲ್ಲಿನ ಪ್ರಾಣಿ ಸಂಗ್ರಹಾಲಯದಲ್ಲಿ ದೇಶದಲ್ಲೇ ಪ್ರಥಮ ಬಾರಿಗೆ ವೈಜ್ಞಾನಿಕ ಮಾದರಿಯಲ್ಲಿ ಕಾಳಿಂಗ ಸರ್ಪದ ಸಂತಾನೋತ್ಪತ್ತಿ ಮಾಡಲಾಗಿದೆ. ಇಲ್ಲಿ ೧೦೦ಕ್ಕೂ ಹೆಚ್ಚು ಕಾಳಿಂಗ ಸರ್ಪಗಳಿವೆ. ಇಲ್ಲಿ ತಿರುಗಾಡುವ ಸಿಂಹ, ಹುಲಿ, ಬಿಳಿ ಹುಲಿ, ಚಿರತೆ, ಕಾಡು ತೋಳ, ನರಿ, ಮುಂಗುಸಿ, ಬ್ಲಾಕ್ ಬಕ್, ಬಾರ್ಕಿಂಗ್ ಡೀರ್, ನೀರಾನೆ, ಮೊಸಳೆ, ಕಾಡುಕೋಣ, ಜಾಯಿಂಟ್ ಸ್ಕ್ಟೆರೆಲ್, ಹಾರುವ ಅಳಿಲು, ಹೈಮನ್ ಲಾಂಗೂರ್, ಜಿಂಕೆ, ಮೊಲ, ನೂರಾರು ಜಾತಿಯ ಸರ್ಪಗಳು, ಬಿಳಿ ನವಿಲಿನ ಸಹಿತ ಸುಮಾರು ೭೦ ಬಗೆಯ ಬಣ್ಣಬಣ್ಣದ ಮನಮೋಹಕ ಹಕ್ಕಿಗಳು ಪ್ರವಾಸಿಗರಿಗೆ ಮುದ ನೀಡದೆ ಇರದು.
ಪಿಲಿಕುಳ ನಿಸರ್ಗ ಧಾಮಕ್ಕೆ ದೇಶದ ವಿವಿಧ ಪ್ರಾಣಿ ಸಂಗ್ರಹಾಲಯಗಳಿಂದ ಪ್ರಾಣಿ ವಿನಿಮಯ ನಿಯಮದಡಿ ಪ್ರಾಣಿ, ಪಕ್ಷಿಗಳ ಆಮದು ಮಾಡಿಕೊಳ್ಳಲಾಗುತ್ತದೆ. ಇಲ್ಲಿಂದ ಸರ್ಪಗಳನ್ನು ರಫ್ತು ಮಾಡಲಾಗುತ್ತದೆ. ಸದ್ಯೋಭವಿಷ್ಯದಲ್ಲಿ ಇಲ್ಲಿಗೆ ವಿದೇಶಗಳಿಂದ ಝೀಬ್ರಾ, ಜಿರಾಫೆ, ಒರಂಗುಟನ್, ಚಿಂಪಾಂಜಿ ಬರಲಿದೆ.
ಬಾಕ್ಸ್ :-
೧೯೯೭ರಲ್ಲಿ, ಅಂದಿನ ಜಿಲ್ಲಾಧಿಕಾರಿ ಭರತ್‌ಲಾಲ್ ಮೀನಾ ಅವರ ಉಪಸ್ಥಿತಿಯಲ್ಲಿ ಪಿಲಿಕುಳ ನಿಸರ್ಗಧಾಮಕ್ಕೆ ಶಂಕುಸ್ಥಾಪನೆಯಾಗಿತ್ತು. ಪಿಲಿಕುಳ ಬಯೋಲಾಜಿಕಲ್ ಪಾರ್ಕ್ ಪ್ರವಾಸಿಗರಿಗೆ ಮುಕ್ತ ಸೆ.12ರಂದು ಪ್ರವಾಸಿಗರಿಗೆ ತೆರೆದುಕೊಂಡಿತ್ತು. ಇಲ್ಲಿ ಈಗ ಹುಲಿ-೧೧, ಬಿಳಿ ಹುಲಿ-೧, ಕರಡಿ-೨, ಕೃಷ್ಣಮೃಗ-೪೮, ಹಿಪೋಪೊಟಮಸ್-೪, ಹೈನಾ-೬, ಸಿಂಹ-೨, ರಿಯಾ ಪಕ್ಷಿ-೪, ನವಿಲು-೪, ಬಿಳಿ ನವಿಲು-೪, ಕಾಳಿಂಗ ಸರ್ಪ-೩೨, ರಿಟಿಕ್ಯುಲೇಟೆಡ್ ಪೈಥಾನ್-೨೩, ಮೊಸಳೆ-೨೬, ಇಗ್ವಾನ-೩, ಉಷ್ಟçಪಕ್ಷಿ-೩. ನೀರುನಾಯಿ, ಕಡವೆ, ಜಿಂಕೆ, ಮುಂಗುಸಿ,….ಹೀಗೆ ಇನ್ನೂ ಅನೇಕ ಪ್ರಾಣಿ-ಪಕ್ಷಿಗಳಿವೆ.
‘ಪಿಲಿಕುಳ ನಿಸರ್ಗ ಧಾಮ ಸ್ಥಾಪನೆಯ ಹಿಂದೆ ಭರತ್‌ಲಾಲ್ ಮೀನಾ, ಐಪಿಎಸ್ ಅಧಿಕಾರಿ ಪುಷ್ಪಕುಮಾರ್, ಮಂಗಳೂರಿನ ಮತ್ತೋರ್ವ ಡೀಸಿ ಬಿ. ಎಚ್. ಅನಿಲ್ ಕುಮಾರ್, ಸಹಾಯಕ ಆಯುಕ್ತ ಜೆ ಆರ್ ಲೋಬೊ ಹಾಗೂ ಇತರ ಕೆಲವರ ಪ್ರಯತ್ನ ಮತ್ತು ಸಹಕಾರ ಯಾವತ್ತೂ ಮರೆಯಲು ಸಾಧ್ಯವಿಲ್ಲ. ಕಳೆದ ೨೫ ವರ್ಷಗಳಲ್ಲಿ ಪಿಲಿಕುಳ ಪ್ರಾಣಿ ಸಂಗ್ರಹಾಲಯ ಮತ್ತು ಬೋಟಿಂಗ್ ಕೆರೆ ದೇಶದಲ್ಲೇ ಮಾದರಿ ಪ್ರವಾಸಿ ಕೇಂದ್ರವಾಗಿ ಮೂಡಿ ಬರುವಲ್ಲಿ ಪ್ರವಾಸಿಗರ ಪಾತ್ರ ಸಾಕಷ್ಟಿದೆ.
ಮುಂದಿನ ದಿನಗಳಲ್ಲಿ ಇಲ್ಲಿ ಇನ್ನೂ ಅನೇಕ ಪ್ರವಾಸಿ ಆಕರ್ಷಣೆಯ ವ್ಯವಸ್ಥೆ ಅನುಷ್ಠಾನಗೊಳಿಸುವ ಯೋಜನೆ, ಯೋಜನೆ ಇದ್ದು, ಪಿಲಿಕುಳ ನಿಸರ್ಗ ಧಾಮ ಯಾವತ್ತೂ ಸರ್ಕಾರದ ಅನುದಾನ ನಿರೀಕ್ಷಿಸುತ್ತಿದೆ. ರಜತ ಮಹೋತ್ಸವದ ಅಂಗವಾಗಿ ಮುಂದಿನ ವಾರ ಪಿಲಿಕುಳದಲ್ಲಿ ಪ್ರವಾಸಿಗರ ಆಕರ್ಷಣೆಗಾಗಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ” ಎಂದು ಡಾ. ಶಿವರಾಮ ಕಾರಂತ ಪಿಲಿಕುಳದ ಡಾ. ಶಿವರಾಮ ಕಾರಂತ ನಿಸರ್ಗ ಧಾಮದ ನಿರ್ದೇಶಕ ಜಯಪ್ರಕಾಶ್ ಭಂಡಾರಿ ತಿಳಿಸಿದರು.