ಬೆಂಗಳೂರಿನ ಕೆಟ್ಟ ಪರಿಸ್ಥಿತಿಗೆ ಬಿಜೆಪಿಯೇ ಕಾರಣ: ಸಿದ್ದರಾಮಯ್ಯ ಕಿಡಿ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೋಟ್‌ನಲ್ಲಿ (Boat) ಓಡಾಡುವ ಪರಿಸ್ಥಿತಿ ಯಾವತ್ತೂ ನಿರ್ಮಾಣ ಆಗಿರಲಿಲ್ಲ. ಇಂತಹ ಕೆಟ್ಟ ಪರಿಸ್ಥಿತಿ ನಿರ್ಮಾಣ ಆಗಲು ಬಿಜೆಪಿ (BJP) ಸರ್ಕಾರವೇ ಕಾರಣ ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಕಿಡಿಕಾರಿದ್ದಾರೆ.
ಕೆಪಿಸಿಸಿ (KPCC) ಬ್ರಾಂಡ್ ಬೆಂಗಳೂರು ಸಂಬಂಧ ಕಾಂಗ್ರೆಸ್ (Congress) ನಾಯಕರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರವಾಹಕ್ಕೆ ಮುಖ್ಯ ಕಾರಣ ಒಂದು ಕೆರೆಯಿಂದ ಮತ್ತೊಂದು ಕೆರೆಗೆ ಸಂಪರ್ಕ ಇಲ್ಲದೇ ಇರೋದು. ಕೆರೆಯಲ್ಲಿ ಹೂಳು ಎತ್ತದೇ, ರಾಜಕಾಲುವೆ ಒತ್ತುವರಿ ತೆರವು ಮಾಡದೇ ಇರೋದು ಎಂದು ಹೇಳಿದ್ದಾರೆ
1,953 ರಾಜಕಾಲುವೆ ಒತ್ತುವರಿಯಲ್ಲಿ 1,300 ಒತ್ತುವರಿಯನ್ನ ನಮ್ಮ ಸರ್ಕಾರ ತೆರವುಗೊಳಿಸಿದೆ. ಬಳಿಕ ಬಿಜೆಪಿ ಅಧಿಕಾರಕ್ಕೆ ಬಂತು. 3 ವರ್ಷಗಳಾದರೂ ಉಳಿದ 653 ರಾಜಕಾಲುವೆ ಒತ್ತುವರಿ ತೆರವು ಮಾಡಿಲ್ಲ. ಬೊಮ್ಮನಹಳ್ಳಿ, ಮಹದೇವಪುರ, ಕೆ.ಆರ್ ಪುರಂ, ಸಿವಿ ರಾಮನ್ ಅವರ ಕ್ಷೇತ್ರದಲ್ಲಿ ಬಿಜೆಪಿ ಶಾಸಕರೇ ಇದ್ದರೂ, ನಮ್ಮ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡ್ತಿದ್ದಾರೆ. ಬೆಂಗಳೂರಿನಲ್ಲಿ ಮೂರು ಜನ ಸಂಸದರು ಬಿಜೆಪಿಯವರೇ ಇದ್ದರೂ ಬೋಟ್‌ನಲ್ಲಿ ಓಡಾಡುವ ಪರಿಸ್ಥಿತಿ ತಂದಿಟ್ಟಿದ್ದಾರೆ ಬೆಂಗಳೂರಿನ (Bengaluru) ಜನರೇ ಸರ್ಕಾರಕ್ಕೆ ಬುದ್ಧಿ ಕಲಿಸುತ್ತಾರೆ ಎಂದು ಎಚ್ಚರಿಸಿದ್ದಾರೆ.
ನಿನ್ನೆ ಪ್ರವಾಹ ಪೀಡಿತ 10-12 ಪ್ರದೇಶಗಳಿಗೆ ಭೇಟಿ ನೀಡಿದ್ದೆ. ಅನೇಕ ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ಜನರ ವಾಸಕ್ಕೂ ಕಷ್ಟವಾಗಿದೆ. ಅವೆಲ್ಲವೂ ಶ್ರೀಮಂತರು ಇರುವ ಪ್ರದೇಶಗಳು. ಆದರೂ ಮನೆಗಳಲ್ಲಿ ಒಬ್ಬರೂ ಇಲ್ಲ. ಬೆಂಗಳೂರಿನ ಇತಿಹಾಸದಲ್ಲೇ ಇಂತಹ ಪರಿಸ್ಥಿತಿ ಬಂದಿರಲಿಲ್ಲ ಎಂದು ವಿಷಾದಿಸಿದ್ದಾರೆ.
ಇಂದಿನ ಅನಾಹುತಗಳಿಗೆ ಹಿಂದಿನ ಸರ್ಕಾರವೇ ಕಾರಣ ಎಂದು ಸಿಎಂ ಬೊಮ್ಮಾಯಿ ಸುಮ್ಮನೇ ಆರೋಪ ಮಾಡ್ತಿದ್ದಾರೆ. ಬಿಜೆಪಿ ಸರ್ಕಾರ ಬಂದು ಮೂರು ವರ್ಷ ಆಗಿದೆ. ಮಳೆ ಎದುರಿಸಲು ಸರ್ಕಾರ ಏನು ಕ್ರಮ ತೆಗೆದುಕೊಂಡಿದೆ ಎಂಬುದನ್ನು ಹೇಳಲಿ. ಪ್ರವಾಹ ಬಂದ ಕ್ಷೇತ್ರದಲ್ಲಿ ಬಿಜೆಪಿ ಶಾಸಕರೇ ಇದ್ದಾರೆ. ಅರವಿಂದ್ ಲಿಂಬಾವಳಿ, ಸತೀಶ್ ರೆಡ್ಡಿ, ಬೈರತಿ ಬಸವರಾಜ್, ಎಸ್.ರಘು ಎಲ್ಲರೂ ಬಿಜೆಪಿ ಶಾಸಕರೆಲ್ಲ ಏನು ಮಾಡ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ರಾಜಕಾಲುವೆ ಒತ್ತುವರಿ ತೆರವು ಮುಂದುವರಿಸಿದ್ರೆ ಸಮಸ್ಯೆ ಆಗುತ್ತಿರಲಿಲ್ಲ. ಬಿಬಿಎಂಪಿ (BBMP) ನೋಡಿದ್ರೆ ನಮ್ಮ ವ್ಯಾಪ್ತಿಗೆ ಬರೋದಿಲ್ಲ ಎಂದು ಹೇಳ್ತಿದೆ. ಬೆಸ್ಕಾಂನವರು ಪರಿಹಾರ ಕೊಡ್ಬೇಕು ಅಂತಾ ಹೇಳ್ತಿದ್ದಾರೆ. ಇಂತಹ ಪರಿಸ್ಥಿತಿಗೆ ಬಿಜೆಪಿಯವರೇ ನೇರ ಕಾರಣ. ಈ ಬಗ್ಗೆ ಸರ್ಕಾರ ಶ್ವೇತ್ರ ಪತ್ರ ಹೊರಡಿಸಲಿ, ನಾನು ಸದನದಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡುತ್ತೇನೆ. ಮಳೆ ಬಂದು ವಾಹನಗಳು ಹಾಳಾಗಿದ್ದರೂ ಪರಿಹಾರ ನೀಡಿಲ್ಲ. ಕೆಲವರು ಹೋಟೆಲ್‌ಗಳಲ್ಲಿ ಉಳಿದುಕೊಂಡಿದ್ದಾರೆ. ಎಲ್ಲರೂ ಶ್ರೀಮಂತರೇ ಆಗಿರೋದಿಲ್ಲ. ಎಲ್ಲದಕ್ಕು ಹಣ ಎಲ್ಲಿಂದ ತರ್ತಾರೆ ಈ ಎಲ್ಲ ವಿಚಾರಗಳನ್ನ ಸದನದಲ್ಲಿ ಪ್ರಸ್ತಾಪ ಮಾಡ್ತೇವೆ. ಸದನದ ಒಳಗು-ಹೊರಗೂ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.