Published On: Mon, Sep 5th, 2022

ಮಂಗಳೂರು ತಾಲೂಕು ಬಿಲ್ಲವ ಸಂಘ(ರಿ) ಉದ್ಘಾಟನೆ, ಸಂಘವು ನಾರಾಯಣ ಗುರುಗಳ ತತ್ವದಡಿ ಕಾರ್ಯಪ್ರವೃತ್ತವಾಗಲಿ : ಜನಾರ್ದನ ಪೂಜಾರಿ

ಮಂಗಳೂರು : ತಾಲೂಕು ವ್ಯಾಪ್ತಿಯ ಎಲ್ಲ ಬಿಲ್ಲವ ಸಂಘಗಳಿಗೆ ಮಾತೃ ಸಂಘವಾಗಿ ರೂಪುಗೊಂಡಿರುವ ಮಂಗಳೂರು ತಾಲೂಕು ಬಿಲ್ಲವ ಸಂಘವನ್ನು ಬಿಲ್ಲವ ಮುಖಂಡ, ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರು ದೀಪ ಬೆಳಗಿಸಿ ವಿದ್ಯುಕ್ತವಾಗಿ ಉದ್ಘಾಟಿಸಿದರು.

ಮಂಗಳೂರಿನ ಕುದ್ರೋಳಿಯ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದ ಶ್ರೀ ಕೊರಗಪ್ಪ ಸ್ಮಾರಕ ಸಭಾಭವನದಲ್ಲಿ ಸೆ.04ರಂದು ಭಾನುವಾರ ಆಯೋಜಿಸಲಾದ ಕಾರ್ಯಕ್ರಮ ಉದ್ಘಾಟಿಸಿದ ಜನಾರ್ದನ ಪೂಜಾರಿ ಮಾತನಾಡಿ, ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಉದ್ಘಾಟನೆಗೊಂಡಿರುವ ಈ ಸಂಘವು ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶ ಮತ್ತು ತತ್ವದಡಿ ಕೆಲಸ ಮಾಡುತ್ತ, ಬಿಲ್ಲವ ಸಮಾಜ ಆಶೋತ್ತರಗಳಿಗೆ ಧ್ವನಿಯಾಗಬೇಕು. ಇದಕ್ಕೆ ಇಲ್ಲಿನ ದೇವರ ಅನುಗ್ರಹ ಹಾಗೂ ಸಮಾಜ ಬಾಂಧವರ ಸಹಕಾರವಿರಲಿ ಎಂದು ಆಶಿಸಿದರು.

ಕಿಯೋನಿಕ್ಸ್ ಸಂಸ್ಥೆಯ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಮಾತನಾಡಿ, ಸಮಾಜದ ಪ್ರಗತಿಗೆ ಜಾತಿಗಿಂತಲೂ ಮಿಗಿಲಾದ ಸಾಧನೆ, ಪ್ರತಿಭೆ ಮತ್ತು ನಾಯಕತ್ವ ಗುಣ ಮುಖ್ಯ. ಕಣ್ಣಿಗೆ ಕಾಣುವ ದೇವರಾಗಿರುವ ಜನಾರ್ದನ ಪೂಜಾರಿಯವರ ಆಶಯದಂತೆ ನಾವೆಲ್ಲರೂ ಬಿಲ್ಲವ ಸಮಾಜದ ಏಳ್ಗೆಗೆ ಒಗ್ಗೂಡಿ ಕೆಲಸ ಮಾಡುವ ಸಮಯ ಬಂದಿದೆ ಎಂದರು.

ಎಸ್‌ಎನ್‌ಡಿಪಿ ರಾಜ್ಯ ಅಧ್ಯಕ್ಷ(ಬೆಂಗಳೂರು) ಸೈದಪ್ಪ ಗುತ್ತೇದಾರ್ ಮಾತನಾಡಿ, ನೂತನ ಸಂಘವು ಪ್ರಸ್ತುತ ಬಿಲ್ಲವ ಸಮಾಜದ ಸ್ಥಿತಿಗತಿ ಅರಿತುಕೊಂಡು, ಎಲ್ಲರೊಂದಿಗೆ ಒಂದಾಗಿ ಸಮಾಜದ ಪ್ರಗತಿಗಾಗಿ ಕೆಲಸ ಮಾಡಬೇಕು. ಬೇರೆಯವರು ನಮ್ಮ ಬಗ್ಗೆ ಹಗುರವಾಗಿ ಮಾತನಾಡಿದಾಗ ಸಮಾಜ ಬಾಂಧವರು ಒಕ್ಕೊರಲಿನಿಂದ ಧ್ವನಿ ಎತ್ತಬೇಕು. ಶಿಕ್ಷಣ, ಧರ್ಮ, ರಾಜಕೀಯ, ಆರ್ಥಿಕತೆ ಮತ್ತಿತರ ಕ್ಷೇತ್ರಗಳಲ್ಲಿ ನಾವು ನಾಯಕತ್ವ ಪಡೆಯುವವರಾಗಬೇಕು ಎಂದರು.

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ರವಿಶಂಕರ್ ಮಿಜಾರ್ ಮಾತನಾಡಿ, ನಮ್ಮ ಸಮಾಜಕ್ಕೆ ಸರ್ಕಾರದಿಂದ ಸಿಗುವ ಸವಲತ್ತುಗಳ ಮಾಹಿತಿ ನೀಡುವ ಹಾಗೂ ಫಲಾನುಭವಿ ಕುಟುಂಬಗಳಿಗೆ ಅವು ತಲುಪುವ ನಿಟ್ಟಿನಲ್ಲಿ ಸಂಘ ಕೆಲಸ ಮಾಡುವ ಅಗತ್ಯವಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಜಿತೇಂದ್ರ ಜೆ. ಸುವರ್ಣ ಮಾತನಾಡಿ, ತಾಲೂಕು ವ್ಯಾಪ್ತಿಯ ಎಲ್ಲ ಬಿಲ್ಲವ ಸಂಘಗಳನ್ನು ಒಂದೇ ಛತ್ರದಡಿ ತಂದು, ಸಮಾಜದ ಆಮೂಲಾಗ್ರ ಪ್ರಗತಿಗೆ ಶ್ರಮಿಸುವುದು ಸಂಘದ ಗುರಿಯಾಗಿದೆ. ಎಲ್ಲ ಸಂಘಗಳ ಕಷ್ಟ ಹಾಗೂ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಶ್ರಮಿಸುವುದು, ಧರ್ಮ ಶಿಕ್ಷಣದ ಬುನಾದಿಯೊಂದಿಗೆ ನಮ್ಮ ಯುವ ಪೀಳಿಗೆಯನ್ನು ಸಮಾಜದ ಮುಖ್ಯ ವಾಹಿನಿಗೆ ಕರೆತರುವ ಉದ್ದೇಶ ಸಂಘ ಹೊಂದಿದೆ ಎಂದರು.

`ನಮ್ಮ ಕುಡ್ಲ’ದ ನಿರ್ದೇಶಕ ಲೀಲಾಕ್ಷ ಕರ್ಕೇರ, ದ.ಕ ಜಿಲ್ಲಾ ಮಹಿಳಾ ಒಕ್ಕೂಟದ ಅಧ್ಯಕ್ಷೆ ಚಂಚಲಾ ತೇಜೋಮಯ, ಜನತಾ ದಳ ಯುವ ನಾಯಕ ಅಕ್ಷಿತ್ ಸುವರ್ಣ, ತುಳು ವಿದ್ವಾಂಸ ಡಾ. ಗಣೇಶ್ ಅಮೀನ್ ಸಂಕಮಾರ್, ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದ ಅಧ್ಯಕ್ಷ ಸಾಯಿರಾಮ್, ವಿಟ್ಲ ಕ್ಷೇತ್ರದ ಮಾಜಿ ಶಾಸಕ ರುಕ್ಮಯ ಪೂಜಾರಿ, ಬಿಲ್ಲವ ಮಹಾಮಂಡಲ ಅಧ್ಯಕ್ಷ ರಾಜಶೇಖರ ಕೋಟ್ಯಾನ್, ಯುವವಾಹಿನಿ(ರಿ) ಕೇಂದ್ರ ಸಮಿತಿ ಅಧ್ಯಕ್ಷ ಉದಯ ಅಮೀನ್ ಮಟ್ಟು ಮಾತನಾಡಿದರು.

ಎಂಎಲ್‌ಸಿ ಹರೀಶ್ ಕುಮಾರ್, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಬಿಲ್ಲವ ಪ್ರಮುಖರಾದ ಎಂ. ರಾಮಚಂದ್ರಪ್ಪ, ಚಿತ್ತರಂಜನ್ ಬೋಳಾರ್, ಮಾಧವ ಸುವರ್ಣ, ಟಿ. ನಾರಾಯಣ ಪೂಜಾರಿ, ಸುರೇಶ್‌ಚಂದರ್ ಕೋಟ್ಯಾನ್, ಸಂಘದ ಗೌರವಾಧ್ಯಕ್ಷ ರಂಜನ್ ಮಿಜಾರ್, ಪಾರ್ವತಿ ಅಂಚನ್, ಗಣೇಶ್ ಪೂಜಾರಿ, ಸುರೇಶ್ ಪೂಜಾರಿ, ಶೇಖರ ಪೂಜಾರಿ, ಬಿ. ಪಿ. ದಿವಾಕರ್, ಪದ್ಮನಾಭ ಕೋಟ್ಯಾನ್(ಬಿಎಲ್‌ಪಿ), ತುಕಾರಾಮ ಪೂಜಾರಿ, ಉಮಾ ಶ್ರೀಕಾಂತ್, ರವಿಕಲಾ, ಅಶೋಕ್, ಟಿ. ಶಂಕರ್ ಸುವರ್ಣ, ಸಾಧು ಪೂಜಾರಿ ಹಾಗೂ ಸಂಘದ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸಂಘದ ಪ್ರಧಾನ ಕಾರ್ಯದರ್ಶಿ ಲೋಕನಾಥ ಪೂಜಾರಿ ಸ್ವಾಗತಿಸಿದರು. ಕೋಶಾಧಿಕಾರಿ ಪುರುಷೋತ್ತಮ ಪೂಜಾರಿ ಪ್ರಸ್ತಾವಿಕ ಮಾತನಾಡಿದರು. ದಿನೇಶ್ ಸುವರ್ಣ ರಾಯಿ ನಿರೂಪಿಸಿದರೆ, ಸಂಘದ ಸಲಹೆಗಾರ ಚರಣ್ ಕೆ ವಂದಿಸಿದರು. ಈ ಸಂದರ್ಭದಲ್ಲಿ ತಾಲೂಕು ವ್ಯಾಪ್ತಿಯಿಂದ ಆಗಮಿಸಿದ ಬಿಲ್ಲವ ಸಮಾಜ ಸೇವಾ ಸಂಘಗಳು ಹಾಗೂ ಬಿಲ್ಲವ ಸಂಘಟನೆಗಳ ಪದಾಧಿಕಾರಿಗಳನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter