ಮುರುಘಾಶ್ರೀ ಪೋಕ್ಸೊ ಪ್ರಕರಣದಲ್ಲಿ ಸರ್ಕಾರ ಎಂಟ್ರಿ ಕೊಡಲ್ಲ: ಆರ್.ಅಶೋಕ್
ಬೆಂಗಳೂರು: ಮುರುಘಾ ಶರಣರ ಪೋಕ್ಸೊ ಪ್ರಕರಣದಲ್ಲಿ ಸರ್ಕಾರ ಎಂಟ್ರಿ ಕೊಡುವುದಿಲ್ಲ ಎಂದು ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ಮುರುಘಾ ಶ್ರೀಗಳ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಠಗಳ ಬಗ್ಗೆ ಗೌರವ ಇರುತ್ತೆ. ಮಠಗಳಲ್ಲಿ ಈ ರೀತಿ ಆಗಬಾರದು. ಕಾನೂನು ಪ್ರಕಾರ ಪೊಲೀಸರು ಕೆಲಸ ಮಾಡುತ್ತಾರೆ. ಕಾನೂನಿನಿಂದ ಏನು ಕ್ರಮ ಕೈಗೊಳ್ಳಬೇಕು ಕೈಗೊಳ್ಳಲಾಗುತ್ತೆ. ಇದರಲ್ಲಿ ಸರ್ಕಾರ ಎಂಟ್ರಿ ಕೊಡುವುದಿಲ್ಲ ಎಂದು ಹೇಳಿದ್ದಾರೆ.
ಕಾನೂನು ತನ್ನದೇ ಆದ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿದೆ. ಈ ನೆಲದ ಕಾನೂನು ಏನಿದೆಯೋ ಅದನ್ನ ಸರ್ಕಾರ ಪಾಲನೆ ಮಾಡಲಿದೆ. ಪೊಲೀಸರು ಕಾನೂನಿನ ಅಡಿಯಲ್ಲಿ ಕೆಲಸ ಮಾಡಲಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ಪ್ರಧಾನಿ ಭೇಟಿ ಕುರಿತು ಪ್ರತಿಕ್ರಿಯಿಸಿದ ಸಚಿವರು, ಪ್ರಧಾನಿ ಮೋದಿ ಮಂಗಳೂರಿಗೆ ಬರುತ್ತಾರೆ. ಸರ್ಕಾರಿ ಕಾರ್ಯಕ್ರಮ ಉದ್ಘಾಟನೆ ಮಾಡುತ್ತಾರೆ. ನಾನೂ, ಸಿಎಂ, ಯಡಿಯೂರಪ್ಪ ಅವರು ಸ್ಪೆಷಲ್ ಫ್ಲೈಟ್ ನಲ್ಲಿ ಹೋಗುತ್ತಿದ್ದೇವೆ. ಕರ್ನಾಟಕದಲ್ಲಿ ಹೊಸ ಹೊಸ ಯೋಜನೆಗಳು ಬರುತ್ತಿವೆ. ಪ್ರಧಾನ ಮಂತ್ರಿಗಳು ಬರ್ತಿರೋದು ಖುಷಿ ವಿಚಾರ. ಅವರ ಜೊತೆ ಕರ್ನಾಟಕ ರಾಜಕೀಯ ಬೆಳವಣಿಗೆ, ಮುಂದಿನ ಪ್ಲಾನ್ ಗಳ ಬಗ್ಗೆ ಚರ್ಚೆ ಮಾಡುತ್ತೇವೆ. ಯು.ಪಿ ಸಿಎಂ ಯೋಗಿ ಆದಿತ್ಯನಾಥ್ ಕೂಡ ಬಂದಿದ್ದಾರೆ. ಎಲೆಕ್ಷನ್ ಟೈಮ್ ನಲ್ಲಿ ಅವರು ಬಂದಿರೋದು ಪಕ್ಷಕ್ಕೆ ಪ್ಲಸ್ ಪಾಯಿಂಟ್ ಎಂದರು.
ಸಿದ್ದರಾಮಯ್ಯರಿಂದ ವ್ಯಂಗ್ಯವಾಗಿ ಟ್ವೀಟ್ ಮಾಡಿ ಮೋದಿಗೆ ಸ್ವಾಗತ ವಿಚಾರ ಸಂಬಂಧ ಮಾತನಾಡಿ, ಈಗಾಗಲೇ ಕಾಂಗ್ರೆಸ್ ನಲ್ಲಿ ಸೋಲಿನ ಭೀತಿ ಶುರುವಾಗಿದೆ. ದೊಡ್ಡ ದೊಡ್ಡ ನಾಯಕರು ಪಕ್ಷದಿಂದ ಪಲಾಯನ ಮಾಡುತ್ತಿದ್ದಾರೆ. ಈಗಾಗಲೇ ಗುಲಾಬ್ ನಬಿ ಅಜಾದ್ ಬಿಟ್ಟೋಗಿದ್ದಾರೆ. ರಾಮನಗರ, ಕೋಲಾರದಲ್ಲಿ ಈಗಾಗಲೇ ಸೋಲಿನ ಭೀತಿ ಅವರಿಗೆ ಗೊತ್ತಾಗುತ್ತಿದೆ. ಅವರಿಗೆ ಇನ್ಮೇಲೆ ತಾವೂ ಗೆಲ್ಲೋದೇ ಇಲ್ಲಾ ಅನ್ನೋದು ಗೊತ್ತಾಗಿದೆ. ಇನ್ಮೇಲೆ ಅವರು ಕಾಂಗ್ರೆಸ್ ಬಿಟ್ಟೋಗೋರನ್ನ ಹಿಡಿದಿಟ್ಟುಕೊಳ್ಳಬೇಕು ಎಂದು ಹೇಳಿದರು.