15 ಜಾನುವಾರು ವಶ, ಹಲವು ಕ್ವಿಂಟಾಲ್ ಮಾಂಸ ವಶಕ್ಕೆ
ಉಳ್ಳಾಲ: ಚೆಂಬುಗುಡ್ಡೆ ಸಮೀಪದ ಮನೆಯಲ್ಲೇ ನಡೆಸುತ್ತಿದ್ದ ಬೃಹತ್ ಕಸಾಯಿಖಾನೆಗೆ ದಾಳಿ ನಡೆಸಿರುವ ಉಳ್ಳಾಲ ಪೊಲೀಸರು 15ಕ್ಕೂ ಹೆಚ್ಚು ಜಾನುವಾರು ಮತ್ತು ಹಲವು ಕ್ವಿಂಟಾಲ್ ಕಡಿದು ಹಾಕಲಾದ ಮಾಂಸವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಚೆಂಬುಗುಡ್ಡೆ ನಿವಾಸಿ ಎಂ.ಸಿ.ಬಾವ ಮನೆ ಕಂ ಕಸಾಯಿಖಾನೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರಿಗೆ ಕಡಿದು ಹಾಕಿದ ಜಾನುವಾರುಗಳ ಮಾಂಸದ ತುಂಡು, ಅರೆ ಜೀವಂತ ಸ್ಥಿತಿಯಲ್ಲಿದ್ದ ಕರು, ರಕ್ತದೋಕುಳಿ ಕಂಡುಬಂದಿದೆ.
15ಕ್ಕೂ ಹೆಚ್ಚು ಜಾನುವಾರುಗಳು ಅಂಗಳದಲ್ಲಿ ಕಟ್ಟಿ ಹಾಕಲಾಗಿದ್ದು, ಇನ್ನೇನು ಅದನ್ನು ಕಡಿಯುವ ಮುನ್ನ ಪೊಲೀಸ್ ದಾಳಿ ನಡೆದಿದೆ. ಸ್ಥಳೀಯ ಪ್ರದೇಶಗಳಿಂದ ಕಳವುಗೈದ ಜಾನುವಾರುಗಳನ್ನು ಮಾಂಸಕ್ಕಾಗಿ ಉಪಯೋಗಿಸಲಾಗುತ್ತಿತ್ತು. ಕೆಲತಿಂಗಳ ಹಿಂದೆಯಷ್ಟೇ ಇದೇ ಮನೆಯಲ್ಲಿರುವ ಕಸಾಯಿಖಾನೆಗೆ ದಾಳಿ ನಡೆಸಿದ ಪೊಲೀಸರು ಹಲವು ಜಾನುವಾರುಗಳನ್ನು ವಶಕ್ಕೆ ತೆಗೆದುಕೊಂಡಿದ್ದರು.
ಆ ಬಳಿಕ ಮತ್ತೆ ಕಳ್ಳ ವ್ಯವಹಾರ ಮುಂದುವರಿಸಿರುವುದಾಗಿ ತಿಳಿದುಬಂದಿದೆ. ಜಾನುವಾರು ಸಾಗಿಸಲು ಉಪಯೋಗಿಸುತ್ತಿದ್ದ ಪಿಕಪ್ ವಾಹನವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಉಳ್ಳಾಲ ಕ್ರೈಂ ಎಸ್.ಐ.ರಾಜೇಂದ್ರ ನೇತೃತ್ವದಲ್ಲಿ ದಾಳಿ ನಡೆದಿದೆ







