ಮೂಡುಬಿದಿರೆಯಲ್ಲಿ ಯಕ್ಷಗಾನೀಯ ಮೊಸರು ಕುಡಿಕೆ ಉತ್ಸವದಲ್ಲಿ ಸಾಧಕರಿಗೆ ಸನ್ಮಾನ
ಮೂಡುಬಿದಿರೆ: ಶ್ರೀ ಕೃಷ್ಣ ಫ್ರೆಂಡ್ಸ್ ಸರ್ಕಲ್ ಸಂಯೋಜನೆಯಲ್ಲಿ ೩೬ನೇ ವರ್ಷದ ಸಾಂಸ್ಕೃತಿಕ-ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಶ್ರೀಕೃಷ್ಣ ಕಟ್ಟೆಯ ಎದುರು ನಡೆಯಿತು.

ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ಇತರ ರಂಗಗಳಲ್ಲಿ ಸಕ್ರಿಯರಾಗಿರುವ ಉದ್ಯಮಿ, ಬಾಲಾಜಿ ಸಮೂಹ ಸಂಸ್ಥೆಯ ಪ್ರವರ್ತಕ ಕೆ. ವಿಶ್ವನಾಥ ಪ್ರಭ ಅವರಿಗೆ ಶ್ರೀ ಕೃಷ್ಣ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ೬೬ ವರ್ಷಗಳಿಂದಲೂ ವೈದ್ಯಕೀಯ ಸೇವೆ ನೀಡುತ್ತಿರುವ, ಕೊರೊನಾ ಸಮಯದಲ್ಲೂ ಸಕ್ರಿಯರಾಗಿದ್ದ, ಕೊಡೆತ್ತೂರು ಮೂಲದ ಡಾ. ಎಂ.ಪದ್ಮನಾಭ ಉಡುಪ, ಗೌರವ ಪುರಸ್ಕಾರ, ಕರ್ನಾಟಕ ಹೈಕೋರ್ಟ್ ನ ನಿರ್ದೇಶಿತ ಹಿರಿಯ ವಕೀಲ ಇರುವೈಲು ತಾರಾನಾಥ ಪೂಜಾರಿ ಅವರಿಗೆ ವಿಶೇಷ ಗೌರವ ಸಲ್ಲಿಸಲಾಯಿತು.

ಪ್ರತಿಭಾ ಪುರಸ್ಕಾರದಡಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪೂಣಾಂಕ ಗಳಿಸಿರುವ ಮೂಡುಬಿದಿರೆ ರೋಟರಿ ಶಾಲೆಯ ಇಬ್ಬರು ಹಾಗೂ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ಐವರು ವಿದ್ಯಾರ್ಥಿಗಳಿಗೆ ಹಾಗೂ ಯಕ್ಷಗಾನೀಯ ಶ್ರೀ ಕೃಷ್ಣ ವೇಷಧಾರಿ ಚಂದ್ರಶೇಖರ ಮಳಲಿ ಅವರಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು. ಮುದ್ದು ಕೃಷ್ಣ ವೇಷ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಆಝಾದಿ ಕಾ ಅಮೃತ ಮಹೋತ್ಸವ್ ಛಾಯಾಚಿತ್ರಸ್ಪರ್ಧೆಯಲ್ಲಿ ಬಹುಮಾನಿತ ಮಾನಸ ಫೊಟೋಗ್ರಫಿಯ ರವಿ ಕೋಟ್ಯಾನ್, ಸ್ಯಾಕ್ಸೋಫೋನ್, ನಾಗಸ್ವರ ವಾದಕ ಕೇಶವ, ಕರ್ನಾಟಕ ಜಾನಪದ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತ ವೆಂಕಟೇಶ ಬಂಗೇರ ಅವರನ್ನು ಪುರಸ್ಕರಿಸಲಾಯಿತು.
ಶಾಸಕ ಉಮಾನಾಥ ಕೋಟ್ಯಾನ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಮಾಜಿ ಸಚಿವ ಅಭಯಚಂದ್ರ ಜೈನ್, ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸುದರ್ಶನ ಎಂ., ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್, ಕರ್ಣಾಟಕ ಬ್ಯಾಂಕ್ ನಿಕಟಪೂರ್ವ ಜಿ.ಎಂ. ಚಂದ್ರಶೇಖರ ರಾವ್ ಬೊಕ್ಕಸ, ಎಂಸಿಎಸ್ ಸೊಸೈಟಿ ವಿಶೇಷ ಸಿಇಓ ಚಂದ್ರಶೇಖರ ಎಂ., ಉದ್ಯಮಿಗಳಾದ ಶ್ರೀಪತಿ ಭಟ್, ಐ. ರಾಘವೇಂದ್ರ ಪ್ರಭು, ಪ್ರಭಾತ್‌ಚಂದ್ರ ಜೈನ್, ವಿ.ಹಿಂ.ಪ. ವಿಭಾಗ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ, ಪೊನ್ನೆಚಾರಿ ವೆಂಕಟರಮಣ ದೇವಸ್ಥಾನದ ಆನುವಂಶೀಯ ಮೊಕ್ತೇಸರ ಅಶೋಕ ಕಾಮತ್, ಸಂಘಟನೆಯ ಗೌರವಾಧ್ಯಕ್ಷ ಪ್ರಮಥ್ ಕುಮಾರ್ ಭಾಗವಹಿಸಿದ್ದರು.
ನಾಟ್ಯನಿಲಯಂ ಬಾಲಕೃಷ್ಣ ಮಂಜೇಶ್ವರ ತಂಡದವರು ‘ನೃತ್ಯಾಭಿಷೇಕಂ-೨೦೨೨’, ಕರ್ನಾಟಕ ಜಾನಪದ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತ ವೆಂಕಟೇಶ ಬಂಗೇರ ಅವರು ಕರಗ ನೃತ್ಯ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೇಶವ ಮೂಡುಬಿದಿರೆ ಸ್ಯಾಕ್ಸೋಫೋನ್ ವಾದನ ಪ್ರಸ್ತುತ ಪಡಿಸಿದರು.
ಅಧ್ಯಕ್ಷ ಬಿ. ಗಣೇಶ ರಾವ್ ಸ್ವಾಗತಿಸಿ, ಸಂಚಾಲಕ ಸಂತೋಷ್‌ಕುಮಾರ್ ಅತಿಥಿಗಳನ್ನು ಗೌರವಿಸಿದರು. ಗೌ. ಸಲಹೆಗಾರ ಕೆ.ವಿ.ರಮಣ್ ನಿರೂಪಿಸಿದರು. ಶ್ರೀ ಕೃಷ್ಣ ಫ್ರೆಂಡ್ಸ್ ಸರ್ಕಲ್ ಸಂಯೋಜನೆಯಲ್ಲಿ ೩೬ನೇ ವರ್ಷದ ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.