ಪೆರಾಬೆ ಗ್ರಾಮ ಪಂಚಾಯತ್ ಅಧ್ಯಕ್ಷ, ಬಿಜೆಪಿ ನಾಯಕರ ಕೊಲೆಯತ್ನ : ಬಂಧಿತ ಪಿಎಫ್‌ಐ ಕಾರ್ಯಕರ್ತರಿಗೆ 48 ಗಂಟೆಯಲ್ಲಿ ಜಾಮೀನು : ದಿನ 3 4 ಕಳೆದರೂ ಬಂಧನವಾಗಿಲ್ಲ
ಪುತ್ತೂರು: ಪೆರಾಬೆ ಗ್ರಾಮ ಪಂಚಾಯತ್ ಅಧ್ಯಕ್ಷ, ಪ್ರಭಾವಿ ಬಿಜೆಪಿ ನಾಯಕರಿಗೆ ಮಾರಣಾಂತಿಕ ಹಲ್ಲೆ ನಡೆಸಿ ಬಂಧಿತರಾಗಿರುವ ಇಬ್ಬರು ಪಿಎಫ್‌ಐ ಕಾರ್ಯಕರ್ತರಿಗೆ 48 ಗಂಟೆಯಲ್ಲಿ ಜಾಮೀನು ದೊರಕಿದೆ.
ಕಾರಿನಲ್ಲಿ ಸಂಚರಿಸುತ್ತಿದ್ದ ಪೆರಾಬೆ ಗ್ರಾ.ಪಂ.ಅಧ್ಯಕ್ಷ ಮೋಹನ್‌ದಾಸ್ ರೈ ಹಾಗೂ ಇತರ ಇಬ್ಬರ ಮೇಲೆ ಜೂ.24ರಂದು ಶುಕ್ರವಾರ ರಾತ್ರಿ ಪೆರಾಬೆ ಶಾಲೆ ಸಮೀಪ ತಲವಾರು ದಾಳಿ ನಡೆದಿತ್ತು. ಪ್ರಕರಣದಲ್ಲಿ ಬಂಧಿತರಾಗಿದ್ದ ಇಬ್ಬರು ಆರೋಪಿಗಳಿಗೆ ಜಾಮೀನು ದೊರೆತಿದೆ.
ಪೆರಾಬೆ ಗ್ರಾಮದ ಕೋಚಕಟ್ಟೆ ನಿವಾಸಿ ಅಬ್ದುಲ್ ಖಾದ್ರಿಯವರ ಪುತ್ರ ಮೊದು ಕುಂಞ(38 ಮ.ಹಾಗೂ ಪೆರಾಬೆ ಗ್ರಾಮದ ಬೇಳ್ವಾಡಿ ನಿವಾಸಿ ಆದಂರವರ ಪುತ್ರ ಮಹಮ್ಮದ್ ಜುಬೈರ್ ಎಂಬವರನ್ನು ಕಡಬ ಪೊಲೀಸರು ಬಂಧಿಸಿದ್ದರು. ಬಂಧಿತರಿಗೆ ಪುತ್ತೂರು ನ್ಯಾಯಾಲಯ ಜಾಮೀನು ಮಂಜೂರುಗೊಳಿಸಿ ಆದೇಶಿಸಿದೆ. ಆರೋಪಿಗಳ ಪರ ನ್ಯಾಯವಾದಿ ಉಪ್ಪಿನಂಗಡಿ ಸಂತೋಷಕುಮಾರ್ ಹಾಗೂ ಹರ್ಷಿತಾಕುಮಾರಿ ವಾದ ಮಂಡಿಸಿದ್ದರು.
ಒಂದೇ ಮತಿಯರ ನಡುವೆ ಮಾತಿನ ಚಕಮಕಿ ನಡೆಯುತ್ತಿರುವಾಗ ಅದೇ ರಸ್ತೆಯಲ್ಲಿ ಮನೆಗೆ ಹೋಗುತ್ತಿದ್ದ ಮೋಹನದಾಸ್ ರೈಯವರ ಬಳಿ ಇಬ್ರಾಹಿಂ ಎನ್ನುವವರು ನನ್ನ ಅಳಿಯನಿಗೆ ವಾಟ್ಸಾಪ್ ವಿಚಾರವಾಗಿ ಚರ್ಚೆಯಾಗುತ್ತಿದೆ ಎಂದಾಗ ಕಾರಿನಿಂದ ಇಳಿದ ಮೋಹನ್ ದಾಸ್ ರೈಯವರಿಗೆ ಎದುರಿನ ತಂಡ ತಲವಾರು ದಾಳಿ ನಡೆಸಿದೆ.
ಇಬ್ಬರು ಬಂಧಿತರಾಗಿದ್ದು ಅವರಿಗೀಗ ಜಾಮೀನು ದೊರಕಿದೆ. ಘಟನೆ ನಡೆದು ದಿನ 3 ಕಳೆದರೂ ಪ್ರಮುಖ ಆರೋಪಿಗಳು ಇನ್ನೂ ಬಂಧನವಾಗಿಲ್ಲ. ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ತಲವಾರು ದಾಳಿ ನಡೆದರೂ ಎಫ್‌ಐಆರ್ ದಾಖಲಿಸುವಾಗ ಸಲೀಸಾಗಿ ಜಾಮೀನು ದೊರಕುವ ಪ್ರಕರಣಗಳನ್ನು ದಾಖಲಿಸಿದ್ದರಿಂದಲೇ, ಬಂಧನವಾದ 24 ಗಂಟೆಯಲ್ಲಿ ಹೊರಗೆ ಬರುವಂತಾಗಿದೆ ಹಾಗೂ ಪ್ರಮುಖ ಆರೋಪಿಗಳ ಬಂಧನವಾಗಿಲ್ಲ ಎಂದು ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ