ಬಿಜೆಪಿಯಿಂದ ವಿಶ್ವಕರ್ಮ ಸಮಾಜದ ಕಡೆಗಣನೆ ಇಲ್ಲ; ಸಮಾಜಗಳ ಅಭಿವೃದ್ಧಿಗೆ ಯತ್ನ: ನೆ.ಲ.ನರೇಂದ್ರಬಾಬು
ಬೆಂಗಳೂರು: ರಾಜ್ಯದ ಸಮಾಜಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ವಿಶ್ವಕರ್ಮ ಸಮಾಜವನ್ನು ಒಡೆದು ಇಬ್ಭಾಗ ಮಾಡಲು ಮುಂದಾಗಿದ್ದಾರೆ ಎಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಬಿಜೆಪಿ ಮತ್ತು ರಾಜ್ಯದ ಸಚಿವರು ಯಾರನ್ನೂ ಕಡೆಗಣಿಸುವುದಿಲ್ಲ. ಸಮಾಜವನ್ನು ಒಡೆಯುವ ಕಾರ್ಯ ಮಾಡುವುದಿಲ್ಲ. ಎಲ್ಲ ಸಮಾಜಗಳನ್ನು ಒಗ್ಗೂಡಿಸಿ ಸಮಾಜದ ಸರ್ವತೋಮುಖ ಅಭಿವೃದ್ಧಿ ಮಾಡಲು ಬಿಜೆಪಿ ಶ್ರಮಿಸುತ್ತದೆ ಎಂದು ಒಬಿಸಿ ಮೋರ್ಚಾ ರಾಜ್ಯ ಅಧ್ಯಕ್ಷ ನೆ.ಲ.ನರೇಂದ್ರಬಾಬು ಅವರು ತಿಳಿಸಿದ್ದಾರೆ.
ನಂಜುಂಡಿ ಅವರನ್ನು ಪಕ್ಷವು ಕಡೆಗಣಿಸಿಲ್ಲ. ವಿಶ್ವಕರ್ಮ ಸಮಾಜದ ಸ್ವಾಮೀಜಿ ಮತ್ತು ಪ್ರಮುಖರು ಬಂದು ಮನವಿ ನೀಡಿದ್ದು, ಅದನ್ನು ಸ್ವೀಕರಿಸುವುದು ಅವರ ಕರ್ತವ್ಯ. ಅದನ್ನು ಸ್ವೀಕರಿಸಿದ್ದಾರೆ. ಅದನ್ನು ಸ್ವೀಕರಿಸಬಾರದು ಎಂದು ಹೇಳುವುದು ಸೂಕ್ತವಲ್ಲ ಎಂದು ತಿಳಿಸಿದ್ದಾರೆ.
ಸಮಾಜ ಒಡೆಯುತ್ತಿದ್ದಾರೆ ಎಂಬ ಗೊಂದಲದ ಹೇಳಿಕೆ ನೀಡಿ ಅಪಪ್ರಚಾರ ಮಾಡುವುದು ಸರಿಯಲ್ಲ. ಹಿಂದುಳಿದ ವರ್ಗಗಳ ಸಚಿವರಾಗಿ ಹಿಂದುಳಿದ ಸಮಾಜದ ಮುಖಂಡರು, ಸ್ವಾಮೀಜಿಗಳು ಯಾರೇ ಬಂದರೂ ಅವರನ್ನು ಗೌರವಭಾವದಿಂದ ನೋಡಿ ಮನವಿ ಸ್ವೀಕರಿಸಿ ಕ್ರಮ ತೆಗೆದುಕೊಳ್ಳುವುದು ಅವರ ಜವಾಬ್ದಾರಿ. ಆ ಹೊಣೆಯನ್ನು ಅವರು ನಿರ್ವಹಿಸಿದ್ದಾರೆ ಎಂದು ತಿಳಿಸಿದ್ದಾರೆ.
ನಂಜುಂಡಿಯವರು, ಬಾಬು ಪತ್ತಾರ ಸೇರಿದಂತೆ ಸಮಾಜದ ಎಲ್ಲರೂ ಒಗ್ಗಟ್ಟಾಗಿ ಸಮಾಜದ ಕುರಿತು ಚಿಂತಿಸುವುದು ಒಳಿತನ್ನು ತರುತ್ತದೆ. ಒಗ್ಗಟ್ಟಿನಲ್ಲಿ ಬಲವಿದೆಯೇ ಹೊರತು ಈ ರೀತಿಯಾಗಿ ಕ್ಷುಲ್ಲಕವಾಗಿ ಮಾತನಾಡುವುದು ಮತ್ತು ಆರೋಪಿಸುವುದು ಸೂಕ್ತವಲ್ಲ ಎಂದು ನೆ.ಲ.ನರೇಂದ್ರಬಾಬು ಅವರು ತಿಳಿಸಿದ್ದಾರೆ.