ಬಂಟ್ವಾಳ: ತಾಲ್ಲೂಕಿನ ಬಾಳ್ತಿಲ ಗ್ರಾಮದ ಪುಳಿಂಚ ಚೆಂಡೆ ಕಲ್ಲುರ್ಟಿ ದೈವಸ್ಥಾನ ಬಳಿ ಪುಳಿಂಚ ಸೇವಾ ಪ್ರತಿಷ್ಠಾನ ವತಿಯಿಂದ ಎ.23ರಂದು ಶನಿವಾರ ರಾತ್ರಿ ಏರ್ಪಡಿಸಿದ್ದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸಾಧಕರನ್ನು ಅಭಿನಂದಿಸಲಾಯಿತು.
ಇಲ್ಲಿನ ಬಾಳ್ತಿಲ ಗ್ರಾಮದ ಪುಳಿಂಚ ಚೆಂಡೆ ಕಾರಣಿಕ ಕಲ್ಲುರ್ಟಿ ದೈವಸ್ಥಾನ ಬಳಿ ಪುಳಿಂಚ ಸೇವಾ ಪ್ರತಿಷ್ಠಾನ ವತಿಯಿಂದ ಯಕ್ಷಗಾನ ದಶಾವತಾರಿ ದಿವಂಗತ ಪುಳಿಂಚ ರಾಮಯ್ಯ ಶೆಟ್ಟಿ ಇವರ ಸಂಸ್ಮರಣಾರ್ಥ ಪುಳಿಂಚ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಶನಿವಾರ ರಾತ್ರಿ ನಡೆಯಿತು. ಕಟೀಲು ಮೇಳದ ಸಂಚಾಲಕ ದೇವಿಪ್ರಸಾದ್ ಶೆಟ್ಟಿ ಕಲ್ಲಾಡಿ ಕಾರ್ಯಕ್ರಮ ಉದ್ಘಾಟಿಸಿದರು.
ದಿವಂಗತ ಪುಳಿಂಚ ರಾಮಯ್ಯ ಶೆಟ್ಟಿ ಬಗ್ಗೆ ಯಕ್ಷಗಾನ ವಿದ್ವಾಂಸ ಡಾ. ಎಂ.ಪ್ರಭಾಕರ ಜೋಶಿ ಸಂಸ್ಮರಣಾ ಭಾಷಣ ಮಾಡಿದರು. ಸ್ನೇಹಪರ ಮತ್ತು ಕ್ರೀಯಾಶೀಲ ಕಲಾವಿದರಾಗಿ ಪುಳಿಂಚ ರಾಮಯ್ಯ ಶೆಟ್ಟರ ಕೊಡುಗೆ ಕಲೆ ಮತ್ತು ಸಾಹಿತ್ಯ ಕ್ಷೇತ್ರವನ್ನು ಸಂಪತ್ಭರಿತಗೊಳಿಸಿದೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮಾತನಾಡಿ, ಹಿರಿಯರ ಪರಂಪರೆ ಮುಂದಿನ ತಲೆಮಾರಿಗೆ ಹಸ್ತಾಂತರಿಸುವಲ್ಲಿ ಪುಳಿಂಚ ರಾಮಯ್ಯ ಶೆಟ್ಟರ ಸಂಸ್ಮರಣೆ ಮಹತ್ವದ್ದಾಗಿದೆ ಎಂದರು.
ಮನಪಾ ಮೇಯರ್ ಪ್ರೇಮಾನಂದ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಂಗಳೂರು ಯಕ್ಷಾಂಗಣ ಕಾರ್ಯಾಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅಭಿನಂದನಾ ಭಾಷಣ ಮಾಡಿದರು.
ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಶುಭ ಹಾರೈಸಿದರು. ಹಿರಿಯ ಕಲಾವಿದರಾದ ಬೆಳ್ಳಾರೆ ವಿಶ್ವನಾಥ ರೈ, ಬಾಯಾರು ರಘುನಾಥ ಶೆಟ್ಟಿ, ಕೊಳ್ತಿಗೆ ನಾರಾಯಣ ಗೌಡ, ಜಪ್ಪು ದಯಾನಂದ ಶೆಟ್ಟಿ, ಮುಂಡಾಜೆ ಬಾಲಕೃಷ್ಣ ಶೆಟ್ಟಿ ಇವರಿಗೆ ಪುಳಿಂಚ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಇದೇ ವೇಳೆ ಗೌರವ ಡಾಕ್ಟರೇಟ್ ಸ್ವೀಕರಿಸಿದ ದೇವದಾಸ್ ಕಾಪಿಕಾಡ್, ಪ್ರತಿಭಾನ್ವಿತ ವಿದ್ಯಾರ್ಥಿನಿ ಜೀವಿತಾ, ಯಕ್ಷಗಾನ ಟೆಂಟಿನ ಹಿರಿಯ ಮೇಸ್ತ್ರಿ ಪೂವಪ್ಪ ಪೂಜಾರಿ ಇವರನ್ನು ಅಭಿನಂದಿಸಲಾಯಿತು. ಪ್ರತಿಷ್ಠಾನದ ಅಧ್ಯಕ್ಷ ವಕೀಲ ಶ್ರೀಧರ ಶೆಟ್ಟಿ ಪುಳಿಂಚ ಸ್ವಾಗತಿಸಿ, ಕೋಶಾಧಿಕಾರಿ ಪ್ರತಿಭಾ ಶೆಟ್ಟಿ ವಂದಿಸಿದರು. ಹಿರಿಯ ಕಲಾವಿದ ಅಶೋಕ್ ಭಟ್ ಉಜಿರೆ ಕಾರ್ಯಕ್ರಮ ನಿರೂಪಿಸಿದರು.
