ಬೆಂಗಳೂರು: ಸಾಹಿತಿ ಮತ್ತು ದಂತವೈದ್ಯರಾಗಿರುವ ಗಂಗಾವತಿಯ ಡಾ.ಶಿವಕುಮಾರ್ ಮಾಲಿಪಾಟೀಲ್ ರಚಿಸಿರುವ ‘ಕ್ಷಮಿಸಿ ಬಿಡು ಬಸವಣ್ಣ’ ಎನ್ನುವ 5.34 ನಿಮಿಷದ ವಿಡಿಯೋ ಹಾಡನ್ನು ನಿರ್ಮಿಸಿದ್ದಾರೆ. ನಾಡೋಜ.ಗೂ.ರು.ಚನ್ನಬಸಪ್ಪ, ನಾದಬ್ರಹ್ಮ ಹಂಸಲೇಖಾ ಇತರೆ ಗಣ್ಯರು ಲೋಕಾರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ನಾಡೋಜ ಗೂ.ರು.ಚನ್ನಬಸಪ್ಪ ಮಾತನಾಡುತ್ತಾ ಹಂಸಲೇಖಾ ನಮ್ಮ ನಾಡಲ್ಲೆ ಅಭಿಮಾನ ಪಡತಕ್ಕಂಥ ಶ್ರೇಷ್ಟ ಸಂಗೀತ ಸಂಯೋಜಕ. ಅವರ ಬಗ್ಗೆ ಒಂದು ಲೇಖನ ಬರೆದಿದ್ದೆ.

ಆದರೆ ನೆನಪಿನ ಶಕ್ತಿ ಹೋಗಿದ್ದರಿಂದ ಹೇಳಲು ಆಗುತ್ತಿಲ್ಲ. ಮಾಲಿಪಾಟೀಲರು ಲೋಕಗೀತೆ ರಚನೆ ಮಾಡಿ ಅದಕ್ಕೊಂದು ದೃಶ್ಯರೂಪ ಕೊಟ್ಟಿರುವುದು ತುಂಬ ಅಭಿನಂದನೀಯ. ನಾನು ನೋಡಿ ಸಂತೋಷಪಟ್ಟಿದ್ದೇನೆ. ನೀವು, ನಿಮ್ಮ ಅಕ್ಕಪಕ್ಕದವರಿಗೆ ಹೇಳಿ. ಶ್ರೀನಿವಾಸಮೂರ್ತಿರನ್ನು ಪರದೆ ಮೇಲೆ ಮಾತ್ರ ನೋಡಿದ್ದೆ. ನೇರವಾಗಿ ನೋಡಿರಲಿಲ್ಲ. ಈ ನೆಪದಲ್ಲಿ ಆದರೂ ಹಂಸಲೇಖಾರನ್ನು ನೋಡಲು ಅವಕಾಶವಾಯಿತು. ನನಗೆ 95 ಆಗಿದೆ. ದೇವರ ಅನುಗ್ರಹ ಇದ್ದರೆ ಸಂಚೂರಿ ಬಾರಿಸುತ್ತೇನೆಂದು ಆಹ್ವಾನಿತರನ್ನು ನಗಿಸಿದರು.
