ಪೊಳಲಿ : ಅರ್ಕುಳ ಶ್ರೀ ಉಳ್ಳಾಕ್ಲು ಮಗೃಂತಾಯಿ ಧರ್ಮದೇವತೆಗಳ ಸಾನಿಧ್ಯ ಹಾಗೂ ಶ್ರೀ ಕ್ಷೇತ್ರ ಪೊಳಲಿಯ ಶ್ರೀ ರಾಜರಾಜೇಶ್ವರಿ ಅಮ್ಮನವರಿಗೂ ಅವಿನಾಭಾವ ಸಂಬಂಧ. ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಪುನರ್ನಿರ್ಮಾಣದ ಶುಭವಸರದಲ್ಲಿ ಶ್ರೀ ಉಳ್ಳಾಕ್ಲು ಮಗೃಂತಾಯಿ ಧರ್ಮದೇವತೆಗಳ ಮಾಡ ಹಾಗೂ ಸಾಣ ಪುನರ್ನವೀಕರಣಗೊಂಡು ಬ್ರಹ್ಮಕಲಶೋತ್ಸವದ ಸಮಯ ಅರ್ಕುಳ ಬೀಡಿನಿಂದ ಶ್ರೀ ದೈವಗಳ ಭಂಡಾರವು ಶ್ರೀ ಕ್ಷೇತ್ರ ಪೊಳಲಿಗೆ ಆಗಮಿಸಿ ನೇಮ ಸೇವೆಯು ಸಂಪನ್ನಗೊಂಡಿದೆ. ವರ್ಷಾವಧಿ ಜಾತ್ರೆಯ ಪುಣ್ಯವಸರದಲ್ಲ್ಲಿ ಪೂರ್ವಕಟ್ಟುಕಟ್ಟಳೆಗೆ ಅನುಸಾರವಾಗಿ ಅರ್ಕುಳ ಬೀಡಿನಿಂದ ಶ್ರೀ ದೈವಗಳ ಭಂಡಾರವು ಶ್ರೀ ಕ್ಷೇತ್ರ ಪೊಳಲಿಗೆ ಎ. 13 ರಂದು ಬುಧವಾರ ಆಗಮಿಸಿತು.

ಧಾರ್ಮಿಕತೆಯ ಸೊಗಡಿನೊಂದಿಗೆ ಜನಮಾನಸದಲ್ಲಿ ಶ್ರದ್ಧಾಭಕ್ತಿಯ ದಿವ್ಯ ಸಂಚಲನವನ್ನು ಮೂಡಿಸಲಿರುವ ಹಾಗೂ ತುಳುನಾಡಿನಲ್ಲಿಯೇ ಅತೀ ದೀರ್ಘವಾದ ಪರಂಪರಾನುಗತ ಶೋಭಾಯಾತ್ರೆಯೊಂದಿಗೆ ಆಗಮಿಸಿದಾಗ ಪೊಳಲಿ ದೇವಳದ ತಂತ್ರಿಗಳು, ಅರ್ಚಕರು, ಆಡಳಿತಮಂಡಳಿ, ಕಾರ್ಯನಿರ್ವಹಣಾಧಿಕಾರಿಯವರು ಬರಮಾಡಿಕೊಂಡರು.

