ಬೆಂಗಳೂರು: ಲೈಂಗಿಕ ಕಿರುಕುಳದಿಂದ ಸಂಭವಿಸಿದ 8ನೇ ತರಗತಿ ವಿದ್ಯಾರ್ಥಿನಿ ತೀರ್ಥಹಳ್ಳಿಯ ನಂದಿತಾ ಸಾವಿನ ಪ್ರಕರಣವನ್ನು ಸರ್ಕಾರ ಸಿಐಡಿ ತನಿಖೆಗೆ ವಹಿಸಿದೆ.
ಪ್ರಕರಣ ತಿನಕ್ಕೊಂದು ತಿರುವು ಪಡೆಯುತ್ತಿದ್ದು, ತೀರ್ಥಹಳ್ಳಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ನಿಷೇಧಾಜ್ಞೆ ಜಾರಿ ಇದ್ದರೂ ಕಳೆದ ಎರಡು ದಿನಗಳಿಂದ ತೀರ್ಥಹಳ್ಳಿಯಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ನಿನ್ನೆ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಸಹ ನಡೆಸಿದ್ದರು.

ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿ ಆದೇಶ ಹೊರಡಿಸಿದ್ದಾರೆ.
ಈ ಮಧ್ಯೆ, ನಂದಿತಾಳ ಸಾವು ಕೊಲೆಯಲ್ಲ, ಆತ್ಮಹತ್ಯೆ ಎಂದು ಬಿಂಬಿಸುವ ಪ್ರಯತ್ನ ಸೋಮವಾರ ನಡೆಯಿತಾದರೂ, ಈ ಪ್ರಯತ್ನಕ್ಕೆ ಆಕ್ರೋಶವೂ ವ್ಯಕ್ತವಾಯಿತು. ಪ್ರಕರಣ ನಡೆದು ನಾಲ್ಕನೇ ದಿನವಾದ ಸೋಮವಾರ ನಂದಿತಾ ಬರೆದಿದ್ದಳೆಂದು ಹೇಳಲಾಗಿರುವ ಡೆತ್ನೋಟ್ ಪೊಲೀಸ್ ಮೂಲಗಳಿಂದ ಬಿಡುಗಡೆಯಾಯಿತು. ಮೂಲ ಪ್ರತಿಯ ಬದಲು ಟೈಪ್ ಮಾಡಿದ ಪ್ರತಿಯನ್ನು ಪೊಲೀಸರು ಮೊದಲು ಮಾಧ್ಯಮಕ್ಕೆ ತೋರಿಸಲು ಮುಂದಾದರು.
ಷಡ್ಯಂತ್ರ: ಆದರೆ ಡೆತ್ನೋಟ್ ಬಗ್ಗೆ ಮೃತಳ ಪೋಷಕರು ಅನುಮಾನ ವ್ಯಕ್ತಪಡಿಸಿ ಅಸಮಾಧಾನ ಹೊರಹಾಕಿದರು. ‘ನನ್ನ ಮಗಳು ರೆಡ್ ಇಂಕ್ನಲ್ಲಿ ಬರೆಯೋದಿಲ್ಲ. ಹಾಗೆಯೇ ಅದರಲ್ಲಿರುವ ಕೈ ಬರಹದ ಬಗ್ಗೆ ಅನುಮಾನವಿದೆ’ ಎಂದು ಆಕೆಯ ಪೋಷಕರು ಅಭಿಪ್ರಾಯಪಟ್ಟರು. ಪ್ರಕರಣದಲ್ಲಿ ಏನೋ ಷಡ್ಯಂತ್ರ ನಡೆಯುತ್ತಿದೆ ಎಂದು ಅನುಮಾನವನ್ನೂ ವ್ಯಕ್ತಪಡಿಸಿದರು.
ಪತ್ರವನ್ನು ಫೊರೆನ್ಸಿಕ್ ಲ್ಯಾಬ್ಗೆ ಕಳುಹಿಸಿದ್ದು, ಡೆತ್ನೋಟ್ಲ್ಲಿರುವ ಬರವಣಿಗೆ ಆಕೆಯ ಕೈ ಬರಹವೇ ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ.
