ಬಂಟ್ವಾಳ : ತಾಲ್ಲೂಕಿನ ಬಿ.ಸಿ.ರೋಡು ಸ್ಪರ್ಶಾ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಬ್ರಹ್ಮೈಕ್ಯ ಎಡನೀರು ಶ್ರೀ ಸಂಸ್ಮರಣೆ ಕಾರ್ಯಕ್ರಮದಲ್ಲಿ ಸಾಮಾಜಿಕ ನೇತಾರ ಎ.ಸಿ.ಭಂಡಾರಿ ದಂಪತಿಯನ್ನು ಅಭಿನಂದಿಸಲಾಯಿತು.
ಬ್ರಹ್ಮೈಕ್ಯರಾದ ಕೇಶವಾನಂದ ಭಾರತಿ ಸ್ವಾಮೀಜಿ ಸರಳತೆ ಮತ್ತು ಕಲಾ ಸಂಪನ್ನ ವ್ಯಕ್ತಿತ್ವದಿಂದ ಭಕ್ತರಿಗೆ ಹತ್ತಿರವಾಗಗಿದ್ದರೆ, ಸರಳತೆ ಜೊತೆಗೆ ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಗರಿಷ್ಟ ಅವಧಿ ಸೇವೆ ಸಲ್ಲಿಸಿದ ಹಿರಿಯ ವ್ಯಕ್ತಿ ಎ.ಸಿ.ಭಂಡಾರಿ ಇವರಿಗೆ ಅಭಿನಂದನೆ ಸಲ್ಲಿಸುತ್ತಿರುವುದು ಅರ್ಥಪೂರ್ಣವಾಗಿದೆ ಎಂದು ಎಡನೀರು ಮಠದ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದ್ದಾರೆ.
ಇಲ್ಲಿನ ಬಿ.ಸಿ.ರೋಡು ಸ್ಪರ್ಶಾ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಬ್ರಹ್ಮೈಕ್ಯ ಎಡನೀರು ಶ್ರೀ ಸಂಸ್ಮರಣೆ ಮತ್ತು ಸಾಮಾಜಿಕ ನೇತಾರ ಎ.ಸಿ.ಭಂಡಾರಿಗೆ ಅಭಿನಂದನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ಒಡಿಯೂರು ಕ್ಷೇತ್ರದ ಗುರುದೇವಾನಂದ ಸ್ವಾಮೀಜಿ ಮತ್ತು ಮಾಣಿಲ ಶ್ರೀಧಾಮ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿದರು.
ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಯು.ಟಿ.ಖಾದರ್, ಮಾಜಿ ಸಚಿವ ಬಿ.ರಮಾನಾಥ ರೈ, ವಿಧಾನಪರಿಷತ್ ಸದಸ್ಯರಾದ ಡಾ.ಮಂಜುನಾಥ ಭಂಡಾರಿ, ಕೆ.ಹರೀಶ್ ಕುಮಾರ್, ಲೋಕಸೇವಾ ಆಯೋಗ ಮಾಜಿ ಅಧ್ಯಕ್ಷ ಟಿ. ಶಾಮ ಭಟ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಶುಭ ಹಾರೈಸಿದರು.
ಇದೇ ವೇಳೆ ರಾಜಮಣಿ ರಾಮಕುಂಜ ಸಂಪಾಕತ್ವದಲ್ಲಿ ‘ಆಧ್ಯಾತ್ಮಶ್ರೀ ಮತ್ತು ಶಿಖರ’ ಸ್ಮರಣ ಸಂಚಿಕೆ ಬಿಡುಗಡೆಗೊಂಡಿತು. ಹಿರಿಯ ವಿದ್ವಾಂಸ ಡಾ. ಎಂ.ಪ್ರಭಾಕರ ಜೋಷಿ ಸಂಸ್ಮರಣಾ ಭಾಷಣ ಮತ್ತು ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಅಧ್ಯಕ್ಷ ಪ್ರೊ.ಕೆ.ತುಕಾರಾಮ ಪೂಜಾರಿ ಅಭಿನಂದನಾ ಭಾಷಣ ಮಾಡಿದರು. ಸಂಚಾಲನಾ ಸಮಿತಿ ಕಾರ್ಯಾಧ್ಯಕ್ಷ ಚಂದ್ರಹಾಸ ಡಿ.ಶೆಟ್ಟಿ ರಂಗೋಲಿ, ಸ್ವಾಗತ ಸಮಿತಿ ಅಧ್ಯಕ್ಷ ರವೀಂದ್ರನಾಥ ಭಂಡಾರಿ ಪುಣ್ಕೆಮಜಲು ಸಜಿಪಗುತ್ತು, ಉಪಾಧ್ಯಕ್ಷ ರೋಹಿತ್ ಡಿ.ಶೆಟ್ಟಿ ನಗ್ರಿಗುತ್ತು ಇದ್ದರು.
ಸಂಚಾಲನಾ ಸಮಿತಿ ಅಧ್ಯಕ್ಷ ಕೈಯೂರು ನಾರಾಯಣ ಭಟ್ ಪ್ರಾಸ್ತಾವಿಕ ಮಾತನಾಡಿದರು. ಸಂಚಾಲಕ ಜಗನ್ನಾಥ ಚೌಟ ಬದಿಗುಡ್ಡೆ ಸ್ವಾಗತಿಸಿ, ಕಾರ್ಯದರ್ಶಿ ರಾಜಾ ಬಂಟ್ವಾಳ ವಂದಿಸಿದರು. ವಕೀಲ ರವೀಂದ್ರ ಕುಕ್ಕಾಜೆ ಸನ್ಮಾನಿತರನ್ನು ಪರಿಚಯಿಸಿದರು. ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು.
