ಬಂಟ್ವಾಳ: ಇಲ್ಲಿನ ದಡ್ಡಲಕಾಡು ಸರಕಾರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಮುದಾಯದತ್ತ ಕಾರ್ಯಕ್ರಮ ಬುಧವಾರ ನಡೆಯಿತು. ಶಾಲಾ ದತ್ತು ಸಂಸ್ಥೆ ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಅಂಚನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕರೋನಾ, ಓಮಿಕ್ರಾನ್ ಬರುತ್ತದೆ ಎನ್ನುವ ಆತಂಕ ಬೇಡ. ಆ ಅಲೆಗಳು ಬರುವಾಗ ಅದರ ಬಗ್ಗೆ ಯೋಚನೆ ಮಾಡೋಣ. ಈಗ ಮಕ್ಕಳ ಶಿಕ್ಷಣ ಬಗ್ಗೆ ಗಮನ ಹರಿಸೋಣ ಎಂದು ಪೋಷಕರಿಗೆ ತಿಳಿಸಿದರು.
ಮಕ್ಕಳನ್ನು ಮದುವೆ, ಜಾತ್ರೆಯಂತಹ ಜನ ಜಂಗುಳಿ ಪ್ರದೇಶಕ್ಕೆ ಕರೆದೊಯ್ದರೆ ಮಾತ್ರ ವೈರಣುಗಳು ಹರಡುವ ಆತಂಕ ಇದೆ. ಈವರೆಗೆ ಎಲ್ಲೂ ಕೂಡ ಶಾಲೆಯಲ್ಲಿ ಕರೋನಾ ಹರಡಿದ ಉದಾಹರಣೆಯಿಲ್ಲ, ಆದ್ದರಿಂದ ಈ ಬಗ್ಗೆ ಪಾಲಕರು ಅನಗತ್ಯ ಚಿಂತೆ ಮಾಡುವ ಅಗತ್ಯ ಇಲ್ಲ. ಎರಡು ವರ್ಷದ ಬಳಿಕ ಮತ್ತೆ ಆರಂಭವಾದ ಶಾಲೆ ಮುಚ್ಚದಂತೆ ಪೋಷಕರಾದ ನಾವು ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಮುಂದಿನ ಎಪ್ರಿಲ್ ೮ ಮತ್ತು ೯ ರಂದು ಶಾಲೆಯ ನೂತನ ಕಟ್ಟಡ ಹಾಗೂ ೭ ಸಾವಿರ ಚದರ ಅಡಿಯ ವಿಶಾಲವಾದ ಕಲಿಕಾ ಭವನ ಮತು ಶೌಚಾಲಯದ ಉದ್ಘಾಟನೆ ನಡೆಯಲಿದೆ ಎಂದು ಮಾಹಿತಿ ನೀಡಿದರು. ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕ ರಮಾನಂದ್ ಅವರು ಪೂರಕ ಮಾಹಿತಿ ನೀಡಿದರು. ಇದೇ ಸಂದರ್ಭ ಶಾಲೆಯ ಅಭಿವೃದ್ಧಿ ಕಾರ್ಯಗಳ ಸಹಯಾರ್ಥವಾಗಿ ಲಕ್ಕಿಡಿಪ್ ಬಿಡುಗಡೆಗೊಳಿಸಲಾಯಿತು.
ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಬಾಲಕೃಷ್ಣ ಗೌಡ, ಪಂಚಾಯತಿ ಸದಸ್ಯರಾದ ಪೂವಪ್ಪ ಮೆಂಡನ್, ಚಿತ್ರಾಕ್ಷಿ ಸತೀಶ್, ಪ್ರಮುಖರಾದ ರಾಮಚಂದ್ರ ಪೂಜಾರಿ ಕರೆಂಕಿ, ನವೀನ್ ಸೇಸಗುರಿ ಉಪಸ್ಥಿತರಿದ್ದರು. ಪ್ರಾಥಮಿಕ ಶಾಲಾ ವಿಭಾಗದ ಮುಖ್ಯ ಶಿಕ್ಷಕ ಮೌರೀಸ್ ಡಿಸೋಜಾ ಸ್ವಾಗತಿಸಿದರು, ಸಹ ಶಿಕ್ಷಕಿ ಹಿಲ್ಡಾ ಫೆರ್ನಾಂಡೀಸ್ ಪ್ರಾಸ್ತವಿಕವಾಗಿ ಮಾತನಾಡಿದರು.
