ಬಂಟ್ವಾಳ: ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಕುಂದು ಕೊರತೆಗಳ ಬಗ್ಗೆ ಸಾರ್ವಜನಿಕರು ಮತ್ತು ತುಳುನಾಡ ರಕ್ಷಣಾ ವೇದಿಕೆ ಬಂಟ್ವಾಳ ತಾ.ಘಟಕ ಜಿ.ಪಂ.ಮಾಜಿ ಸದಸ್ಯ ಎಂ ತುಂಗಪ್ಪ ಬಂಗೇರ ಅವರ ನೇತೃತ್ವದಲ್ಲಿ ಆಗ್ರಹಿಸಿದ್ದ ನಿಟ್ಟಿನಲ್ಲಿ ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್ ಅವರು ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.WhatsApp Image 2021-10-23 at 5.19.05 PM (1)

ಈ ಸಂದರ್ಭದಲ್ಲಿ ಮಾತುಕತೆ ನಡೆಸಿದ ಅವರು, ಆರೋಗ್ಯ ಕೇಂದ್ರದ ಕುಂದು ಕೊರತೆಗಳ ಬಗ್ಗೆ ವಿಚಾರಿಸಿದರು. ತುಂಗಪ್ಪ ಬಂಗೇರ ಅವರು ಮಾತನಾಡಿ, ಆರೋಗ್ಯ ಕೇಂದ್ರದಲ್ಲಿ ಈ ಹಿಂದೆ ಇಬ್ಬರು ವೈದ್ಯರಿದ್ದು, ಪ್ರಸ್ತುತ ಓರ್ವರೇ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಸ್ಟಾಫ್ ನರ್ಸ್ ಹಾಗೂ ಇನ್ನಿತರ ಸಿಬಂದಿಗಳ ಕೊರತೆ ಇದ್ದು, ಸಾರ್ವಜನಿಕರಿಗೆ ಆರೋಗ್ಯ ರಕ್ಷಣೆಗೆ ಉತ್ತಮ ವ್ಯವಸ್ಥೆ ಕಲ್ಪಿಸುವಲ್ಲಿ ಹಿನ್ನಡೆಯಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸುವುದು ಬಹುಕಾಲದ ಬೇಡಿಕೆ ಯಾಗಿದೆ.ಆರೋಗ್ಯ ಇಲಾಖೆ ಶೀಘ್ರ ಸ್ಪಂದನೆ ನೀಡಬೇಕು ಎಂದು ಆಗ್ರಹಿಸಿದರು.

ಪ್ರಾ.ಆ.ಕೇಂದ್ರ ರಾಷ್ಟ್ರೀಯ ಹೆದ್ದಾರಿ ಬದಿ ಕಾರ್ಯ ನಿರ್ವಹಿಸುತ್ತಿದ್ದು, ಅಪಘಾತ ಸಂದರ್ಭದಲ್ಲಿ ಇದನ್ನೇ ಅವಲಂಬಿಸ ಬೇಕಾಗಿದೆ. ಸರಕಾರಿ ಸಮಯವಲ್ಲದೆ ಇತರ ಸಮಯದಲ್ಲೂ ಇಲ್ಲಿ ಹಗಲು, ರಾತ್ರಿ ಕಾರ್ಯ ನಿರ್ವಹಿಸಬೇಕು, ಇಸಿಜಿ ಯಂತ್ರ ಅಳವಡಿಸಿ ತಪಾಸಣೆ ನಡೆಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.

ಸಾರ್ವಜನಿಕ ರ ಅಹವಾಲಿಗೆ ಸ್ಪಂದಿಸಿದ ಡಾ.ಕಿಶೋರ್ ಕುಮಾರ್ ಅವರು, ನಿಯೋಜನೆ ಮೇಲೆ ಸ್ಟಾಫ್ ನರ್ಸ್ ಹಾಗೂ ಅಗತ್ಯ ಸಿಬಂದಿಗಳನ್ನು ನಿಯೋಜಿಸಲಾಗುವುದು ಎಂದ ಅವರು ಉತ್ತಮ ಸೇವೆ ನೀಡುವಂತೆ ವೈದ್ಯರಿಗೆ ಸೂಚಿಸಿದರು. ಇಸಿಜಿ ಸಹಿತ ಇತರ ವ್ಯವಸ್ಥೆ ಕಲ್ಪಿಸುವ ಬಗ್ಗೆ ಭರವಸೆ ನೀಡಿದರು. ಇತ್ತೀಚೆಗೆ ಅಪಘಾತ ದಲ್ಲಿ ಗಂಭೀರ ಗಾಯಗೊಂಡ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಅಬೂಬಕ್ಕರ್ ಅವರನ್ನು ಆಸ್ಪತ್ರೆ ಗೆ ತಂದ ವೇಳೆ ಬೀಗ ಹಾಕಿದ್ದರ ಬಗ್ಗೆ ವಿಚಾರಿಸಿದರು. ಅಂದು ಸರಕಾರಿ ರಜೆಯಾದ ಕಾರಣ ಮಧ್ಯಾಹ್ನ ಬಳಿಕ ತಾನು ಕರ್ತವ್ಯ ದಲ್ಲಿರದೆ ತನ್ನ ನಿವಾಸದಲ್ಲಿದ್ದು, ಈ ಬಗ್ಗೆ ತನಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ವೈದ್ಯಾಧಿಕಾರಿ ಡಾ.ರಿತೇಶ್ ಅವರು ತಿಳಿಸಿದರು.

ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 6 ಕೋ.ರೂ. ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲು ಈಗಾಗಲೇ ಪ್ರಸ್ತಾವನೆ ಕಳುಹಿಸಿದ್ದು, ಬಂಟ್ವಾಳ ಶಾಸಕರು ಈ ಬಗ್ಗೆ ಮುತುವರ್ಜಿ ವಹಿಸಿದ್ದಾರೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಾ ಪ್ರಭು ಅವರು ತಿಳಿಸಿದರು.

ಇದೇ ವೇಳೆ 108 ಅಂಬ್ಯುಲೆನ್ಸ್ ರಾತ್ರಿ 8 ರ ಬಳಿಕ ಲಭ್ಯವಿಲ್ಲವೆಂದು ಸಾರ್ವಜನಿಕ ರು ತಿಳಿಸಿದರು. ರಾತ್ರಿ ಹೊತ್ತು ವಾಹನದಲ್ಲಿ ಸ್ಟಾಫ್ ನರ್ಸ್ ಇಲ್ಲದ ಕಾರಣ ಅಂಬ್ಯುಲೆನ್ಸ್ ಸೌಲಭ್ಯವಿಲ್ಲ ಎಂದು ಪೈಲೆಟ್ ಜಗನ್ನಾಥ ಅವರು ತಿಳಿಸಿದರು. ಇದರ ನಿರ್ವಹಣೆ ಹೊಣೆ ಹೊತ್ತ ಜಿವಿಕೆ ಸಂಸ್ಥೆ ಯನ್ನು ಜಿಲ್ಲಾ ಆರೋಗ್ಯಾಧಿಕಾರಿ ಅವರು ಸಂಪರ್ಕಿಸಿ ಸ್ಟಾಫ್ ನರ್ಸ್ ವ್ಯವಸ್ಥೆ ಬಗ್ಗೆ ವಿನಂತಿಸಿದರು.

ತುಳುನಾಡ ರಕ್ಷಣಾ ವೇದಿಕೆ ಬಂಟ್ವಾಳ ಘಟಕ ಅಧ್ಯಕ್ಷ ರಮೇಶ್ ಶೆಟ್ಟಿ ಮಜಲೋಡಿ, ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಪ್ರಮುಖರಾದ ಗಂಗಾಧರ ಪೂಜಾರಿ, ಸತೀಶ್ ಬಂಗೇರ, ಪ್ರವೀಣ್ ಗೌಡ, ಪ್ರವೀಣ್ ಅನಿಲಡೆ, ತಾರಾನಾಥ ಕಜೆಕಾರು, ಪುರುಷೋತ್ತಮ ನಾಕುನಾಡು, ಹಿರಿಯ ಆರೋಗ್ಯ ಸಹಾಯಕ ಅನ್ವರ್ ಪಾಷಾ ಮತ್ತಿತರರಿದ್ದರು.

By suddi9

Leave a Reply

Your email address will not be published. Required fields are marked *