ಬೆಂಗಳೂರು: ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ತಕ್ಷಣ ಅನೇಕ ಹೊಸ ಹೊಸ ಘೋಷಣೆಗಳನ್ನು ಮಾಡಿದ್ದಾರೆ. ಮೊದಲನೆಯದಾಗಿ ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ 1,000 ಕೋಟಿ ರೂ. ವಿದ್ಯಾರ್ಥಿ ವೇತನ ಯೋಜನೆ ಜಾರಿಗೊಳಿಸಿದ್ದಾರೆ. ಅನ್ನದಾತರ ಮಕ್ಕಳು ಕಲಿಕೆಯಿಂದ ವಂಚಿತರಾಗಬಾರದು. ಹೀಗಾಗಿ ಶಿಷ್ಯವೇತನ ಜಾರಿ ಮಾಡಲಾಗುವುದು ಎಂದು ಅವರು ಹೇಳಿದರು.
ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲ ವೇತನದಲ್ಲಿ ಹೆಚ್ಚಳ. ಇದೇ ವೇಳೆ ಸಂಧ್ಯಾ ಸುರಕ್ಷಾ ಯೋಜನೆಯನ್ನು 1 ಸಾವಿರ ರೂ.ನಿಂದ 1,200 ರೂ.ಗೆ ಹೆಚ್ಚಳ. ವಿಧವಾ ವೇತನ 600 ರೂ. ಇದ್ದು, ಇದೀಗ 800 ರೂ.ಗೆ ಏರಿಕೆ ಮಾಡಲಾಗಿದೆ. ಅಂಗವಿಕಲ ವೇತನ 600 ರೂ.ರಿಂದ 800 ರೂ.ಗೆ ಏರಿಕೆ ಆಗಲಿದೆ ಎಂದು ತಿಳಿಸಿದರು. ನನ್ನ ಆಡಳಿತದಲ್ಲಿ ರೈತರು ಹಾಗೂ ಬಡವರ ಮಕ್ಕಳ ಏಳಿಗೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ನೂತನ ಸಿಎಂ ತಿಳಿಸಿದರು.
