ಬಂಟ್ವಾಳ: ತ್ಯಾಜ್ಯ ಘಟಕ ನಿರ್ಮಾಣ ಪರಿಸರ ಸಂರಕ್ಷಣೆಗೆ ಪೂರಕ. ಜಿಲ್ಲೆಯಾದ್ಯಂತ ಈಗಾಗಲೇ ಪ್ರತೀ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೀಸಲಿಟ್ಟ ಸರ್ಕಾರಿ ಜಮೀನಿನಲ್ಲಿ ಘನ ಮತ್ತು ದ್ರವತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಗೊಳಿಸುವ ಮೂಲಕ ಪರಿಸರ ಸಂರಕ್ಷಣೆ ಮತ್ತು ಆರೋಗ್ಯಪೂರ್ಣ ಸಮಾಜ ನಿರ್ಮಾಣಗೊಳಿಸಲು ಸಾಧ್ಯವಿದೆ ಎಂದು ಸ್ವಚ್ಛ ಭಾರತ ಮಿಶನ್ (ಗ್ರಾಮೀಣ) ರಾಜ್ಯ ಸಮಾಲೋಚಕ ವಿನೋದ್ ಹೇಳಿದ್ದಾರೆ.
ಇಲ್ಲಿನ ಬಿ.ಸಿ.ರೋಡು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯ್ದ ಗ್ರಾಮ ಪಂಚಾಯಿತಿ ಪಿಡಿಒ ಸಹಿತ ಇತರ ಇಲಾಖೆ ಅಧಿಕಾರಿಗಳು ಮತ್ತು ಸಂಯೋಜಕರಿಗೆ ಗುರುವಾರ ಏರ್ಪಡಿಸಿದ್ದ ಒಂದು ದಿನದ ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಸರ್ಕಾರದ ಆಶಯದಂತೆ ‘ಸ್ವಚ್ಛ ಭಾರತ ಗ್ರಾಮೀಣ ಮಿಶನ್ ಯೋಜನೆಯಡಿ ಘನ ಮತ್ತು ದ್ರವ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲು ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಅನುದಾನ ಜೊತೆಗೆ ಇತರ ಅನುದಾನ ಒಟ್ಟುಗೂಡಿಸಿ ತ್ವರಿತ ಕಾಮಗಾರಿ ಕೈಗೊಳ್ಳುವುದು ಈ ಕಾರ್ಯಾಗಾರದ ಮುಖ್ಯ ಉದ್ದೇಶ’ ಎಂದರು.
ಉದ್ಯೋಗ ಖಾತರಿ ಯೋಜನೆ ಸಹಾಯಕ ಜಿಲ್ಲಾ ಕಾರ್ಯಕ್ರಮ ಸಮನ್ವಯಾಧಿಕಾರಿ ಕಿಶನ್ ಕುಮಾರ್ ರಾವ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಶುಭ ಹಾರೈಸಿದರು. ಶಿಕ್ಷಣ ಮತ್ತು ಮಾಹಿತಿ ಸಂವಹನ, ಸ್ವಚ್ಛ ಭಾರತ್ ಮಿಶನ್, ನರೇಗಾ, ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆಗೆ ಸಂಬಂಧಿಸಿದಂತೆ ಪ್ರಮುಖರಾದ ಪವನ್ ಕುಮಾರ್, ಡೊಂಬಯ್ಯ, ಶೈವಿ ಗೋವಿಯಸ್ ಮತ್ತಿತರ ಅಧಿಕಾರಿಗಳು ಇದ್ದರು. ಉದ್ಯೋಗ ಖಾತರಿ ಯೋಜನೆ ಸಹಾಯಕ ನಿರ್ದೇಶಕ ಶಿವಾನಂದ ಪೂಜಾರಿ ಸ್ವಾಗತಿಸಿ, ವಂದಿಸಿದರು.
