ರಾಸುಗಳಲ್ಲಿ ವಂಶಾಭಿವೃದ್ಧಿ ಮಾಡಿಸುವಲ್ಲಿ, ಕೃತಕ ಗರ್ಭಧಾರಣಾ ಕಾರ್ಯಕರ್ತರ ಪಾತ್ರ ಹಿರಿದು :ಎನ್.ಹನುಮೇಶ್
ಶ್ರೀನಿವಾಸಪುರ: ರಾಸುಗಳಲ್ಲಿ ವಿವಿಧ ರೀತಿಯ ವಂಶಾಭಿವೃದ್ಧಿ ಮಾಡಿಸುವಲ್ಲಿ, ಕೃತಕ ಗರ್ಭಧಾರಣಾ ಕಾರ್ಯಕರ್ತರ ಪಾತ್ರ ಹಿರಿದು. ಕರುಗಳ ಜನನ ಹಾಗೂ ಹಾಲು ಶೇಖರಣೆ ಹೆಚ್ಚಿಸುವಲ್ಲಿ ಅವರು ಮುಖ್ಯ ಪಾತ್ರ ವಹಿಸಿದ್ದಾರೆ ಎಂದು ಕೋಚಿಮುಲ್ ನಿರ್ದೇಶಕ ಎನ್.ಹನುಮೇಶ್ ಹೇಳಿದರು.ಪಟ್ಟಣದ ಕ್ಯಾಂಪ್ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಾಲು ಉತ್ಪಾದಕರ ಸಹಕಾರ ಸಂಘಗಳ ಕೃತಕ ಗರ್ಭಧಾರಣಾ ಕಾರ್ಯಕರ್ತರಿಗೆ ಎ೧ ಕಿಟ್ ಹಾಗೂ ಕೋವಿಡ್ ಸೀಲ್ಡ್ ಗ್ಲಾಸ್ಕ್ ಮಾಸ್ಕ್ಗಳನ್ನು ವಿತರಿಸಿ ಮಾತನಾಡಿ, ಕಾರ್ಯಕರ್ತರು ರಾಸುಗಳಲ್ಲಿ ಕೃತಕ ಗರ್ಭಧಾರಣೆ ಮಾಡಿಸುವುದಷ್ಟೇ ಅಲ್ಲದೆ, ಶಿಬಿರ ಕಚೇರಿಯಿಂದ ರಾಸುಗಳಿಗೆ ಅಗತ್ಯವಾದ ಔಷಧಗಳನ್ನು ಪಡೆದು ಪ್ರಥಮ ಚಿಕಿತ್ಸೆ ಮಾಡಬೇಕು. ಹಾಲಿನ ಗುಣಮಟ್ಟ ಹೆಚ್ಚಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಹಾಲು ಉತ್ಪಾದಕರಿಗೆ ತಿಳಿಸಬೇಕು ಎಂದು ಹೇಳಿದರು.
ಕೊರೊನಾ ಸಂಕಷ್ಟದ ನಡುವೆ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಿಬ್ಬಂದಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ಕೋಚಿಮುಲ್ ವತಿಯಿಂದ ವಿತರಿಸಲಾಗಿರುವ ಗ್ಲಾಸ್ ಮಾಸ್ಕ್ ಧರಿಸುವುದನ್ನು ಮರೆಯಬಾರದು. ಕೊರೊನಾ ಸೋಂಕು ಹರಡದಂತೆ ಎಚ್ಚರ ವಹಿಸಬೇಕು ಎಂದು ಹೇಳಿದರು. ಉಪ ಕಚೇರಿ ಉಪ ವ್ಯವಸ್ಥಾಪಕ ಕೆ.ಎಸ್.ನರಸಿಂಹಯ್ಯ, ವಿಸ್ತರಣಾಧಿಕಾರಿಗಳಾದ ಎಂ.ಜಿ.ಶ್ರೀನಿವಾಸ್, ಎನ್.ಶಂಕರ್, ಎಸ್.ವಿನಾಯಕ, ಪಿ.ಕೆ.ನರಸಿಂಹರಾಜು, ಕೆ.ಪಿ.ಶ್ವೇತಾ ಇದ್ದರು.