ಬಂಟ್ವಾಳ:ಇಲ್ಲಿನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೋವಿಡ್ ಸಂತ್ರಸ್ತರಿಗೆ ತಲಾ ರೂ ೧ಸಾವಿರ ಮೌಲ್ಯದ ಉಚಿತ ದಿನಸಿ ಸಾಮಾಗ್ರಿ ಕಿಟ್ ವಿತರಿಸುವ ಮೂಲಕ ಮಾನವೀಯ ಸ್ಪಂದನೆ ಜೊತೆಗೆ ಅಸಹಾಯಕರಿಗೆ ಕೈಲಾದಷ್ಟು ಸಹಾಯಧನ ನೀಡಲು ‘ಇಂದಿರಾ ಕ್ಷೇಮ ನಿಧಿ’ ಆರಂಭಿಸಲಾಗಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಇಲ್ಲಿನ ಬಿ.ಸಿ.ರೋಡು ರಂಗೋಲಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ‘ಇಂದಿರಾ ಕ್ಷೇಮ ನಿಧಿ’ ಯೋಜನೆಗೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸೇರಿದಂತೆ ಮಹಿಳಾ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ಘಟಕ ಸದಸ್ಯರು ದೇಣಿಗೆ ಸಂಗ್ರಹಿಸುವ ಮೂಲಕಸಂಕಷ್ಟದಲ್ಲಿರುವ ಜನತೆಗೆ ನಿರಂತರವಾಗಿ ಸ್ಪಂದಿಸುವ ಉದ್ದೇಶ ನಮ್ಮದು ಎಂದರು. ಕಳೆದ ವರ್ಷ ಪ್ರತೀ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬಡಜನರನ್ನು ಗುರುತಿಸಿ ಉಚಿತ ಅಕ್ಕಿ ಮತ್ತಿತರ ದಿನಸಿ ಸಾಮಾಗ್ರಿ ವಿತರಿಸಲಾಗಿದೆ.
ಈ ಬಾರಿ ಎಐಸಿಸಿ ನಿರ್ದೇಶನದಂತೆ ಕೋವಿಡ್ ಸಂತ್ರಸ್ತರ ಮನೆಗೆ ತೆರಳಿ ಉಚಿತ ಅಕ್ಕಿ ಮತ್ತು ದಿನಸಿ ಸಾಮಾಗ್ರಿ ವಿತರಿಸಿ ಅವರಲ್ಲಿ ಧೈರ್ಯ ತುಂಬುವ ಪ್ರಯತ್ನ ನಡೆಸುತ್ತಿದ್ದೇವೆ. ಈಗಾಗಲೇ ಪಾಣೆಮಂಗಳೂರು ಯುವ ಕಾಂಗ್ರೆಸ್ ಸದಸ್ಯರು ಒಂದು ತಿಂಗಳಿನಿAದ ಪ್ರತಿದಿನ ಮಧ್ಯಾಹ್ನ ಬಸ್ ಮತ್ತು ರೈಲು ನಿಲ್ದಾಣದಲ್ಲಿ ಅರ್ಹರಿಗೆ ಉಚಿತ ಊಟ ವಿತರಿಸುತ್ತಿದ್ದಾರೆ. ಕೋವಿಡ್ ಸಂಕಷ್ಟದ ಸಂದರ್ಭದಲ್ಲಿಯೂ ಗರಿಷ್ಟ ಪ್ರಮಾಣದಲ್ಲಿ ರಕ್ತದಾನ ಮಾಡಲಾಗಿದೆ ಎಂದರು.
ದೇಶದಲ್ಲಿ ಎಲ್ಲಾ ನಾಗರಿಕರಿಗೆ ಲಸಿಕೆ ವಿತರಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಕಾಂಗ್ರೆಸ್ ವಿರುದ್ಧ ಅಪ ಪ್ರಚಾರ ನಡೆಸುತ್ತಿದೆ. ಕಳೆದ ವರ್ಷ ಘೋಷಿಸಿದ ಪ್ಯಾಕೇಜ್ ಪರಿಹಾರವನ್ನೇ ನೀಡದ ರಾಜ್ಯ ಸರ್ಕಾರ ಇದೀಗ ಮತ್ತೆ ಪ್ಯಾಕೇಜ್ ಘೋಷಣೆ ಹೆಸರಿನಲ್ಲಿ ಜನರನ್ನು ವಂಚಿಸುತ್ತಿದೆ ಎಂದು ಆರೋಪಿಸಿದರು.
ಬಂಟ್ವಾಳ ಕ್ಷೇತ್ರದಲ್ಲಿ ಈ ಹಿಂದೆ ಸಣ್ಣ ಪ್ರಮಾಣದ ಕೆಲವೊಂದು ಅಭಿವೃದ್ಧಿ ಕಾಮಗಾರಿಗಳನ್ನು ಗ್ರಾಮ ಪಂಚಾಯಿತಿ ಸದಸ್ಯರೇ ಸ್ವತಃ ನಡೆಸುತ್ತಿದ್ದರು. ಆದರೆ ಇದೀಗ ಬಿಜೆಪಿ ಕಾರ್ಯಕರ್ತರು ಕೋಟಿಗೂ ಮಿಕ್ಕಿ ವೆಚ್ಚದ ರಸ್ತೆ ಮತ್ತಿತರ ಕಾಮಗಾರಿಗಳನ್ನು ನಡೆಸುತ್ತಿದ್ದಾರೆ. ಕಳೆದ ೩ ವರ್ಷಗಳ ಹಿಂದೆ ಶೇ.೮೦ರಷ್ಟಿದ್ದ ಬಿಪಿಎಲ್ ಪಡಿತರ ಚೀಟಿ ರದ್ದುಗೊಳಿಸಿ ದಂಡ ವಿಧಿಸುತ್ತಿರುವುದು ನಾಚಿಕೆಗೇಡು ಎಂದರು. ದೇಶದಲ್ಲಿ ವಿರೋಧ ಪಕ್ಷ ಸಹಿತ ಮಾಧ್ಯಮ ಮತ್ತು ನಾಗರಿಕರು ಗಟ್ಟಿ ಧ್ವನಿ ಎತ್ತಿದಾಗ ಮಾತ್ರ ಇಂಧನ ಬೆಲೆ ಇಳಿಕೆಯಾಗಲು ಸಾಧ್ಯವಿದೆ.
ಕೋವಿಡ್ ಲಸಿಕೆ ಸೇರಿದಂತೆ ರೆಡಿಸಿವರ್ ಮತ್ತು ಕಪ್ಪು ಶಿಲೀಂದ್ರ ರೋಗಕ್ಕೆ ಔಷಧಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿದ್ದರೂ ಜನತೆಗೆ ಸಿಗುತ್ತಿಲ್ಲ. ಇದಕ್ಕಾಗಿ ರಾಜ್ಯ ಎಲ್ಲಾ ಕಾಂಗ್ರೆಸ್ ಶಾಸಕರು ತನ್ನ ಪ್ರದೇಶಾಭಿವೃದ್ಧಿ ಯೋಜನೆಯಡಿ ರೂ ೧ಕೋಟಿ ಅನುದಾನ ಒಟ್ಟುಗೂಡಿಸಿ ಲಸಿಕೆ ನೀಡಲು ಮುಂದಾದರೂ ಸರ್ಕಾರ ಇನ್ನೂ ಒಪ್ಪಿಗೆ ನೀಡುತ್ತಿಲ್ಲ ಎಂದು ಟೀಕಿಸಿದರು.
ಇದೇ ವೇಳೆ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ, ವಿಧಾನಪರಿಷತ್ ಸದಸ್ಯ ಕೆ.ಹರೀಶ ಕುಮಾರ್ ಕಿಟ್ ವಿತರಣೆಗೆ ಚಾಲನೆ ನೀಡಿದರು. ‘ಜಿಲ್ಲೆಯಲ್ಲೇ ಗರಿಷ್ಟ ಪ್ರಮಾಣದಲ್ಲಿ ರಕ್ತದಾನ ನಡೆಸಿದ ಹೆಮ್ಮೆ ಬಂಟ್ವಾಳ ಕಾಂಗ್ರೆಸ್ಸಿಗರಿಗೆ ಸಲ್ಲುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಕೆಲವೊಂದು ತಪ್ಪು ನಿರ್ಧಾರದಿಂದ ಕೋವಿಡ್ ಎರಡನೇ ಅಲೆ ವ್ಯಾಪಕವಾಗಿ ವಿಸ್ತರಿಸಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆಡಳಿತ ವೈಫಲ್ಯ ಮರೆ ಮಾಚಲು ಪ್ಯಾಕೇಜ್ ಘೋಷಣೆ ಮೂಲಕ ಕೇವಲ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ’ ಎಂದು ಅವರು ಟೀಕಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಬಿ.ಪದ್ಮಶೇಖರ್ ಜೈನ್, ಎಂ.ಎಸ್.ಮಹಮ್ಮದ್, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಅಬ್ಬಾಸ್ ಅಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ವಿ. ಶೆಟ್ಟಿ, ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್, ಉಪಾಧ್ಯಕ್ಷೆ ಜೆಸಿಂತ ಡಿಸೋಜ, ಪ್ರಮುಖರಾದ ಸುದರ್ಶನ್ ಜೈನ್, ಕೆ.ಪದ್ಮನಾಭ ರೈ, ಜಯಂತಿ ವಿ.ಪೂಜಾರಿ, ಆಲ್ಬರ್ಟ್ ಮಿನೇಜಸ್, ಜನಾರ್ದನ ಚೆಂಡ್ತಿಮಾರ್, ಇಬ್ರಾಹಿಂ ನವಾಝ್ ಬಡಕಬೈಲು, ಸುರೇಶ್ ಜೋರ ಮತ್ತಿತರರು ಇದ್ದರು. ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಸ್ವಾಗತಿಸಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ವಂದಿಸಿದರು
