ಕೈಕಂಬ : ಚಿಕ್ಕಮಗಳೂರು ವೇದ ವಿಜ್ಞಾನ ಮಂದಿರದಲ್ಲಿ ಕೆ ಎಸ್ ನಿತ್ಯಾನಂದ ಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿರುವ `ರಾಜಸೂಯ ಮಹಾ ಸೋಮಯಾಗ’ಕ್ಕೆ ಗುರುಪುರ ಗೋಳಿದಡಿ ಗುತ್ತಿನ ಚಾವಡಿಯಿಂದ ಗುತ್ತಿನ ಗಡಿಕಾರ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಮುಂದಾಳತ್ವದಲ್ಲಿ ಜ.31ರಂದು ಭಾನುವಾರ ಬೆಳಗ್ಗೆ ಭವ್ಯ ಮೆರವಣಿಗೆಯಲ್ಲಿ ಹೊರೆಕಾಣಿಕೆಗೆ ಚಾಲನೆ ನೀಡಲಾಯಿತು.
ಚಿಕ್ಕಮಗಳೂರು ವೇದ ವಿಜ್ಞಾನ ಮಂದಿರಲ್ಲಿ ಜ. ೧೬ರಿಂದ ಆರಂಭಗೊಂಡ ಈ ಯಾಗ ಫೆ. ೧೨ರಂದು ಪೂರ್ಣಾಹುತಿಗೊಳ್ಳಲಿದೆ.
ಯಾಗದ ಮಹತ್ವ ವನ್ನು ವಿವರಸಿದ ಗಡಿಕಾರರು ಇತ್ತೀಚೆಗೆ ವಿಶ್ವಕ್ಕೆ ಬಾಧಿಸಿದ ಕೊರೋನಾ ಮಹಾಮಾರಿ ಸಂದರ್ಭದಲ್ಲಿ ಶೇ ೭೦ ಮಂದಿ ಕೊರೋನಾಕ್ಕೆ ಬಲಿಯಾಗಿದ್ದರೆ, ಶೇ ೩೦ರಷ್ಟು ಮಂದಿ ಬೇರೆ ಕಾಯಿಲೆಗಳಿಂದಾಗಿ ಮೃತಪಟ್ಟಿದ್ದಾರೆ. ಇಂತಹ ಆತ್ಮಗಳಿಗೆ ಸದ್ಗತಿ ಸಿಕ್ಕಿ, ಭವಿಷ್ಯದಲ್ಲಿ ಇವರೆಲ್ಲ ಈ ಲೋಕದಲ್ಲಿ ಧರ್ಮಿಷ್ಟರಾಗಿ ಹುಟ್ಟಿ ಬರಲಿ ಎಂಬ ಸದುದ್ದೇಶವಿಟ್ಟುಕೊಂಡು ನಿತ್ಯಾನಂದ ಸ್ವಾಮಿಯವರು ಈ ಯಾಗ ಕೈಗೊಂಡಿದ್ದಾರೆ. ದ್ವಾಪರ ಯುಗದ ಕೊನೆಯಲ್ಲಿ ಧರ್ಮರಾಯ ಈ ಯಾಗ ಮಾಡಿದ್ದೇ ಕೊನೆಯಾಗಿದ್ದು, ಅಂದಿನ ಯಾಗದಲ್ಲಿ ಶ್ರೀ ಕೃಷ್ಣ ಪರಮಾತ್ಮ ಅಗ್ರಪೂಜೆ ಪಡೆದುಕೊಂಡಿದ್ದ. ಚಿಕ್ಕಮಗಳೂರು ವೇದ ವಿಜ್ಞಾನ ಮಂದಿರಲ್ಲಿ ನಡೆಯುತ್ತಿರುವ ಈ ಯಾಗದಲ್ಲೂ ಶ್ರೀ ಕೃಷ್ಣನೇ ಅಗ್ರಪೂಜೆ ಪಡೆದುಕೊಳ್ಳಲಿದ್ದಾನೆ. ಇದು ವಿಶ್ವ ಕಲ್ಯಾಣಾರ್ಥ ನಡೆಯುವ ಯಾಗ ಎಂದರೆ ತಪ್ಪಗಲಾರದು ಎಂದು ಗಡಿಕಾರ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಅಭಿಪ್ರಾಯಪಟ್ಟರು.
ವುಡ್‌ಲ್ಯಾಂಡ್ಸ್ ಮಾಲಕ ರವಿ ಭಟ್, ನೈಮೊಗರು ಬಾಳಿಕೆ ಮೋಹನದಾಸ ಶೆಟ್ಟಿ, ಗುಡ್ಡೆಗುತ್ತು ಸುನೀಲಾ ಪ್ರಭಾಕರ ಶೆಟ್ಟಿ, ಪೆರ್ಮಾರಗುತ್ತು ನವೀನ್ ಶೆಟ್ಟಿ, ಬೆಳ್ಳಿಬೆಟ್ಟುಗುತ್ತು ಕಿರಣ್ ಶೆಟ್ಟಿ, ನಡಿಗುತ್ತು ಭಾಸ್ಕರ ಪೂಜಾರಿ, ಸಸಿಹಿತ್ಲು ಚಂದಯ್ಯ ಕರ್ಕೇರ, ಮಿಜಾರುಗುತ್ತು ಮಂಜುನಾಥ ರೈ, ಗುರುಪುರ ಬರ್ಕೆ ಪ್ರಸಾದ್ ಮತ್ತು ಸಹೋದರರು, ಪ್ರಶಾಂತ ಮುಂಡ, ಕಲ್ಲಕಲ್ಲಂಬಿ ದಾಮೋದರ ಶೆಟ್ಟಿ ಹಾಗೂ ಪ್ರಾಚೀನ ಭಾರತದ ಧರ್ಮಾಡಳಿತ ಪುನರುತ್ಥಾನ ಕೂಟದ(ಗುತ್ತು, ಬೀಡು, ಬಾವ, ಬಾರಿಕೆ, ಪರಡಿ, ಮಾಗಂದಡಿಗಳು) ಪದಾಧಿಕಾರಿಗಳು, ಮಹಿಳೆಯರು ಹೊರೆಕಾಣಿಕೆ ಸಮರ್ಪಣೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

