ಬಂಟ್ವಾಳ: ಮನುಷ್ಯನಿಗೆ ನಂಬಿಕೆಯೇ ಮುಖ್ಯವಾಗಿದ್ದು, ನಮ್ಮ ಸತ್ ಸಂಪ್ರದಾಯವನ್ನು ಪಾಲಿಕೊಂಡು ನಿಷ್ಕಲ್ಮಶ ಮನಸ್ಸಿನಿಂದ ದೇವರ ಕಾರ್ಯ ಮಾಡಬೇಕು ಎಂದು ರಾಜ್ಯದ ವಸತಿ ಸಚಿವ ವಿ.ಸೋಮಣ್ಣ ಹೇಳಿದರು. ಶುಕ್ರವಾರ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಕೇದಗೆ ಎಂಬಲ್ಲಿ ಶ್ರೀ ವೀರಭದ್ರ ದೇವರು, ನಾಲ್ಕೈತ್ತಾಯ ಪಂಜುರ್ಲಿ, ಮಹಾಂಕಾಳಿ ಹಾಗೂ ದೈವಗಳ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. 
ವೀರಭದ್ರ ಸ್ವಾಮಿ ದೇವರು ಕೇವಲ ಲಿಂಗಾಯತ ಸಮುದಾಯಕ್ಕೆ ಮಾತ್ರ ಸೀಮೀತವಲ್ಲ ಎಲ್ಲಾ ಧರ್ಮಿಯರ ಆಸ್ತಿ ಎಂದ ಸಚಿವರು ಎಲ್ಲರು ನಂಬಿಕೆಯ ಆಧಾರದಲ್ಲಿ ಬೆಳೆಯಬೇಕು ಎಂದರು. ದ.ಕ.ಜಿಲ್ಲೆಯ ಜನರ ಭಾವನೆ,ನಂಬಿಕೆಗೆ ಸಾಕ್ಷಿಯಾಗಿ ಈ ದೇವಸ್ಥಾನ ಅಧ್ಬುತವಾಗಿ ನಿರ್ಮಾಣವಾಗಿದ್ದು, ದೇವಸ್ಥಾನದ ಮುಂದಿನ ನಿರ್ವಹಣೆಗಾಗಿ ಅನುಕೂಲವಾಗುವ ನಿಟ್ಟಿನಲ್ಲಿ ಟ್ರಸ್ಟ್ ರಚಿಸಿದಲ್ಲಿ ಮೊದಲ ದೇಣಿಗೆಯಾಗಿ 5 ಲಕ್ಷ ರೂ.ವನ್ನು ವಯಕ್ತಿಕ ನೆಲೆಯಲ್ಲಿ ನೀಡುವುದಾಗಿ ಪ್ರಕಟಿಸಿದ ಸಚಿವ ಸೋಮಣ್ಣ ಅವರು ನದಿತೀರಕ್ಕೆ ತಡೆಗೋಡೆ ನಿರ್ಮಾಣಕ್ಕು ಪ್ರಸ್ತಾವ ಸಲ್ಲಿಸಿದರೆ ಶಾಸಕರೊಂದಿಗೆ ತಾನು ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಅನುದಾನ ಒದಗಿಸುವ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ಜನರು ಸ್ವಾವಲಂಬಿ ಜೀವನ ನಡೆಸಬೇಕೆಂಬುದು ಪ್ರದಾನಿ ನರೇಂದ್ರಮೋದಿಯವರ ಆಶಯವಾಗಿದ್ದು,ಈ ದೆಸೆಯಲ್ಲಿ ಹತ್ತುಹಲವು ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಜನ್ ಧನ್, ಬಿಪಿಎಲ್ ಪಡಿತರದಾರರಿಗೆ ಗ್ಯಾಸ್ ಸಂಪರ್ಕ ಮೊದಲಾದ ಮಹತ್ವದ ಯೋಜನೆಗಳಲ್ಲದೆ ಗ್ರಾಮದ ಅಭಿವೃದ್ಧಿಗಾಗಿ ಪ್ರತಿ ಗ್ರಾಮ ಪಂಚಾಯತ್ ಗಳಿಗೆ ಒಂದು ಕೋ.ರೂ.ಅನುದಾನವನ್ನು ಒದಗಿಸಲಾಗುತ್ತಿದೆ. ಸರಕಾರದ ಈ ಯೋಜನೆಗಳು ಗ್ರಾಮದ ಕಟ್ಟಕಡೆಯ ಜನರಿಗೂ ತಲುಪಿಸುವುದು ನಮ್ಮೆಲ್ಲರ ಕರ್ತವ್ಯವಾಗಿರುವುದರ ಜೊತೆಗೆ ಜನರ ನೋವುಗಳನ್ನು ಅರಿತುಕೊಂಡು ಕೆಲಸಮಾಡಿದಾಗ ಆ ಗ್ರಾಮ ಮಾದರಿ ಗ್ರಾಮವಾಗಿ ರೂಪುಗೊಳ್ಳುವುದು ಎಂದರು.
ತಾಯಿಯೇ ಮೊದಲ ದೇವರು:
ಎಲ್ಲರಿಗೂ ದೇವರು ಒಬ್ಬನೇ ನಾವೆಲ್ಲಾ ಅತನ ಮಕ್ಕಳು,ಎಲ್ಲರನ್ನು ಒಪ್ಪಿಕೊಳ್ಳುವ ಮತ್ತು ಅಪ್ಪಿಕೊಳ್ಳುವ ಹಿಂದೂ ಸಮಾಜವಾಗಿದ್ದು ನಮಗೆಲ್ಲಾ ತಾಯಿಯೇ ಅತ್ಯಂತ ಶ್ರೇಷ್ಠವಾದ ಮೊದಲ ದೇವರಾಗಿದ್ದಾರೆ ಎಂದು ಧಾರ್ಮಿಕ ಉಪನ್ಯಾಸಗೈದ ಪುತ್ತೂರು ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು. ಶ್ರೀರಾಮನ ಆದರ್ಶ, ತತ್ವ ವನ್ನು ಅನುಸರಿಸಿ, ರಾಮರಾಜ್ಯದ ಪರಿಕಲ್ಪನೆಯನ್ನು ಸಾಕಾರಗೊಳಿಸೋಣ ಎಂದರು.
ನಿರ್ಭಯದಿಂದ ಕೆಲಸ ಮಾಡಿ:
ಧಾರ್ಮಿಕ ಸಭೆಯಲ್ಲಿ ಆಶೀರ್ವಚನಗೈದ ಕನ್ಯಾಡಿ ಶ್ರೀರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರು, ರಾಜಕಾರಣಿಗಳು ಅಧಿಕಾರದಲ್ಲಿದ್ದಾಗ ನಿರ್ಭಯವಾಗಿ ಲೋಕಸುಧಾರಣೆಯ ಕಾರ್ಯದಲ್ಲಿ ತೊಡಗೊಸಿಕೊಳ್ಳಬೇಕು ಎಂದು ನುಡಿದರು. ಸನ್ಯಾಸಿಗಳನ್ನು ಒಂದು ರಾಜಕೀಯ,ಜಾತಿಗೆ ಸೀಮಿತಗೊಳಿಸುವುದು ಸರಿಯಲ್ಲ,ಸನ್ಯಾಸಿಗಳು ಪ್ರವಚನ.ಧರ್ಮ ಬೋಧನೆ,ಸಾಧನೆಗಳನ್ನು ಮಾಡಬಹುದು ಸುಧಾರಣೆಯ ಚಕ್ರವಿರುವ ರಾಜಕಾರಣಿಗಳು ಅದರ ಅನುಷ್ಠಾನಕ್ಕೆ ಪ್ರಯತ್ನಿಸಬೇಕು ಎಂದು ಹೇಳಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಸಭಾಧ್ಯಕ್ಷತೆ ವಹಿಸಿ ಮಾತನಾಡಿ,ದ.ಕ.ಜಿಲ್ಲೆ ನಿತ್ಯೋತ್ಸವದ ಜಿಲ್ಲೆಯಾಗಿದೆ ಎಂದರು. ಅತಿಥಿಯಾಗಿದ್ದ ಮಾಜಿ ಸಚಿವ ರಮಾನಾಥ ರೈ ಅವರು ಮಾತನಾಡಿ, ಬಸವಣ್ಣನವರ ವಿಚಾರಧಾರೆ ವರ್ತಮಾನ ಕಾಲದಲ್ಲು ಪ್ರಸ್ತುತವಾಗಿದೆ.ಪ್ರೀತಿಯಿಂದ ಮಾತ್ರ ಜಗತ್ತನ್ನು ಗೆಲ್ಲಲು ಸಾಧ್ಯ ಎಂದರು.
ಜಿಪಂ.ಸದಸ್ಯರಾದ ಕಮಾಲಾಕ್ಷಿ ಪೂಜಾರಿ,ಚಂದ್ರಪ್ರಕಾಶ್ ಶೆಟ್ಟಿ,ತಾಪಂ ಸದಸ್ಯೆ ಗಾಯತ್ರಿ ರವೀಂದ್ರ ಸಪಲ್ಯ, ಉದ್ಯಮಿ ಸೇಸಪ್ಪ ಕೋಟ್ಯಾನ್ ಅತಿಥಿಗಳಾಗಿ ಭಾಗವಹಿಸಿದ್ದರು. ,ಗೌರವಾಧ್ಯಕ್ಷರಾದ ರಘುನಾಥ ಸೋಮಯಾಜಿ ಎರಕಳ,ರಘುಸಪಲ್ಯ ನರಿಕೊಂಬು, ಸಂಚಾಲಕ ಪದ್ಮನಾಭ ಮಯ್ಯ, ಪ್ರ.ಕಾರ್ಯದರ್ಶಿ ಪ್ರೇಮನಾಥ ಶೆಟ್ಟಿ ಅಂತರ ಮೊದಲಾದವರು ಉಪಸ್ಥಿತರಿದ್ದರು.
ಇದೇವೇಳೆ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜಗನ್ನಾಥ ಬಂಗೇರ ನಿರ್ಮಲ್, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಎನ್.ಪ್ರಕಾಶ್ ಕಾರಂತ ನರಿಕೊಂಬುಅವರನ್ನು ಸನ್ಮಾನಿಸಲಾಯಿತು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜಗನ್ನಾಥ ಬಂಗೇರ ನಿರ್ಮಲ್ ಸ್ವಾಗತಿಸಿದರು. ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಎನ್.ಪ್ರಕಾಶ್ ಕಾರಂತ ನರಿಕೊಂಬು ಪ್ರಸ್ತಾವಿಸಿದರು.ಪ್ರ.ಕಾರ್ಯದರ್ಶಿ ಕೃಷ್ಣಪ್ಪ ಗಾಣಿಗ ವಂದಿಸಿದರು. ಕಲಾವಿದ ಎಚ್.ಕೆ.ನಯನಾಡು ಕಾರ್ಯಕ್ರಮ ನಿರೂಪಿಸಿದರು.
