ಕೋಲಾರ: ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ಕುರುಬ ಸಮುದಾಯವನ್ನು ಎಸ್.ಟಿ ವರ್ಗಕ್ಕೆ ಸೇರಿಸಲು ಒತ್ತಾಯಿಸಿ ಹಮ್ಮಿಕೊಂಡಿರುವ ರಾಜ್ಯಮಟ್ಟದ ಹೋರಾಟ ರೂಪುರೇಷೆಗಳನ್ನು ಚರ್ಚಿಸಲು ಜ.12 ರಂದು ನಗರದ ಕೆಇಬಿ ಸಮುದಾಯ ಭವನದಲ್ಲಿ ಪೂರ್ವಭಾವಿ ಸಭೆಯನ್ನು ಏರ್ಪಡಿಸಲಾಗಿದೆ ಎಂದು ಕುರುಬರ ಎಸ್.ಟಿ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಸಿ.ಎಸ್.ಸಾಗರ್ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿರುವ ಕುರುಬ ಸಮುದಾಯವನ್ನು ಎಸ್.ಟಿ ಮೀಸಲಾತಿಗೆ ಸೇರಿಸಬೇಕೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಫೆಬ್ರವರಿ 7 ರಂದು ಬೃಹತ್ ಹೋರಾಟ ಸಭೆಯನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದು. ಇದರ ಸಲುವಾಗಿ ಜ.12 ಮಂಗಳವಾರ ಬೆಳಗ್ಗೆ 11 ಗಂಟೆಗೆ ಕೆಇಬಿ ಸಮುದಾಯ ಭವನದಲ್ಲಿ ನಡೆಯುವ ಪೂರ್ವಭಾವಿ ಸಭೆಗೆ ಜಿಲ್ಲೆಯ ಕುರುಬ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮೀಸಲಾತಿ ಹೋರಾಟವನ್ನು ಯಶ್ವಸಿಗೊಳಿಸಬೇಕಾಗಿ ಮನವಿ ಮಾಡಿದರು.
ಈ ಪೂರ್ವಭಾವಿ ಸಭೆಗೆ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಪೀಠಾಧಿಪತಿಗಳು, ಸ್ವಾಮೀಜಿಗಳು, ಸಚಿವ ಕೆ.ಎಸ್ ಈಶ್ವರಪ್ಪರವ ಪುತ್ರ ಕಾಂತೇಶ್, ವಿಧಾನಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಸೇರಿದಂತೆ ರಾಜ್ಯ ಮಟ್ಟದ ಸಮುದಾಯದ ಮುಖಂಡರು ಭಾಗಿಯಾಗಿ ಎಸ್.ಟಿ ಮೀಸಲಾತಿ ಹೋರಾಟದ ಬಗ್ಗೆ ಮಾರ್ಗದರ್ಶನ ನೀಡಲ್ಲಿದ್ದಾರೆ ಎಂದು ತಿಳಿಸಿದರು. ಭಾರತ ದೇಶದಲ್ಲಿ ವಿಸ್ತಾರವಾಗಿ ಹರಡಿರುವ ಕುರುಬರು, ಮೂಲತಃ ಬುಡಕಟ್ಟು ಜನಾಂಗದವರಾಗಿದ್ದು, ಕರ್ನಾಟಕ ರಾಜ್ಯದಲ್ಲಿ ಜೇನು ಕುರುಬ, ಕಾಡು ಕುರುಬ, ಗೊಂಡ, ರಾಜಗೊಂಡ, ಕುರುಬ, ಕುರುಮನ್ಸ್ ಜಾತಿಗಳು ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿವೆ ಹಾಗೂ ಎಸ್.ಟಿ ಪಟ್ಟಿಯಲ್ಲಿ ಕ್ರಮ ಸಂಖ್ಯೆ 28 ರಲ್ಲಿರುವ ಕುರುಬ ಕೊಡಗು ಜಿಲ್ಲೆಗೆ ಸೀಮಿತವಾಗಿದೆ. ಈ ರೀತಿಯಾಗಿ ಎಲ್ಲ ಕುರುಬರಿಗೂ ಎಸ್.ಟಿ ಮೀಸಲಾತಿ ವಿಸ್ತರಿಸಲು ಸರ್ಕಾರಗಳನ್ನು ಒತ್ತಾಯಿಸಲಾಗುವುದು ಎಂದರು.
ಕುರುಬರ ಎಸ್.ಟಿ ಹೋರಾಟ ಸಮಿತಿಯ ಮಾಲೂರು ತಾಲೂಕಿನ ಅಧ್ಯಕ್ಷ ದೇವರಾಜ್ ಮಾತನಾಡಿ, ಎಸ್.ಟಿ ಮೀಸಲಾತಿಯಿಂದ ಶೈಕ್ಷಣಿಕವಾಗಿ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆವಿಗೂ ಸೌಲಭ್ಯಗಳು ದೊರೆಯುತ್ತದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಲ್ಲಾ ಇಲಾಖೆಗಳಲ್ಲಿ ಉದ್ಯೋಗ ಮೀಸಲಾತಿ ಹಾಗೂ ಕೃಷಿಕ್ಷೇತ್ರದಲ್ಲಿ ಹೆಚ್ಚಿನ ಸೌಲಭ್ಯಗಳು, ರಾಜಕೀಯ ಕ್ಷೇತ್ರಗಳಲ್ಲಿ ಹೆಚ್ಚಿನ ಅವಕಾಶ ಸಿಕ್ಕಿ ರಾಜ್ಯದಲ್ಲಿ ಹಿಂದುಳಿದಿರುವ ಕುರುಬ ಸಮುದಾಯ ಮುಖ್ಯವಾಹಿನಿಗೆ ಬರುಬೇಕು ಎಂಬುದೇ ನಮ್ಮ ಮೀಸಲಾತಿ ಹೋರಾಟದ ಆಶಯವಾಗಿದೆ. ಕುರುಬ ಸಮುದಾಯವನ್ನು ಎಸ್.ಟಿ ಮೀಸಲಾತಿಗೆ ಸೇರಿಸಲು ಬೇಕಾದ ದಾಖಲೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜನಾಂಗದ ಮುಖಂಡರರಾದ ಮು.ರಾಘವೇಂದ್ರ, ಟಿಲ್ಲಿ ಮಂಜುನಾಥ್, ಜನಾರ್ಧನ, ನಾಗರಾಜ್, ಕೀಲುಕೋಟೆ ರವಿ, ಮತ್ತಿತರರು ಉಪಸ್ಥಿತರಿದ್ದರು.
