ಕೋಲಾರ : ಜನವರಿ 6 ರಂದು ಮುಳಬಾಗಿಲು ತಾಲ್ಲೂಕಿನ ಎನ್ , ವಡ್ಡಹಳ್ಳಿ ಗ್ರಾಮದಲ್ಲಿ ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಅವರಿಂದ ರೈತರೊಂದಿಗೊಂದು ದಿನ ‘ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಬಕಾರಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ನಾಗೇಶ್ ಅವರು ತಿಳಿಸಿದರು.

ಶನಿವಾರ ಜಿಲ್ಲಾಧಿಕಾರಿಗಳ ಕಛೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯ ಉದ್ದೇಶಿಸಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಕೃಷಿ ಸಚಿವರು ಮತ್ತು ನಾನು ದೈನಂದಿನ ಕೃಷಿ ಚಟುವಟಿಕೆಯಲ್ಲಿ ಸ್ವತ : ಭಾಗಿಗಳಾಗಿ ರೈತ ಸಮಸ್ಯೆಗಳನ್ನು ಹಾಗೂ ಬೇಡಿಕೆಗಳನ್ನು ಆಲಿಸಿ ಪರಿಹಾರ ಒದಗಿಸಲಾಗುವುದು . ಕಾರ್ಯಕ್ರಮಕ್ಕೆ ಸುಮಾರು 4 ಸಾವಿರ ಜನ ಸೇರುವ ನಿರೀಕ್ಷೆ ಇದೆ . ಬೆಳಿಗ್ಗೆ 9.00 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ ಒಂದು ದಿನ ಪೂರ್ತಿ ರೈತರೊಂದಿಗೆ ಇರುತ್ತೇವೆ . ಗೂಗಲ್ ಮೀಟ್ ಮೂಲಕ ರೈತ ಸಂಪರ್ಕ ಕೇಂದ್ರಗಳಲ್ಲಿನ ರೈತರೊಂದಿಗೆ ಸಂವಾದ ಕಾರ್ಯಕ್ರಮವನ್ನು ಅಂದು 3 ಗಂಟೆಯಿಂದ 4 ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು .

ಕೋಲಾರ ಜಿಲ್ಲೆಯ ಖಷ್ಠಿ ಕೃಷಿಗೆ ಪ್ರಾಮುಖ್ಯತೆ ನೀಡಿದ ಜಿಲ್ಲೆಯಾಗಿದ್ದು , ಜಿಲ್ಲೆಯಲ್ಲಿ ಯಾವುದೇ ಶಾಶ್ವತ ನೀರಾವರಿ ಮೂಲಗಳಿಲ್ಲದೆ ಅಂತರ್ಜಲಮಟ್ಟವು ಕುಸಿದಿದೆ . ಆದರೂ ಇರುವ ಅಲ್ಪ ಸ್ವಲ್ಪ ನೀರಿನಲ್ಲಿ ಕೋಲಾರ ರೈತರು ಕೃಷಿ , ತೋಟಗಾರಿಕೆ , ರೇಷ್ಮೆ ಮತ್ತು ಪಶುಸಂಗೋಪನೆಗಳೊಂದಿಗೆ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಯಶ್ವಸಿಯಾಗಿದ್ದಾರೆ . ಜಿಲ್ಲೆಯಲ್ಲಿ ರಾಗಿ , ತೊಗರಿ , ಅವರೆ , ಅಲಸಂದೆ , ನೆಲಗಡಲೆ , ಟೊಮೋಟೊ ಹಾಗೂ ಮಾವು ಬೆಳೆಗಳನ್ನು ಹೆಚ್ಚಾಗಿ ಬೆಳೆಯುತ್ತಾರೆ ಎಂದು ಮಾಹಿತಿ ನೀಡಿದರು , ಕಾರ್ಯಕ್ರಮದ ದಿನ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಆಧುನಿಕ ಕೃಷಿ ಮಾಡುತ್ತಿರುವ ಅಶ್ವಥಮ್ಮ ಹಾಗೂ ಬಾಬು ಅವರು ತಾಕಿಗೆ ಭೇಟಿ ನೀಡಿ ವಿಕ್ಷೀಸಲಾಗುವುದು . ಹುಲ್ಲನ್ನು ಚಾಫ್ ಕಟರ್‌ನಿಂದ ಕತ್ತರಿಸಿ ಹಸುಗಳಿಗೆ ತಿನ್ನಿಸುವುದು ಮತ್ತು ಹಾಲನ್ನು ಕರೆಯುವುದು , ರೇಷ್ಮೆ ಸಾಕಾಣಿಕೆ , ಹಸಿರೆಲೆ ಗೊಬ್ಬರ ಬಿತ್ತನೆ , ಆಲೂಗಡ್ಡೆ , ಟೊಮೋಟೊ , ಕೊತ್ತಂಬರಿ ಬೀಜ ಬಿತ್ತನೆ , ತೊಗರಿ ಕಟಾವು , ಸೊಗಡು ಅವರೆ ಕಾಯಿ ಬಿಡಿಸುವುದು ಇನ್ನೂ ಮುಂತಾದ ಕೃಷಿ ಚಟುವಟಿಕೆ ಕಾರ್ಯಗಳನ್ನು ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದರು , ಜಿಲ್ಲಾಧಿಕಾರಿಗಳಾದ ಸಿ.ಸತ್ಯಭಾಮ ಅವರು ಮಾತನಾಡಿ , ಇದೊಂದು ಸುಗ್ಗಿಯ ಕಾರ್ಯಕ್ರಮವಾಗಿದ್ದು , ಈಗಾಗಲೇ ಮಂಡ್ಯ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು . ಎರಡನೇಯದಾಗಿ ಕೋಲಾರ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ . ಈ ಕಾರ್ಯಕ್ರಮದಲ್ಲಿ ಕೃಷಿಯನ್ನು ಹೇಗೆ ಲಾಭದಾಯವಾಗಿ ಮಾಡಬಹುದು ಎಂಬುದನ್ನು ಮಾನ್ಯ ಕೃಷಿ ಸಚಿವರು ತಿಳಿಸುವರು , ಕೋಲಾರ ಜಿಲ್ಲೆಯ ರೈತರು ಸ್ವಾಭಿಮಾನಿಗಳಾಗಿದ್ದು , ಅಂತರ್‌ ಬೇಸಾಯ ಪದ್ಧತಿಗಳನ್ನು ಅಳವಡಿಸಿಕೊಂಡು ಒಂದು ಬೆಳೆ ಕೈಕೊಟ್ಟರು ಮತ್ತೊಂದು ಬೆಳೆಯಲ್ಲಿ ಲಾಭ ಗಳಿಸುತ್ತಾರೆ ಎಂದು ಕೃಷಿ ಸಚಿವರು ಕೋಲಾರದ ರೈತರನ್ನು ಇತರೇ ಜಿಲ್ಲೆಗಳಲ್ಲಿ ಉದಾಹರಣೆಯಾಗಿ ನೀಡುತ್ತಾರೆ ಎಂದು ಮಾಹಿತಿ ನೀಡಿದರು .

ಕೃಷಿಯ ಆರೋಗ್ಯಕರ ಚಟುವಟಿಕೆಗಳನ್ನು ಕಾರ್ಯಕ್ರಮದ ದಿನ ಹಮ್ಮಿಕೊಳ್ಳಲಾಗಿದೆ . ರೈತನ ಜೊತೆಗೆ ಅವರ ಮಡದಿಯು ಎಲೆಮರೆ ಕಾಯಿಯಾಗಿ ದುಡಿಯುತ್ತಾಳೆ . ಆದ್ದರಿಂದ ರೈತ ಮಹಿಳೆಯೂ ಸೇರಿದಂತೆ ರೈತ ದಂಪತಿಗಳಿಗೆ ಸನ್ಮಾನ ಮಾಡಲಾಗುವುದು . ಕೃಷಿಯನ್ನು ಹೇಗೆ ಋಷಿಯಾಗಿ ಮಾಡುವುದು ಎಂಬುದನ್ನು ತಿಳಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ . ರೈತರು ಹೆಚ್ಚು ಹೆಚ್ಚು ಆಹಾರ ಪದಾರ್ಥಗಳನ್ನು ಉತ್ಪಾದನೆ ಮಾಡಿ ಹೆಚ್ಚು ಲಾಭ ಗಳಿಸಬೇಕು ಎಂದು ತಿಳಿಸಿದರು . ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ರೂಪಾದೇವಿ ಅವರು ಮಾತನಾಡಿ ಮುಂಗಾರು ಬೆಳೆ ಸಮೀಕ್ಷೆ ಯಶಸ್ವಿಯಾಗಿದೆ . ಈಗ ಹಿಂಗಾರು ಬೆಳೆ ಸಮೀಕ್ಷೆ ಪ್ರಾರಂಭವಾಗಿದ್ದು , ಖಾಸಗಿ ನಿವಾಸಿಗಳು ಜಮೀನಿನ ಸರ್ವೇಗೆ ಬಂದಾಗ ಮೂಲ ಆಧಾರ್‌ ಕಾರ್ಡ್‌ನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಲು ನೀಡುವ ಮೂಲಕ ಆಧಾರ್ ನಂಬರ್‌ನ್ನು ಫೀಡ್ ಮಾಡಿಸಬೇಕು ಎಂದು ಮನವಿ ಮಾಡಿದರು .

ಪತ್ರಿಕಾ ಗೋಷ್ಟಿಯಲ್ಲಿ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ಗಾಯಿತ್ರಿ ಅವರು ಉಪಸ್ಥಿತರಿದ್ದರು .

ವರದಿ- ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

By Suddi9 Author

Suddi9

Leave a Reply

Your email address will not be published. Required fields are marked *