ಬಂಟ್ವಾಳ: ತುಂಬೆ ಗ್ರಾಮ ಪಂಚಾಯತ್ ನ ಒಂದು ವಾರ್ಡ್ ನಲ್ಲಿ ಪರಿಶಿಷ್ಠ ಪಂಗಡ ಮಹಿಳೆಗೆ ಮೀಸಲಾಗಿದ್ದ ಸ್ಥಾನಕ್ಕೆ ಯಾವುದೇ ಅಭ್ಯರ್ಥಿ ನಾಮಪತ್ರ ಸಲ್ಲಿಕೆಯಾಗದ ಕಾರಣ ಕೊನೆಗಳಿಗೆ ಪರಿಶಿಷ್ಠ ಜಾತಿ ಸೇರಿದ ಮಹಿಳೆಯೋರ್ವರು ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ವಿದ್ಯಮಾನ ನಡಿದಿದ್ದು, ಹಠಾತ್ ನಡೆದ ಈ ಬೆಳವಣಿಗೆ ಪಂಚಾಯತ್ ಕಚೇರಿ ಪರಿಸರದಲ್ಲಿ ಕೆಲಕಾಲ ಗೊಂದಲಕ್ಕೆ ಕಾರಣವಾಯಿತು. 
ನಾಮಪತ್ರ ಸಲ್ಲಿಕೆಗೆ ಶುಕ್ರವಾರ ಕೊನೆದಿನವಾಗಿದ್ದು, ಮಧ್ಯಾಹ್ನ 3 ಗಂಟೆಯವರೆಗೆ ಅವಕಾಶವಿತ್ತು.ಆದರೆ ನಾಮಪತ್ರ ಸಲ್ಲಿಕೆಯ ಅವಧಿ ಸಮೀಪಿಸುತ್ತಿದ್ದಂತೆ ಇಡೀ ತುಂಬೆ ಗ್ರಾಮದಲ್ಲಿರುವ ಪ.ಪಂ.ಸೇರಿದ ಮತದಾರರ ಪೈಕಿ ಯಾರೋಬ್ಬರು ನಿಗದಿತ ಸ್ಥಾನಕ್ಕೆ ನಾಮಪತ್ರ ಸಲ್ಲಿಸದಿದ್ದು,ಇದನ್ನು ಗಮನಿಸಿದ ಸ್ಥಳೀಯ ಬಿಜೆಪಿ ನಾಯಕರು ಪರಿಶಿಷ್ಠ ಜಾತಿಗೆ ಸೇರಿದ ಮಹಿಳೆ ಜಯಂತಿ ಎಂಬವರನ್ನು ತಮ್ಮ ಬೆಂಬಲಿತ ಅಭ್ಯರ್ಥಿಯನ್ನಾಗಿಸುಮಾರು 2.45 ರ ಹೊತ್ತಿಗೆ ನಾಮಪತ್ರ ಸಲ್ಲಿಸಿದರು.
ಈ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಮತ್ತು ಗ್ರಾಪಂ ನ ಮಾಜಿ ಉಪಾಧ್ಯಕ್ಷರೊಬ್ಬರು ಪಂಚಾಯತ್ ಕಚೇರಿಗಾಗಮಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಎರಡೂ ಪಕ್ಷದ ಕಾರ್ಯಕರ್ತರು ಜಮಾಯಿಸಿ ಮಾತಿನ ಚಕಮಕಿ ನಡೆದು ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ಸುದ್ದಿ ತಿಳಿದ ತಹಶಿಲ್ದಾರ್ ಎಸ್.ಆರ್ . ರಶ್ಮೀ, ಬಂಟ್ವಾಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿಯನ್ನು ತಹಬಂದಿಗೆ ತಂದರು. ನಾಮಪತ್ರ ಅವಧಿ ಮೀರುವ ಮುನ್ನ ಪ.ಜಾತಿಗೆ ಸೇರಿದ ಮಹಿಳೆಯ ನಾಮಪತ್ರವನ್ನು ಚುನಾವಣಾಧಿಕಾರಿ ನಿಯಮಬದ್ದವಾಗಿ ನಾಮಪತ್ರ ಸ್ವೀಕಾರವನ್ನು ಸ್ವೀಕರಿಸಿದ್ದು,ಇದರ ಮುಂದಿನ ವಿಚಾರಣೆ ತಾಲೂಕು ಚುನಾವಣಾಧಿಕಾರಿ ನಡೆಸುತ್ತಿದ್ದಾರೆ.ಸೀಟಿಗಾಗಿ ಹಾತೊರೆಯುವ ಈ ಕಾಲಘಟ್ಟದಲ್ಲಿ ನಿಗದಿತ ಮೀಸಲಾತಿಗೆ ಗ್ರಾಮದಲ್ಲಿರುವ ಯಾರೊಬ್ಬರು ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿಯದ ಪ್ರಸಂಗ ಬಂಟ್ವಾಳತಾಲೂಕಿನಲ್ಲಿ ಇದೇ ಮೊದಲ ಬಾರಿ ನಡೆದಿದೆ.
