ಮೂಡುಬಿದಿರೆ: ಮೂಡುವೇಣುಪುರ ಶ್ರೀ ವೆಂಕಟರಮಣ ದೇವಸ್ಥಾನದ ವರ್ಷಾವಧಿ ಕಾರ್ತಿಕ ದೀಪೋತ್ಸವ ಮಹೋತ್ಸವ ಸಂಭ್ರಮ ಭಕ್ತಾದಿಗಳ ಉತ್ಸಾಹದ ಪಾಲ್ಗೊಳ್ಳುವಿಕೆಯಿಂದ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವೈಭವದಿಂದ ನೆರವೇರಿತು.

ಉತ್ಥಾನ ದ್ವಾದಶಿ ತುಲಸೀಪೂಜಾ ಉತ್ಸವದೊಂದಿಗೆ ಆರಂಭ ಕಂಡಿದ್ದ ಮಹೋತ್ಸವ ಮಂಗಳವಾರ ಅವಭೃತೋತ್ಸವದೊಂದಿಗೆ ಸಂಪನ್ನಗೊಂಡಿತು.
ಕೆರೆ ದೀಪೋತ್ಸವ, ನವಶಕ್ತಿ ಮಿತ್ರ ವೃಂದದ 30ನೇ ವರ್ಷದ ಸ್ಪರ್ಧಾ ಕಾರ್ಯಕ್ರಮಗಳ ವಿಜೇತರಿಗೆ ಬಹುಮಾನ ವಿತರಣೆ, ಪ್ರತಿಭಾ ಪುರಸ್ಕಾರ. ವಿದ್ಯಾರ್ಥಿ ವೇತನ ವಿತರಣೆ, ಗೌರವಾರ್ಪಣೆ ಜರಗಿತು.

ಸೋಮವಾರ ಕಾರ್ತಿಕ ದೀಪೋತ್ಸವ ಅಂಗವಾಗಿ ವನಮಂಟಪದಲ್ಲಿ ಶ್ರೀದೇವಳದ ಪಟ್ಟದ ಶ್ರೀದೇವಿ ಭೂದೇವಿ ಸಹಿತ ಶ್ರೀ ವೆಂಕಟರಮಣ ದೇವರು, ಉತ್ಸವ ಶ್ರೀ ರುಕ್ಮಿಣೀ ಸತ್ಯಭಾಮ ಸಹಿತ ಗೋಪಾಲ ಕೃಷ್ಣ , ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನದ ಉತ್ಸವ ಶ್ರೀ ರುಕ್ಮಿಣೀ ಸತ್ಯಭಾಮ ಸಹಿತ ಗೋಪಾಲ ಕೃಷ್ಣ ದೇವರ ಬಿಂಬಗಳಿಗೆ ಅಭಿಷೇಕ, ಮಹಾಪೂಜೆ ನೆರವೇರಿತು.

ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಎಂ. ಶಾಸಕ ಉಮಾನಾಥ ಕೋಟ್ಯಾನ್, ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್ ದಂಪತಿಯನ್ನು ಗೌರವಿಸಲಾಯಿತು. ವನಭೋಜನ, ಉತ್ಸವ ಹೊರಟು ಶ್ರೀ ಹನುಮಂತ ದೇವಸ್ಥಾನದಲ್ಲಿ ವಿಶೇಷ ರಂಗಪೂಜೆ ಜರಗಿತು.
ಕಾರ್ತಿಕ ದೀಪೋತ್ಸವದಂದು ಶ್ರೀ ಹನುಮಂತ ದೇವರ ಸನ್ನಿಧಿಯಲ್ಲಿ ಒಡೆಯ ಶ್ರೀ ವೆಂಕಟರಮಣ ದೇವರು, ಮಹಾಲಸಾ ನಾರಾಯಣೀ ದೇವಳದ ಉತ್ಸವ ದೇವರುಗಳನ್ನು ಜತೆಗೂಡಿ ಕಾಣುವ ಅಪರೂಪದ ಈ ಮಹೋತ್ಸವದ ಕ್ಷಣದಲ್ಲಿ ಭಜಕರು ಹೆಚ್ಚಿನ ಸಂಖ್ಯೆಯಲ್ಲಿ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ನಂತರ ಶ್ರೀ ದೇವರುಗಳ ಪೇಟೆ ಸವಾರಿ, ಕಟ್ಟೆ ಪೂಜೆ, ರಾತ್ರಿಪೂರ್ತಿ ಜರಗಿದ್ದು ಮಂಗಳವಾರ ಬೆಳಗ್ಗೆ ದೇವರುಗಳ ಸಿಂಹಾಸನಾರೋಹಣ, ಅಪರಾಹ್ನ ಪೇಟೆಯಲ್ಲಿ ಅವಭೃತ ಉತ್ಸವ ನಡೆಯಿತು. ಕೊರೋನಾ ಕಾರಣದಿಂದಾಗಿ ದೀರ್ಘಾವಧಿಗೆ ಧಾರ್ಮಿಕ ಕಾರ್ಯಕ್ರಮಗಳ ನಿರ್ಬಂಧದ ಬಳಿಕ ಮೊದಲ ಬಾರಿಗೆ ಪೇಟೆಯಲ್ಲಿ ಭಜಕರು ಉತ್ಸಾಹದಿಂದ ಅವಭೃತೋತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
