ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ, ಸರಕಾರಿ ಪ್ರಥಮ ದರ್ಜೆ ಕಾಲೇಜು ಸಿದ್ಧಕಟ್ಟೆ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ಬಂಟ್ವಾಳ ಇವುಗಳ ಐಕ್ಯೂಎಸಿ ಘಟಕಗಳ ಜಂಟಿ ಆಶ್ರಯದಲ್ಲಿ ಎಲ್ಎಂಎಸ್ ಪ್ರಾಜೆಕ್ಟ್ ವೀಡಿಯೋ ತಯಾರಿ ಕಾರ್ಯಾಗಾರವು ಬಿ.ಸಿ ರೋಡಿನ ರೋಟರಿಬಾಲಭವನದ ಗೋಲ್ಡನ್ ಜ್ಯುಬುಲಿ ಸಭಾಭವನದಲ್ಲಿ ಜರಗಿತು, ರೋಟರಿ 3180 ರ ಜಿಲ್ಲಾ ನಿಯೋಜಿತ ಗವರ್ನರ್ ರೊ. ಪ್ರಕಾಶ್ ಕಾರಂತ್ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ಕೊರೋನಾ ಕಾಲಘಟ್ಟದಲ್ಲಿ ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನಕ್ಕೆ ಶಿಕ್ಷಕ ಸ್ನೇಹಿ ತರಬೇತಿಗಳು ನವಚೈತನ್ಯವನ್ನು ತಂದುಕೊಡುತ್ತದೆ ಎಂದರು.
ಮಂಗಳೂರು ಪ್ರಾದೇಶಿಕ ಕಛೇರಿ ಜಂಟಿ ನಿರ್ದೇಶಕ ಡಾ.ಅಪ್ಪಾಜಿ ಗೌಡ ಮಾತನಾಡಿ, ಕೋವಿಡ್ ಕಾಲದಲ್ಲಿ ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ಕಲಿಕಾ ಸಾಮಾಗ್ರಿಗಳನ್ನು ಒದಗಿಸುವ ಉದ್ದೇಶವನ್ನು ಹೊಂದಿದ್ದು, ಈ ಯೋಜನೆಯನ್ನು ಯಶಸ್ವಿಗೊಳಿಸಲು ಅಧ್ಯಾಪಕರಿಗೆ ಹೆಚ್ಚುವರಿ ತರಬೇತಿಯನ್ನು ನೀಡುವ ಸಲುವಾಗಿ ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ವಿಶೇಷಾಧಿಕಾರಿಗಳಾದ ಪ್ರೊ.ಸ್ಟೀಫನ್ ಕ್ವಾಡ್ರಸ್ ,
ಡಾ. ಜಯಕರ ಭಂಡಾರಿಉಪಸ್ಥಿತರಿದ್ದರು.ಬಂಟ್ವಾಳ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಗಿರೀಶ್ ಭಟ್ ಅಜಕ್ಕಳ , ಸಿದ್ಧಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಸೌಮ್ಯ ಹೆಚ್.ಕೆ,ಬಂಟ್ವಾಳ ರೋಟರಿ ಕ್ಲಬ್ ನ ಕಾರ್ಯದರ್ಶಿ ರೋ. ವಾಣಿ ಪಿ ಕಾರಂತ್ , ರೋ. ಮಂಜುನಾಥ ಆಚಾರ್ಯ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಇದರ ಅಧ್ಯಕ್ಷ ಕೆ ನಾರಾಯಣ ಹೆಗಡೆ ವಹಿಸಿ ಕೋವಿಡ್ ಸಂಕಷ್ಟದಲ್ಲಿ ಶೈಕ್ಷಣಿಕ ಚಟುವಟಿಕೆಗಳಿಗೆ ಹೊಸ ಆಯಾಮ ನೀಡಿದ ಆನ್ಲೈನ್ ತರಗತಿಗಳು ಹಾಗೂ ತರಬೇತಿ ಕಾರ್ಯಕ್ರಮವನ್ನು ಶ್ಲಾಘಿಸಿದರು. ಸಂಪನ್ಮೂಲ ವ್ಯಕ್ತಿಯಾಗಿದ್ದ ಪ್ರೊ.ಮಣಿಭೂಷಣ್ ಡಿಸೋಜ ತರಬೇತಿ ನೀಡಿದರು.
ಐಕ್ಯೂಎಸಿ ಸಂಚಾಲಕರಾದ ವಿನಯ್ ಎಂ.ಎಸ್ ಸ್ವಾಗತಿಸಿದರು. ಸಹ ಸಂಚಾಲಕರಾದ ನಸೀಮಾ ಬೇಗಂ ವಂದಿಸಿದರು. ಪ್ರೊ.ನಂದಕಿಶೋರ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಾಗಾರದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ವಾಮದಪದವು, ಪುಂಜಾಲಕಟ್ಟೆ, ಮುಡಿಪು, ವಿಟ್ಲ ಹಾಗೂ ಬಂಟ್ವಾಳ ಎಸ್ವಿಎಸ್ ಕಾಲೇಜಿನ ಸಹ ಹಾಗೂ ಸಹಾಯಕ ಪ್ರಾಧ್ಯಾಪಕರು ಭಾಗವಹಿಸಿದ್ದರು.

