ತಲಪಾಡಿ: ಮೂರನೇ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನದ ಪ್ರಯುಕ್ತ, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ನ್ಯಾಚುರೋಪತಿ, ಪುಣೆ ಯ ಸಹಕಾರದಲ್ಲಿ ಶಾರದಾ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ತಲಪಾಡಿಯಲ್ಲಿ ನವೆಂಬರ್ 16 ರಿಂದ 18ರವರೆಗೆ ಮೂರು ದಿನಗಳ ಉಚಿತ ಪ್ರಕೃತಿ ಚಿಕಿತ್ಸಾ ಶಿಬಿರ, ಉಪನ್ಯಾಸ ಮತ್ತು ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು.
ನವೆಂಬರ್ 16ರಂದು ಶಿಬಿರದ ಉದ್ಘಾಟನೆಯನ್ನು ಹಿರಿಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ತಜ್ಞ ಡಾ. ಗೋವಿಂದ ಭಟ್ ಮತ್ತು ಮಾಜಿ ವಿಧಾನ ಪರಿಷತ್ ಸದಸ್ಯ ಶ್ರೀ ಮೋನಪ್ಪ ಭಂಡಾರಿ ನೆರವೇರಿಸಿದರು. ತಾರೀಕು 17ರಂದು ಲಯನ್ಸ್ ಕ್ಲಬ್ ಜಿಲ್ಲೆ 317D ಇವರ ಸಹಯೋಗದೊಂದಿಗೆ ಕದ್ರಿ ಮಲ್ಲಿಕಟ್ಟೆಯ ಲಯನ್ಸ್ ಸೇವಾ ಮಂದಿರದಲ್ಲಿ ಸಂಜೆ ಗಂಟೆ 4.00ರಿಂದ ಆಯುಷ್ ಫಾರ್ ಇಮ್ಯೂನಿಟಿ ಎಂಬ ವಿಷಯದ ಕುರಿತು ನಡೆದ ಉಪನ್ಯಾಸ ಮಾಲಿಕೆಯಲ್ಲಿ ಡಾ. ಮಹಮ್ಮದ್ ರಫೀಕ್, ಡಾ. ರಾಜೇಶ್ ಪಾದೇಕಲ್ ಮತ್ತು ಡಾ. ವಿಜಯಲಕ್ಷ್ಮಿ ಇವರು ಉಪನ್ಯಾಸ ನೀಡಿದರು.

ದಿನಾಂಕ 18, ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನದಂದು ಶಾರದಾ ಆಯುರ್ಧಾಮ ಆವರಣದಲ್ಲಿ ಪೋಸ್ಟ್ ಕೋವಿಡ್ ಆಯುಷ್ ಕೇರ್ ಕೇಂದ್ರವನ್ನು ಮಾನ್ಯ ಜಿಲ್ಲಾಧಿಕಾರಿ, ಮಾನ್ಯ ಶಾಸಕ ಮತ್ತು ಇತರೆ ಗಣ್ಯರ ಸಮ್ಮುಖದಲ್ಲಿ ಲೋಕಾರ್ಪಣೆಗೊಳಿಸಲಾಯಿತು. ಸಂಜೆ ಗಂಟೆ 7.00ರಿಂದ ರೋಟರಿ ಕ್ಲಬ್ ಜಿಲ್ಲೆ3181 ಇವರು ಆಯೋಜಿಸಿದ ವೆಬಿನಾರ್ ನಲ್ಲಿ ಡಾ. ಪದ್ಮಶ್ರೀ ಮತ್ತು ಡಾ. ಸುಪ್ರಿಯಾ ಇವರು ಪ್ರಕೃತಿ ಚಿಕಿತ್ಸೆ ಮತ್ತು ಯೋಗದ ಮೂಲಕ ಜೀವಚೈತನ್ಯ ಪಡೆಯುವುದರ ಬಗ್ಗೆ ಮಾಹಿತಿ ನೀಡಿದರು. ಮೂರು ದಿನ ನಡೆದ ಈ ಶಿಬಿರದಲ್ಲಿ ನೂರಾರು ಆರೋಗ್ಯಾರ್ಥಿಗಳ ಜೊತೆಗೆ, ಪ್ರಸಿದ್ಧ ಸೇವಾ ಸಂಸ್ಥೆಗಳಾದ ಲಯನ್ಸ್ ಮತ್ತು ರೋಟರಿ ಕ್ಲಬ್ಬುಗಳ ಜಿಲ್ಲಾ ಗವರ್ನರ್ಗಳು ಮತ್ತು ಸದಸ್ಯರು ಭಾಗವಹಿಸಿದ್ದರು.

