ಕೋಲಾರ: ಜಿಲ್ಲೆಯಲ್ಲಿ ಪ್ರತಿ ಗ್ರಾಮ ಪಂಚಾಯಿತಿಗೊಂದು ರಾಗಿ ಖರೀದಿ ಕೇಂದ್ರ ತೆರೆದು ಪ್ರತಿ ಕ್ವಿಂಟಾಲ್‍ಗೆ 5 ಸಾವಿರ ಬೆಂಬಲ ಬೆಲೆ ಘೋಷಣೆ ಮಾಡಿ, ರಸ್ತೆಗಳಲ್ಲಿ ಒಕ್ಕಣೆ ಮಾಡುವ ರೈತರಿಗೆ ಕರಪತ್ರಗಳ ಮೂಲಕ ಜಾಗೃತಿ ಮೂಡಿಸುವಲ್ಲಿ ವಿಫಲವಾಗಿರುವ ಕೃಷಿ ಇಲಾಖೆ ಅಧಿಕಾರಿಗಳ ಧೋರಣೆ ಖಂಡಿಸಿ ನ.17ರಂದು ಜಿಲ್ಲೆಗೆ ಆಗಮಿಸುತ್ತಿರುವ ಕೃಷಿ ಸಚಿವರಿಗೆ ಘೇರಾವ್ ಹಾಕಲು ರೈತಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.
ನಗರದಲ್ಲಿ ನಡೆದ ಸಭೆಯ ನೇತೃತ್ವವಹಿಸಿ ಮಾತನಾಡಿದ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಜಿಲ್ಲೆಯಲ್ಲಿ ಸುಮಾರು 20 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಉತ್ತಮ ಮಳೆ ಜೊತೆಗೆ ಊಹೆ ಮಾಡದಷ್ಟು ರೀತಿಯಲ್ಲಿ ರಾಗಿ ಬೆಳೆಯೂ ಸಮೃದ್ಧವಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ರೈತರು ರಾಗಿಯನ್ನು ಮನೆಗಳಿಗೆ ತುಂಬಿ ಕೊಳ್ಳಬೇಕಿದ್ದರೂ ಸಾಕಷ್ಟು ಸಮಸ್ಯೆಗಳು ಎದುರಿಸುವಂತಾಗಿದೆ.
ರಾಗಿ ಬೆಳೆ ರಕ್ಷಣೆಗೆ ಪ್ರಮುಖವಾಗಿ ಟಾರ್ಫಲ್‍ಗಳು ಬೇಕಾಗಿದ್ದರೂ ಸರಬರಾಜು ಮಾಡುವಲಿ ಸಂಬಂಧಪಟ್ಟ ಸಂಪೂರ್ಣವಾಗಿ ವಿಫಲವಾಗಿದೆ. ಇಲಾಖೆಯಿಂದ ಬರುವ ಟಾರ್ಫಲ್‍ಗಳು ಅರ್ಹ ಫಲಾನುಭವಿಗಳಿಗೆ ತಲುಪದೆ ಶಾಸಕರು, ಜಿಪಂ, ತಾಪಂ, ಅಧ್ಯಕ್ಷರು, ಸದಸ್ಯರ ಬೆಂಬಲಿಗರ ಪಾಲಾಗುತ್ತಿದೆ. ಜೊತೆಗೆ ಕಾಳಸಂತೆಯಲ್ಲಿಯೂ ಟಾರ್ಫಲ್‍ಗಳ ಮಾರಾಟ ದಂಧೆ ಜೋರಾಗಿದ್ದು, ಖಾಸಗಿ ಅಂಗಡಿಯವರು, ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ಗ್ರಾಮೀಣ ಭಾಗದಲ್ಲಿ ರಾಗಿ ಕಟಾವಿಗೆ 500ರೂ ನೀಡಿದರೂ ಕೂಲಿ ಕಾರ್ಮಿಕರು ಸಿಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಖಾಸಗಿಯವರ ಕಟಾವು ಯಂತ್ರಗಳಿಗೆ ಸಾವಿರಾರೂ ರೂಪಾಯಿ ಬಾಡಿಗೆ ನೀಡಿ ಕಟಾವು ಮಾಡಿಸಬೇಕಾದ ಪರಿಸ್ಥಿತಿಯಿದೆ. ರಾಗಿ ಕಟಾವಿನ ಬಳಿಕ ಒಕ್ಕಣೆ ಮಾಡಲು ಕಣಗಳು ಇಲ್ಲದಿರುವುದರಿಂದಾಗಿ ರೈತರು ವಿಧಿಯಿಲ್ಲದೆ ರಸ್ತೆಗಳಲ್ಲಿ ತೆನೆಗಳನ್ನು ಹಾಕುತ್ತಿರುವುದು ಸಾಮಾನ್ಯವಾಗಿ ಕಂಡು ಬರುತ್ತಿದ್ದು, ಅಪಘಾತಗಳಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಆಗಲೂ ರೈತರೇ ಸ್ವತಃ ತೊಂದರೆಗೆ ಒಳಗಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಹೀಗಾಗಿ ಇಲಾಖೆಯಿಂದ ರೈತರಿಗೆ ಜಾಗೃತಿ ಮೂಡಿಸಲು ಕರ ಪತ್ರಗಳನ್ನು ಹೊರಡಿಸಬೇಕಾಗಿದೆ. ಒಟ್ಟಾರೆ ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿ ಶೀಘ್ರವಾಗಿ ರಾಗಿ ಬೆಳೆ ಸಂರಕ್ಷಣೆಗೆ ಅವಶ್ಯವಿರುವ ಟಾರ್ಫಲ್‍ಗಳನ್ನು ಬಡ ರೈತರಿಗೆ ಕೂಡಲೇ ಸರಬರಾಜು ಮಾಡಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ಟಾರ್ಫಲ್ ದಂಧೆಗೆ ಕಡಿವಾಣ ಹಾಕಬೇಕು.
ಜತೆಗೆ ಕೂಲಿ ಕಾರ್ಮಿಕರಿಗೆ ಸಾಕಷ್ಟು ಬೇಡಿಕೆ ಇರುವುದರಿಂದಾಗಿ ಪ್ರತಿ ಗ್ರಾಮ ಪಂಚಾಯಿತಿಗೂ ತಲಾ ಒಂದು ರಾಗಿ ಕಟಾವು, ಒಕ್ಕಣೆ ಯಂತ್ರಗಳನ್ನು ಸರ್ಕಾರದಿಂದಲೇ ನೀಡಬೇಕೆಂದು ಆಗ್ರಹಿಸಿ ಈಗಾಗಲೇ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಹೀಗಾಗಿ ಸಚಿವರಿಗೆ ಘೇರಾವ್ ಹಾಕಲು ತೀರ್ಮಾನಿಸಿರುವುದಾಗಿ ತಿಳಿಸಿದರು.
ಸಭೆಯಲ್ಲಿ ರೈತಸಂಘದ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಐತಾಂಡಹಳ್ಳಿ ಮುನ್ನ, ಕೋಲಾರ ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಬಂಗಾರಪೇಟೆ ತಾಲೂಕು ಅಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್, ಮುಳಬಾಗಿಲು ಅಧ್ಯಕ್ಷ ಫಾರೂಖ್‍ಪಾಷ, ಮಾಲೂರು ಅಧ್ಯಕ್ಷ ಮಾಸ್ತಿ ವೆಂಕಟೇಶ್, ಶ್ರೀನಿವಾಸಪುರ ಅಧ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ, ಕೆಜಿಎಫ್ ಅಧ್ಯಕ್ಷ ಅಲ್ತಾಪ್ ಹುಸೇನ್, ಸ್ವಸ್ತಿಕ್ ಶಿವು, ಚಾಂದ್‍ಪಾಷ, ಜಮೀರ್ ಪಾಷ, ಹೆಬ್ಬಣಿ ಆನಂದರೆಡ್ಡಿ, ಸಾಗರ್, ರಂಜಿತ್, ನವೀನ್, ವೇಣು, ಕೇಶವ, ವಿಜಯ್‍ಪಾಲ್, ಸುಪ್ರಿಂಚಲ ಮತ್ತಿತರರು ಉಪಸ್ಥಿತರಿದ್ದರು.
