ಬಂಟ್ವಾಳ: ಮಾರಾಟ ಮಾಡಲೆಂದು ಕಾರಿನಲ್ಲಿ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ವೇಳೆ ಡಿಸಿಐಬಿ ಇನ್ ಸ್ಪೆಕ್ಟರ್ ಚೆಲುವರಾಜು ಬಿ. ನೇತೃತ್ವದ ಪೊಲೀಸರ ತಂಡ ಮೆಲ್ಕಾರ್ ಬಳಿ ನಡೆಸಿದ ಕಾರ್ಯಾಚರಣೆಯಲ್ಲಿ ಪತ್ತೆ ಹಚ್ಚಿ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಮಂಗಳೂರು ಬಂದರು ಹಝಾರ್ ಹೌಸ್ ನಿವಾಸಿ ಟಿ.ಪಿ.ಫಾರೂಕ್(50), ನೇಪಾಳ ಮೂಲದ ರಾಜ್‌ಪುರ್ ನಿವಾಸಿ, ಪ್ರಸಕ್ತ ಮಂಗಳೂರಿನಲ್ಲಿ ವಾಸವಿರುವ ಸಾಗರ್ ಸಿಂಗ್(22) ಬಂಧಿತರು.
ಆರೋಪಿಗಳು ಗಾಂಜಾವನ್ನು ಬ್ರೀಝಾ ಕಾರಿನಲ್ಲಿ ಬಿ.ಸಿ.ರೋಡ್ ನಿಂದ ಮಾಣಿ ವರೆಗೆ ಗಿರಾಕಿಗಳಿಗೆ ಮಾರಾಟ ಮಾಡಲು ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಡಿಸಿಐಬಿ ಪೊಲೀಸರು ಬೆನ್ನಟ್ಟಿ ಬಂದು ಮೆಲ್ಕಾರ್ ನಲ್ಲಿ ಅಡ್ಡ ಹಾಕಿದ್ದಾರೆಯಲ್ಲದೆ ಕಾರಿನಲ್ಲಿದ್ದ ಇಬ್ಬರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಒಟ್ಟು 1 ಕೆ.ಜಿ. 480 ಗ್ರಾಂ ಗಾಂಜಾವನ್ನು ಮತ್ತು ಅದನ್ನು ಸಾಗಾಟ ಮಾಡಲು ಉಪಯೋಗಿಸಿದ ಮಾರುತಿ ಬ್ರೀಝಾ ಕಾರನ್ನು ವಶಪಡಿಸಿಕೊಂಡು ಪ್ರಕರಣವನ್ನು ಬಂಟ್ವಾಳ ನಗರ ಠಾಣೆಗೆ ಹಸ್ತಾಂತರಿಸಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಡಿಸಿಐಬಿ ಪೊಲೀಸ್ ನಿರೀಕ್ಷಕ ಚೆಲುವರಾಜು ಬಿ. ಅವರ ನೇತೃತ್ವದಲ್ಲಿ ಡಿಸಿಐಬಿ ಸಿಬ್ಬಂದಿಯಾದ ಲಕ್ಷ್ಮಣ ಕೆ.ಜಿ., ಉದಯ ರೈ, ಪ್ರವೀಣ್ ಎಂ., ತಾರಾನಾಥ್, ಪ್ರವೀಣ್ ರೈ, ಶೋನ್‍ಶಾ, ಸುರೇಶ್ ಹಾಗೂ ತಾಂತ್ರಿಕ ವಿಭಾಗದ ಸಂಪತ್ ಮತ್ತು ದಿವಾಕರ್ ಭಾಗವಹಿಸಿದ್ದರು.

