ಮೂಡುಬಿದಿರೆ: ಸಂಸದರಾಗಿದ್ದ ಉಳ್ಳಾಲ ಶ್ರೀನಿವಾಸ ಮಲ್ಯರ ದೂರದರ್ಶಿತ್ವದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಂದು ಎನ್.ಐ.ಟಿಕೆ., ವಿಮಾನ ನಿಲ್ದಾಣ ಸಹಿತ ಅಭಿವೃದ್ಧಿಗೆ ಪೂರಕವಾದ ಕೊಡುಗೆಗಳು ಸಂದಿವೆ. ಅಂತಹ ಶ್ರೇಷ್ಠ ರಾಜಕಾರಣಿಯ ಹೆಸರು ಅಥವಾ ಉಳ್ಳಾಲದ ರಾಣಿ ಅಬ್ಬಕ್ಕ ಎಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ಮರು ನಾಮಕರಣ ಮಾಡಬೇಕೆಂಬುದು ಜಿಲ್ಲೆಯ ಜನತೆಯ ಕನಸಾಗಿತ್ತು.

ಆದರೆ ಅದಾನಿ ಕಂಪೆನಿಯ ಹೆಸರಲ್ಲಿ ಬಜ್ಪೆ ವಿಮಾನ ನಿಲ್ದಾಮರುನಾಮಕರಣಗೊಂಡಿರುವುದು ದುರದೃಷ್ಟಕರ. ದ.ಕ ಜಿಲ್ಲೆಗೆ ಅದಾನಿ ಕೊಡುಗೆ ಶೂನ್ಯ. ಅದಾನಿ ನಾಮಕರಣವನ್ನು ವಿರೋಧಿಸಿ ಜಿಲ್ಲಾ ಕಾಂಗ್ರಸ್ ವತಿಯಿಂದ ಸೋಮವಾರದಿಂದ ಒಂದು ವಾರಗಳ ಕಾಲ ವಿಮಾನ ನಿಲ್ದಾಣದ ಕೆಂಜಾರು ಪರಿಸರದಲ್ಲಿ ಪ್ರತಿಭಟನೆ, ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಯಲಿದೆ ಎಂದು ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶ್ರೀನಿವಾಸ ಮಲ್ಯರ ಕೊಡುಗೆಗಳು, ಸೇವೆ, ಸಾಧನೆಯ ದಾಖಲೆ ಮುರಿಯಲಾಗದ್ದು. ನೆಹರೂ ಅವರ ಮನವೊಲಿಸಿ ಪಡೆದಿದ್ದ ಈ ವಿಮಾನ ನಿಲ್ದಾಣ ಮುಂದೆ ಆಸ್ಕರ್ ಫೆರ್ನಾಂಡಿಸ್, ವೀರಪ್ಪ ಮೊಯಿಲಿ, ಜನಾರ್ದನ ಪೂಜಾರಿ ತಮ್ಮ ಪರಿಶ್ರಮದಿಂದ ರಾಜೀವ ಗಾಂಧಿಯವರ ಸಹಕಾರದಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿ ಬೆಳೆಸುವಲ್ಲಿ ಕೊಡುಗೆ ನೀಡಿದ್ದಾರೆ.
ಮುಂದಿನ ತಲೆಮಾರಿಗೆ ಶ್ರೀನಿವಾಸ ಮಲ್ಯರ ಕೊಡುಗೆಗಳು ಸದಾ ನೆನಪಲ್ಲಿ ಉಳಿಯಲು ಅವರ ಹೆಸರಿಡಬೇಕಾದ ಸ್ಥಳದಲ್ಲಿ ಬಹುರಾಷ್ಟ್ರೀಯ ಕಂಪೆನಿಯೊಂದರ ಹೆಸರಿಟ್ಟು ಕೇಂದ್ರ ಸರ್ಕಾರ ಜನತೆಗೆ ವಂಚಿಸಿದೆ ಎಂದವರು ಹೇಳಿದರು.
ಬ್ಯಾಂಕಿಂಗ್ ತವರೂರೆನಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ವಿಜಯ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕಾರ್ಪೊರೇಶನ್ ಬ್ಯಾಂಕಿನ ಸ್ಥಾಪಕರು, ಸಾಧನೆಗಳ ಬದಲಾದ ವ್ಯವಸ್ಥೆಯಲ್ಲಿ ಮೂಲೆಗುಂಪಾಗಿದ್ದಾರೆ.
ಜಿಲ್ಲೆಗೆ ಸಮಸ್ಯೆಯಾದಾಗ ಸರ್ವಪಕ್ಷ ನಿಯೋಗದ ಜತೆ ಕೇಂದ್ರದ ಪ್ರಮುಖರಿಗೆ ಮನವರಿಕೆ ಮಾಡಬೇಕಾದವರು ಕೇಂದ್ರ ಸರಕಾರದ ಏಜೆಂಟರಂತೆ ವರ್ತಿಸುತ್ತಿರುವುದು ದುರದೃಷ್ಟಕರ ಎಂದವರು ಆರೋಪಿಸಿದರು.
