ಬಂಟ್ವಾಳ: ಜಿ.ಪಂ. ಸದಸ್ಯ ಬಿ.ಪದ್ಮಶೇಖರ ಜೈನ್ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿ ಸುಳ್ಳು ಸುದ್ದಿ ಪ್ರಕಟಿಸಿದ ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಪುಂಜಾಲಕಟ್ಟೆ ಆರಕ್ಷಕ ಠಾಣೆಗೆ ದೂರು ನೀಡಿದರು.

ಇತ್ತೀಚೆಗೆ ಶ್ರೀ ಕಾರಿಂಜೇಶ್ವರ ದೇವಸ್ಥಾನದ ಆವರಣ ಗೋಡೆ ಕುಸಿದಿದ್ದು, ಇದಕ್ಕೆ ಪದ್ಮ ಶೇಖರ ಜೈನ್ ಅವರ ಕಲ್ಲಿನ ಕೋರೆ ಕಾರಣವೆಂದು ಆರೋಪಿಸಿ ಅವಹೇಳನಕಾರಿಯಾಗಿ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು ಎಂದು ಆರೋಪಿಸಲಾಗಿದೆ . ಅವರು ದೇವಸ್ಥಾನದಿಂದ ೨ ಕಿ.ಮೀ. ದೂರದಲ್ಲಿ ನಡೆಸುತ್ತಿದ್ದ ಕಲ್ಲಿನ ಕೋರೆಯನ್ನು ಎರಡು ವರ್ಷಗಳ ಹಿಂದೆ ಸ್ಥಗಿತಗೊಳಿಸಿದ್ದಾರೆ.ಆದರೂ ರಾಜಕೀಯ ದುರುದ್ದೇಶದಿಂದ ಪದ್ಮಶೇಖರ ಜೈನ್ ಅವರ ಮೇಲೆ ಅವಹೇಳನಕಾರಿಯಾಗಿ ಆರೋಪಿಸಲಾಗಿದ್ದು, ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕಾಗಿ ದೂರಿನಲ್ಲಿ ತಿಳಿಸಲಾಗಿದೆ.
