ಬಂಟ್ವಾಳ: ಮಂಗಳೂರು ನಗರದಲ್ಲಿ ಸಂಚರಿಸುವ ಖಾಸಗಿ ಬಸ್ಸುಗಳಲ್ಲಿ “ಬ್ರಹ್ಮಶ್ರೀ ನಾರಾಯಣ ಗುರು ವೃತ್ತ” ಎಂದು ಹೆಸರು ನಮೂದಿಸಿದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಮಂಗಳೂರು ಸಾರಿಗೆ ಇಲಾಖಾಧಿಕಾರಿಗಳು ಬಸ್ ಮಾಲೀಕರಿಗೆ ನೋಟಿಸ್ ನೀಡಿರುವ ಘಟನೆಯನ್ನು ಬಿ.ಸಿ.ರೋಡಿನ ನ್ಯಾಯವಾದಿ,ಜಿಲ್ಲಾ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಎಂ.ಚಂದ್ರಶೇಖರ ಪೂಜಾರಿ ಖಂಡಿಸಿದ್ದಾರೆ. ಬಸ್ ಮಾಲಿಕರಾಗಲಿ, ಚಾಲಕರಾಗಲಿ ಈ ವಿಚಾರದಲ್ಲಿ ಯಾವುದೇ ತಪ್ಪು ಮಾಡಿಲ್ಲ, ಎಂದು ಪ್ರಕಟಣೆಯಲ್ಲಿ ತಿಳಿಸಿರುವ ಅವರು “ಬಿರುವೆರ್ ಕುಡ್ಲ” ಸಂಘಟನೆಯ ಕ್ರಮ ಸರಿಯಾಗಿದ್ದು, ಹಾಗೂ ನ್ಯಾಯಯುತವಾಗಿದ್ದು, ಪ್ರಕರಣವನ್ನು ದಾಖಲಿಸುವ ಯಾವುದೇ ತಪ್ಪನ್ನು ಬಸ್ ಚಾಲಕರಾಲಿ,ಮಾಲಕರಾ್ಲಿ ಮಾಡಿಲ್ಲ. ಈ ಬಗ್ಗೆ ಸಂಘಟನೆಯು ಜನಾಂದೋಲನ ರೂಪಿಸಬೇಕಾಗಿದೆ ಎಂದು ಅವರು ಸಲಹೆ ನೀಡಿದ್ದಾರೆ.
ಒಂದೇ ಜಾತಿ-ಒಂದೇ ಮತ, ಒಂದೇ ದೇವರು ಎಂದು ಜಗತ್ತಿಗೆ ಸಾರಿದ ಸಮಾಜೋದ್ಧಾರಕ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರು ಸಮಾಜದ ಜನಮನದಲ್ಲಿ ಶಾಶ್ವತವಾಗಿ ಉಳಿಯ ಬೇಕಾದರೆ, ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಂದು ರಸ್ತೆಗೆ “ಬ್ರಹ್ಮಶ್ರೀ ನಾರಾಯಣ ಗುರು ರಸ್ತೆ” ಹಾಗೂ ವೃತ್ತಕ್ಕೆ ನಾಮಕರಣ ಅವಶ್ಯಕವಾಗಿ ಆಗಬೇಕಾಗಿದೆ.ಹಾಗೆಯೇ ಮಂಗಳೂರು ವಿಮಾನ ನಿಲ್ದಾಣಕ್ಕೆ “ಕೋಟಿ ಚೆನ್ನಯ” ನಾಮಕರಣಗೊಳಿಸಿ ವೀರಪುರುಷರ ಹೆಸರು ಜನಮನದಲ್ಲಿ ಶಾಶ್ವತವಾಗಿ ಉಳಿಸುವ ಕೆಲಸ ಆಗಬೇಕಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಜಿಲ್ಲಾಧಿಕಾರಿಗಳು, ಸರಕಾರ ಹಾಗೂ ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಸಮಾಜದ ಮುಖಂಡರ ಸಭೆ ಕರೆದು ಸಮಾಲೋಚಿಸಿ ಶೀಘ್ರದಲ್ಲಿ ಮಂಗಳೂರು ನಗರ ವ್ಯಾಪ್ತಿಯಲ್ಲಿ ಕೂಡಲೇ “ಬ್ರಹ್ಮಶ್ರೀ ನಾರಾಯಣ ಗುರು ರಸ್ತೆ” ಹಾಗೂ “ಬ್ರಹ್ಮಶ್ರೀ ನಾರಾಯಣ ಗುರು ವೃತ್ತ” ನಾಮಕರಣ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
