ಬಂಟ್ವಾಳ: ಬಂಟ್ವಾಳ ತಾ.ಸಮುದಾಯ ಆರೋಗ್ಯ ಕೇಂದ್ರಕ್ಕೆ ಮುಜರಾಯಿ ಇಲಾಖೆಯ ಮೂಲಕ ತಾಲೂಕಿನ ‘ಎ’ ದರ್ಜೆ ದೇವಸ್ಥಾನದಿಂದ 2 ಡಯಾಲಿಸಿಸ್ ಯಂತ್ರ ಒದಗಿಸುವ ಭರವಸೆಯನ್ನು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ನೀಡಿದ್ದಾರೆ. ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವರು ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರ ಜತೆ ಬಂಟ್ವಾಳ ತಾಲೂಕು ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದು,ಈ ಸಂದರ್ಭ ಶಾಸಕರ ಮನವಿ ಸಚಿವರು ಈ ಭರವಸೆ ನೀಡಿದ್ದಾರೆ.
ಬಂಟ್ವಾಳ ಸರಕಾರಿ ಆಸ್ಪತ್ರೆ ಯಲ್ಲಿ ಡಯಾಲಿಸಿಸ್ ಚಿಕಿತ್ಸೆಗೆ ಅತೀ ಹೆಚ್ಚಿನ ಬೇಡಿಕೆ ಇದ್ದು ,2 ಯಂತ್ರಗಳು ದಿನವೊಂದಕ್ಕೆ 10 ರೋಗಿಗಳಿಗೆ ಮಾತ್ರ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿದೆ. ತಾಲೂಕಿನ ಯಾವುದೇ ಆಸ್ಪತ್ರೆಯಲ್ಲಿ ಈ ವ್ಯವಸ್ಥೆ ಇಲ್ಲದ ಕಾರಣ ರೋಗಿಗಳು ದುಬಾರಿ ಖರ್ಚು ಮಾಡಿ ಮಂಗಳೂರಿಗೆ ತೆರಳಬೇಕಾಗಿದೆ.ಅಲ್ಲಿ ಕೂಡ ರೋಗಿಗಳ ಸಂಖ್ಯೆ ಹೆಚ್ಚಿರುವುದರಿಂದ ಇಲ್ಲಿಗೆ ಹೆಚ್ಚುವರಿ ಡಯಾಲಿಸಿಸ್ ಯಂತ್ರ ಒದಗಿಸುವಂತೆ ಶಾಸಕರು ಸಚಿವರಲ್ಲಿ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರು ಮುಜರಾಯಿ ಇಲಾಖೆಯ ಮೂಲಕ ತಾಲೂಕಿನ ‘ಎ’ ದರ್ಜೆ ದೇವಸ್ಥಾನದಿಂದ ಒಂದು ವಾರದ ಒಳಗಾಗಿ ಡಯಾಲಿಸಿಸ್ ಯಂತ್ರ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. 
70 ಮಂದಿ ಗುಣಮುಖ :
ಇದೇವೇಳೆ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಪುಷ್ಪಲತಾರವರು ಆಸ್ಪತ್ರೆಯ ಬಗ್ಗೆ ಸಚಿವರಿಗೆ ಮಾಹಿತಿ ನೀಡಿದರು. ಪ್ರಸ್ತುತ 10 ಕೊರೊನಾ ರೋಗಿಗಳು ಚಿಕಿತ್ಸೆ ಪಡೆಯತ್ತಿದ್ದು, ಈ ವರೆಗೆ 70 ಕೊರೊನಾ ಪೀಡಿತರು ಚಿಕಿತ್ಸೆ ಪಡೆದು ಗುಣಮುಖರಾಗಿ ತೆರಳಿರುವುದಾಗಿ ತಿಳಿಸಿದರು.ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ , ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ನಿರ್ದೇಶಕಿ ಸುಲೋಚನ ಜಿ.ಕೆ ಭಟ್ ಉಪಸ್ಥಿತರಿದ್ದರು. 
