ಕೈಕಂಬ: ಕೃಷಿ ಇಲಾಖೆ, ಜಿಲ್ಲಾ ಪಂಚಾಯತ್ ಮತ್ತು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಎಡಪದವಿನಲ್ಲಿ ಕಾರ್ಯಾಚರಿಸುತ್ತಿದ್ದ ಕೃಷಿ ಯಂತ್ರಧಾರೆ’ ಕೇಂದ್ರವು ಗುರುಪುರ ಹೋಬಳಿ, ಎಡಪದವು, ಬಜ್ಪೆ ವ್ಯಾಪ್ತಿಯ ಕೃಷಿಕರಿಗೆ ಅನುಕೂಲವಾಗುವಂತೆ ಆ. 20ರಂದು ಗುರುಪುರ-ಕೈಕಂಬದ ರೈತ ಸಂಪರ್ಕ ಕೇಂದ್ರದ ಕಟ್ಟಡಕ್ಕೆ ಸ್ಥಳಾಂತರಗೊಂಡಿತು.
ಈ ವೇಳೆ ನಡೆದ ಗಣಹೋಮ ಪೂಜಾ ಕಾರ್ಯಕ್ರಮದಲ್ಲಿ ಕೃಷಿ ಯಂತ್ರಧಾರೆ ಪ್ರಬಂಧಕ ರಾಘವೇಂದ್ರ, ಗ್ರಾಮೀಣಾಭಿವೃದ್ಧಿ ಶ್ರೀ ಧರ್ಮಸ್ಥಳ ಯೋಜನೆಯ ದಕ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ, ಕೃಷಿ ಯಂತ್ರಧಾರೆ ಸಮನ್ವಯಾಧಿಕಾರಿ ಅಶೋಕ್, ಬಜ್ಪೆ ಯೋಜನಾಧಿಕಾರಿ ರವಿ, ಕೃಷಿಕ ದೊಡ್ಡಯ್ಯ ಪೂಜಾರಿ ಕಾಜಿಲ, ಉಮೇಶ್ ಪೂಜಾರಿ, ರಮೇಶ್ ಅಮೀನ್, ಹರಿಶ್ಚಂದ್ರ(ವಲಯಾಧ್ಯಕ್ಷ, ಪ್ರಗತಿಬಂಧು ಸ್ವ-ಸಹಾಯ ಎಡಪದವು) ಮತ್ತಿತರರು ಉಪಸ್ಥಿತರಿದ್ದರು.
600 ಕೃಷಿಕರಿಗೆ `ಯಂತ್ರಶ್ರೀ’
ಪ್ರಸಕ್ತ ಸಾಲಿನಲ್ಲಿ ಗುರುಪುರ ಹೋಬಳಿ ಹಾಗೂ ಸುತ್ತಲ ಪ್ರದೇಶದ 600 ಕೃಷಿಕರು ಯಂತ್ರಶ್ರೀ ಕಾರ್ಯಕ್ರಮದಡಿ ಯಂತ್ರಗಳನ್ನೇ ಬಳಸಿಕೊಂಡು ಸಸಿ ಮಡಿ, ನಾಟಿ, ನಿರ್ವಹಣೆ ಹಾಗೂ ಭತ್ತದ ತೆನೆ ಕಟಾವು ಮಾಡಲಾಗಿದೆ. ಈ ಬಾರಿ 20 ಎಕ್ರೆ ಹಡೀಲು ಭೂಮಿಯಲ್ಲಿ ಭತ್ತ ಬೇಸಾಯ ಮಾಡಲಾಗಿದೆ. ಕೃಷಿಯಲ್ಲಿ ಯುವ ಜನಾಂಗ ಪಾಲ್ಗೊಳ್ಳುವಿಕೆ ಹೆಚ್ಚಾಗಿದೆ. ಕೇಂದ್ರದ ಮೂಲಕ ಕೃಷಿ ಚಟುವಟಿಕೆ ಮಾಹಿತಿ ಮತ್ತು ತರಬೇತಿ ನೀಡಲಾಗುತ್ತಿದೆ ಎಂದು ಸತೀಶ್ ಶೆಟ್ಟಿ ಹೇಳಿದರು.
