ಬಂಟ್ವಾಳ: ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಸಂಭವಿಸಿರುವ ಭೂ ಕುಸಿತ ದುರಂತದಲ್ಲಿ ನಾಪತ್ತೆಯಾದ ಅರ್ಚಕರ ಜೊತೆ ಬಂಟ್ವಾಳ ತಾಲೂಕಿನ ಕಳ್ಳಿಗೆ ನಿವಾಸಿ ಸಹಾಯಕ ಅರ್ಚಕರು ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ತಾಲೂಕಿನ ಕಳ್ಳಿಗೆ ಗ್ರಾಮದ ಕನಪಾಡಿ ದೈವಸ್ಥಾನದ ಬಳಿ ರಾಮಕೃಷ್ಣ ರಾವ್ ರೇಣುಕಾ ದಂಪತಿಯ ಪುತ್ರ ರವಿಕಿರಣ್ ರಾವ್ (29) ನಾಪತ್ತೆಯಾದವರು.
ರಾಮಕೃಷ್ಣ ರಾವ್ ಅವರ ಅವಳಿ ಪುತ್ರರಲ್ಲಿ ಮೊದಲನೆಯವರಾದ ರವಿಕಿರಣ್ ರಾವ್ ಎರಡು ವರ್ಷಗಳಿಂದ ತಲಕಾವೇರಿ ದೇವಸ್ಥಾನದಲ್ಲಿ ಪ್ರದಾನ ಅರ್ಚಕರ ಜೊತೆ ಸಹಾಯಕ ಅರ್ಚಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು . ಮೇ ತಿಂಗಳಲ್ಲಿ ಮನೆಗೆ ಬಂದು ಹೋಗಿದ್ದರು ಎಂದು ತಿಳಿದುಬಂದಿದೆ.ಇವರ ನಾಪತ್ತೆ ಸುದ್ದಿಯಿಂದ ಕಳ್ಳಿಗೆ ಪರಿಸರದಲ್ಲಿ ನೀರವ ಮೌನ ಅವರಿಸಿದೆ.
ಮಾಹಿತಿ ಪಡೆದ ಶಾಸಕರು : . ತಲಕಾವೇರಿಯಲ್ಲಿ ಗುಡ್ಡ ಕುಸಿತದಿಂದ ಬಂಟ್ವಾಳದ ಕಳ್ಳಿಗೆ ಗ್ರಾಮದ ಕನಪಾಡಿ ನಿವಾಸಿ ರವಿಕಿರಣ ಎಂಬವರು ನಾಪತ್ತೆಯಾಗಿದ್ದು ಈ ಬಗ್ಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ರವರು ಶಾಸಕರಾದ ಕೆ.ಜೆ. ಬೋಪಯ್ಯರವರನ್ನು ಸಂಪರ್ಕಿಸಿ ಘಟನೆಯ ಮಾಹಿತಿಯನ್ನು ಪಡೆದರು.ರಕ್ಷಣಾ ತಂಡಗಳು ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದು ಮಳೆಯ ತೀವ್ರತೆ ಹಾಗೂ ಅಲ್ಲಲ್ಲಿ ಗುಡ್ಡಜರಿತದಿಂದ ರಸ್ತೆ ಸಂಪರ್ಕ ಕಡಿತಗೊಂಡು ಕಾರ್ಯಾಚರಣೆಗೆ ಅಡ್ಡಿಯಾಗಿರುವ ಬಗ್ಗೆಯು ಮಾಹಿತಿ ನೀಡಿದರು.
