ಕೋಲಾರ: ಕೋವಿಡ್ ಮಾರ್ಗಸೂಚಿ ಅನುಸರಿಸಿ, ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಸಿಇಟಿ ಪರೀಕ್ಷೆಗಳನ್ನು ಯಶಸ್ವಿಯಾಗಿಸಲು ಇಲಾಖೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನೂತನ ಉಪನಿರ್ದೇಶಕ ರಾಮಚಂದ್ರಪ್ಪ ತಿಳಿಸಿದರು.ಇಲಾಖೆಯ ನೂತನ ಉಪನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ ನಂತರ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ನೀಡಿದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ಕೋವಿಡ್ ಸಂಕಷ್ಟದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯ ಉಳಿದ ಇಂಗ್ಲೀಷ್ ಪರೀಕ್ಷೆ ಯಶಸ್ವಿಯಾಗಿ ನಡೆಸಿ ಫಲಿತಾಂಶವೂ ಕೊಡಲಾಗಿದೆ, ಇದೀಗ ಸಿಇಟಿ ಪರೀಕ್ಷೆಯನ್ನು ನಡೆಸುವುದು ಒಂದು ಸವಾಲಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ಕೋವಿಡ್ ಮಾರ್ಗಸೂಚಿಯಡಿ ಪರೀಕ್ಷೆ ನಡೆಸಲು ಎಲ್ಲಾ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.ದ್ವಿತೀಯ ಪಿಯುಸಿ ಹಾಗೂ ಸಿಇಟಿ ಮಕ್ಕಳ ಭವಿಷ್ಯದ ಹಾದಿ ತೋರುವ ಪ್ರಮುಖ ಘಟ್ಟವಾಗಿದ್ದು, ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದೇ ಮಕ್ಕಳು ಆತ್ಮಸ್ಥೈರ್ಯದಿಂದ ಪರೀಕ್ಷೆ ಬರೆಯುವ ವಾತಾವರಣ ಸೃಷ್ಟಿ ಇಲಾಖೆ ಮಾಡುತ್ತದೆ ಎಂದರು.
ಈಗಾಗಲೇ ಆನ್‍ಲೈನ್ ತರಗತಿ ನಡೆಸಲು ಸೂಚಿಸಲಾಗಿದೆ, ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗುವ ರೀತಿಯ ಯಾವುದೇ ತೀರ್ಮಾನಗಳನ್ನು ಕಾಲೇಜುಗಳು ಕೈಗೊಳ್ಳದಂತೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.ಸರ್ಕಾರಿ,ಖಾಸಗಿ,ಅನುದಾನಿತ ಎಲ್ಲಾ ಕಾಲೇಜುಗಳ ಪ್ರಾಂಶುಪಾಲರು ಇಲಾಖೆಯ ಉತ್ತಮ ಕಾರ್ಯನಿರ್ವಹಣೆಗೆ ಸಹಕಾರ ನೀಡಲು ಮನವಿ ಮಾಡಿದ ಅವರು, ಕೋವಿಡ್ ಸಂಕಷ್ಟದಲ್ಲಿ ವಿದ್ಯಾರ್ಥಿಗಳ ಭವಿಷ್ಯ ಕಾಪಾಡುವ ಹೊಣೆ ಇಲಾಖೆ,ಪ್ರಾಂಶುಪಾಲರು,ಉಪನ್ಯಾಸಕರದ್ದಾಗಿದೆ, ಪೋಷಕರಲ್ಲಿನ ಆತಂಕ ದೂರ ಮಾಡುವ ಹೊಣೆಯೂ ನಮ್ಮ ಮೇಲಿದೆ ಎಂದ ಅವರು, ಸರ್ಕಾರದ ಮಾರ್ಗಸೂಚಿಯಂತೆ ಕಾಲೇಜುಗಳ ಆರಂಭವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಈವರೆಗೂ ಉಪನಿರ್ದೇಶಕರಾಗಿದ್ದು, ಇದೀಗ ಚಿಕ್ಕಬಳ್ಳಾಪುರಕ್ಕೆ ವರ್ಗಾವಣೆಯಾಗಿರುವ ಎ.ಎನ್.ಗೀತಾ ಅಧಿಕಾರ ಹಸ್ತಂತರಿಸಿದರು.ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಜಯರಾಂ, ಎನ್.ಕೆ.ಮಂಜುನಾಥ್, ಕೃಷ್ಣಪ್ಪ, ಪ್ರಾಂಶುಪಾಲರ ಸಂಘದ ಖಜಾಂಚಿ ಶ್ರೀನಿವಾಸ್, ಇಲಾಖೆಯ ಗೋಪಿನಾಥ್ ಮತ್ತಿತರರು ಉಪಸ್ಥಿತರಿದ್ದರು.
ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
