ಕೈಕಂಬ: ಬಂಟ್ವಾಳ ತಾಲೂಕಿನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಅಮ್ಮುಂಜೆ ಇಲ್ಲಿಯ 7ನೇ ತರಗತಿ ವಿದ್ಯಾರ್ಥಿ ಕರಿಯಂಗಳ ಗ್ರಾಮ, ಬಕಬೈಲು ಮಣಿಕಂಠಪುರದ ಮಿಥುನ್‍ನ ಕುಟುಂಬಕ್ಕೆ ತಮ್ಮ ಕೈಲಾದಷ್ಟು ಧನಸಹಾ ಯ ಮಾಡುವ ಮೂಲಕ ನೆರವಾಗಿದ್ದಾರೆ. ವಿದ್ಯಾರ್ಥಿಯ ತಂದೆ ಕಾಂತಪ್ಪ ಪೂಜಾರಿಯವರು ಅನಾರೋಗ್ಯದಿಂದ ಇತ್ತೀಚೆಗೆ ಮೃತರಾದುದರಿಂದ ಕುಟುಂಬದ ಆಧಾರ ಸ್ತಂಭ ಕಳಚಿಕೊಂಡಿದೆ. ಇದೀಗ ವಿದ್ಯಾರ್ಥಿಯ ತಾಯಿ ಮೋಹಿನಿ ಹೊಟ್ಟೆಪಾಡಿಗಾಗಿ ಬೀಡಿ ಕಟ್ಟಿಕೊಂಡು ಇದ್ದಾರೆ.
ಅವರೂ ಕೂಡ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಹಾಗೂ ಮನೆ ನಡೆಸಲು ಸಾಕಷ್ಟು ಕಷ್ಟಪಡುತ್ತಿದ್ದಾರೆ. ಹುಡುಗನ ಅಣ್ಣ ಪ್ರಜ್ವಲ್ ಕೂಡ ಇದೇ ಶಾಲೆಯ ಹಳೆ ವಿದ್ಯಾರ್ಥಿಯಾಗಿದ್ದು, ಇದೀಗ ಪಿಯುಸಿ ಶಿಕ್ಷಣ ಪಡೆಯುತ್ತಿದ್ದಾರೆ.
ಕುಟುಂಬ ನಡೆಸಲು ಕೂಡ ಕಷ್ಟವಾಗಿರುವ ಈ ಸಂದರ್ಭದಲ್ಲಿ, ಮಕ್ಕಳನ್ನು ಓದಿಸಲು ತಾಯಿಗೆ ಕಷ್ಟವಾಗಿದೆ. ಇವರ ಕಷ್ಟವನ್ನು ಮನಗಂಡ ಅಮ್ಮುಂಜೆಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಬಾಲಕನ ಮನೆಗೆ ತೆರಳಿ ಸಾಂ ತ್ವನ ಹೇಳಿ ಧನಸಹಾಯ ಮಾಡಿದ್ದಾರೆ. ಈ ಶಿಕ್ಷಕರ ಕಾರ್ಯವು ಇತರರಿಗೂ ಇಂತಹ ಕಾರ್ಯ ನೀಡಲು ಪ್ರೇರಣೆಯಂತಿದೆ. ಈ ವಿದ್ಯಾರ್ಥಿಗಳ ಉತ್ತಮ ಭವಿಷ್ಯ ರೂಪಿಸಲು, ಬದುಕಿಗೆ ನೆಲೆ ಕಲ್ಪಿಸಲು ಸರಕಾರ ಹಾಗೂ ಸಂಘ ಸಂಸ್ಥೆಗಳು ಮುಂದೆ ಬರಬೇಕಾದ ಅಗತ್ಯವಿದೆ.
