ಮಂಗಳೂರು : ಮಹಾನಗರ ಪಾಲಿಕೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಕೆಲವೊಂದು ಜ್ವಲಂತ ಸಮಸ್ಯೆಗಳ ಬಗ್ಗೆ ಈ ದಿನ ಬೆಂಗಳೂರಿನಲ್ಲಿ ಮಾನ್ಯ ನಗರಾಭಿವೃದ್ಧಿ ಸಚಿವರಾದ ಬೈರತಿ ಬಸವರಾಜ್ ರವರ ಅಧ್ಯಕ್ಷತೆಯಲ್ಲಿ ಮಾನ್ಯ ಪೌರಾಡಳಿತ ಸಚಿವರಾದ ನಾರಾಯಣ ಗೌಡ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ. ರವಿ ಯವರ ಉಪಸ್ಥಿತಿಯಲ್ಲಿ ಜರಗಿತು. ಜಿಲ್ಲೆಯ ಶಾಸಕರುಗಳಾದ ಎಸ್. ಅಂಗಾರ, ಸಂಜೀವ ಮಟಂದೂರು, ರಾಜೇಶ್ ನಾಯ್ಕ್ ಉಳಿಪ್ಪಾಡಿ, ಉಮಾನಾಥ ಕೋಟ್ಯಾನ್ ,ವೇದವ್ಯಾಸ ಕಾಮತ್, ಡಾ ಭರತ್ ಶೆಟ್ಟಿ ,ಹರೀಶ್ ಪೂಂಜ ರವರು ಸಮಸ್ಯೆಗಳ ಬಗ್ಗೆ ಸಚಿವರ ಹಾಗೂ ಅಧಿಕಾರಿಗಳ ಗಮನ ಸೆಳೆದರು. ಮುಖ್ಯವಾಗಿ ತುಂಡು ಭೂಮಿಯ ಭೂ ಪರಿವರ್ತನೆ ಮತ್ತು ಇದಕ್ಕೆ ಸಂಬಂಧಿಸಿ ಏಕ ನಿವೇಶನ ಅನುಮೋದನೆಗೆ ಮುಂದಿನ ಒಂದು ತಿಂಗಳಲ್ಲಿ ಆದೇಶ ಹೊರಡಿಸುವಂತೆ ಸಚಿವರು ಅಧಿಕಾರಿಗಳಿಗೆ ಆದೇಶಿಸಿದರು. ಕಟ್ಟಡ ನಿರ್ಮಾಣಕ್ಕೆ ವಿಧಿಸಲಾಗುವ ಅಭಿವೃದ್ಧಿ ಶುಲ್ಕ ಹೆಚ್ಚಳ ಅವೈಜ್ಞಾನಿಕವಾಗಿದ್ದು ಈ ಬಗ್ಗೆ ಮತ್ತೊಮ್ಮೆ ಪರಿಶೀಲಿಸಿ ಕಡಿಮೆಗೊಳಿಸುವಂತೆ ಸೂಚಿಸಿದರು.
ಬಂಟ್ವಾಳ ಶಾಸಕರು ಕಟ್ಟಡ ನಿರ್ಮಾಣ ಪರವಾನಿಗೆಗೆ ನಿರ್ಮಾಣ್ 2 ವ್ಯವಸ್ಥೆಯು ಎಪ್ರಿಲ್ ನಿಂದ ಜಾರಿಗೆ ಬಂದಿದ್ದು ಆ ಬಳಿಕ ಹಳೆ ಮನೆ ದುರಸ್ತಿಗೆ ಪರವಾನಿಗೆ ಸಿಗದಿರುವುದರಿಂದ ಜನಸಾಮಾನ್ಯರಿಗೆ ಆಗುವ ತೊಂದರೆಯ ಬಗ್ಗೆ ಸಭೆಯ ಗಮನ ಸೆಳೆದಾಗ ತಕ್ಷಣ ಈ ಬಗ್ಗೆ ಕ್ರಮ ಕೈಗೊಂಡು ಪರವಾನಿಗೆ ನೀಡುವಂತೆ ಸಚಿವರು ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪೊನ್ನುರಾಜ್, ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ , ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಬಂಟ್ವಾಳ ಬೂಡ ಸದಸ್ಯ ಕಾರ್ಯದರ್ಶಿ ಅಭಿಲಾಷ್, ನಗರಾಭಿವೃದ್ಧಿ ಮತ್ತು ಪೌರಾಡಳಿತ ಇಲಾಖೆಯ ವಿವಿಧ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

