ಕೋಲಾರ : ನಕ್ಷೆಯಲ್ಲಿರುವ ಸರ್ಕಾರಿ ರಸ್ತೆಯ ಸ್ಥಳದಲ್ಲಿ ಸರ್ವೇ ನಂಬರನ್ನು ದಾಖಲಿಸಿ ಬುಗಳ್ಳರಿಗೆ ಅಕ್ರಮವಾಗಿ ಮತ್ತು ಕಾನೂನು ಬಾಹಿರವಾಗಿ ಖಾತೆ ಮಾಡಿವುದನ್ನು ವಜಾಗೊಳಿಸಲು ಕೋರಿ ಮತ್ತು ರೈತರ ಹೊಲಗಳಿಗೆ ಹೋಗಲು ಅನುಕೂಲ ಮಾಡಿಕೊಡಬೇಕೆಂದು ಕೋಲಾರದ ವಿಭೂತಿಪುರ ಕೀಲುಕೋಟೆ ಪ್ರದೇಶ ರೈತರು ತಹಸೀಲ್ದಾರ್‍ರವರನ್ನು ಒತ್ತಾಯಿಸಿದರು.
ರೈತ ಈ ದೇಶದ ಬೆನ್ನೆಲುಬು ಎಂಬುದು ಕೇವಲ ಭಾಷಣಗಳಿಗೆ ಸೀಮಿತ ಮಾಡಿ, ರೈತನ ಬೆನ್ನುಮೂಳೆ ಮುರಿಯುವ ಕೆಲಸಕ್ಕೆ ಸರ್ಕಾರಿ ಅಧಿಕಾರಿಗಳು ಹಾಗೂ ಭೂಗಳ್ಳರು ಒಟ್ಟಾಗಿ ಸೇರಿ ಪಿತೂರಿ ಮಾಡುತ್ತಿರುವುದು ಈ ದೇಶದ ಬಹುದೊಡ್ಡ ದುರಂತವೇ ಸರಿ. ಇದಕ್ಕೆ ಉದಾಹರಣೆಯಾಗಿ ಕೋಲಾರ ತಾಲ್ಲೂಕು ಕಛೇರಿಯ ಅಧಿಕಾರಿಗಳ ವರ್ತನೆ ಇನ್ನೂ ನಮ್ಮ ಕಣ್ಣ ಮುಂದೆ ನಿದರ್ಶನವಾಗಿ ಕಾಣಬಹುದು. ರೈತರು ತಮ್ಮ ಹೊಲಗದ್ದೆಗಳಿಗೆ ಹೋಗಲು ಇದ್ದ ಒಂದೇ ಒಂದು ರಸ್ತೆಯು ಭೂಗಳ್ಳರು ಮತ್ತು ಪಟ್ಟಭದ್ರಶಕ್ತಿಗಳ ದಾಹಕ್ಕೆ ಬಲಿಯಾಗಿದೆ. ರಸ್ತೆಯನ್ನೇ ಸರ್ವೇ ನಂ ಆಗಿ ಪರಿವರ್ತಿಸುವ ನೀಚ ಕೆಲಸಕ್ಕೆ ಇಲ್ಲಿನ ಅಧಿಕಾರಿಗಳು ಸಹಕಸಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ರೈತರು ಆರೋಪಿಸಿದ್ದಾರೆ.
ಅನಾದಿ ಕಾಲದಿಂದಲೂ ರೈತರು ತಮ್ಮ ಹೊಲ ಗದ್ದೆಗಳಿಗೆ ಹೋಗಿ ಬರಲು, ಗೊಬ್ಬರ ಸಾಗಾಣಿಕೆ, ಬೆಳೆದ ಬೆಳೆ ಸಾಗಾಣಿಕೆ ಮತ್ತು ಇನ್ನಿತರ ಕೃಷಿಯೇತರ ಕಾರ್ಯಗಳಿಗೆ 1961 ರಿಂದ ಇದ್ದ ನಕ್ಷೆಯಂತೆ ಇದೇ ಸರ್ಕಾರಿ ರಸ್ತೆಯನ್ನು ಅವಲಂಬಿಸಿದ್ದರು. 3 ವರ್ಷಗಳಿಂದ ಆ ರಸ್ತೆಯ ಭಾಗಕ್ಕೆ ಕಲ್ಲು ಕೂಚಗಳನ್ನು ನೆಟ್ಟು ಆಕ್ರಮಿಸುವಾಗ ತಿಳಿಯಿತು ಆ ರಸ್ತೆಯ ಸ್ಥಳಕ್ಕೆ ಬೇರೊಂದು ಸರ್ವೇ ನಂಬರ್ ನಕ್ಷೆಯಲ್ಲಿ ಕೂರಿಸಿ ರಸ್ತೆಯನ್ನು ಸರ್ವೇ ನಂಬರ್ ಆಗಿ ಮಾರ್ಪಾಡು ಮಾಡಿದ್ದಾರೆ ಎಂಬ ಕಹಿಸತ್ಯ.
ಕೋಲಾರ ತಾಲ್ಲೂಕು ಕಸಬಾ ಹೋಬಳಿ ಕೀಲುಕೋಟೆಯ ಸರ್ವೇ ನಂ.66, 67, 68, 69, 70, 71, 72, 133 ಇತ್ಯಾದಿ ಜಮೀನಿಗೆ 1961ರ ನಕ್ಷೆಯಲ್ಲಿ ಓಡಾಡಲು ಒಂದೇ ದಾರಿ ಇದ್ದು. ಈ ದಾರಿಯಲ್ಲಿ ಸರ್ವೆ ನಂ. 131/1 ಮತ್ತು 131/2ನ್ನು ಕಂದಾಯ ಅಧಿಕಾರಿಗಳು ಯಾವುದೋ ಪ್ರಭಾವಕ್ಕೆ ಒಳಪಟ್ಟು ಹಾಗೂ ಕರ್ತವ್ಯ ನಿರ್ಲಕ್ಷ್ಯತೆಯಿಂದ ದಾರಿಯ ಸ್ಥಳದಲ್ಲಿ ಸರ್ವೇ ನಂಬರ್ ನಮೂದಿಸಿರುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ರೈತರು ಈ ಹಿಂದೆ 2017 ರಿಂದ ಸುಮಾರು ಅರ್ಜಿಗಳನ್ನು ಸಂಬಂಧಪಟ್ಟ ತಹಸೀಲ್ದಾರ್, ಉಪ ವಿಭಾಗಾಧಿಕಾರಿಗಳು, ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಅದರಂತೆ ಜಿಲ್ಲಾಧಿಕಾರಿಗಳು ಮತ್ತು ಉಪ ವಿಭಾಗಾಧಿಕಾರಿಗಳು ಸೂಕ್ತ ಕ್ರಮಕ್ಕೆ ಆದೇಶವಿದ್ದರೂ ತಹಸೀಲ್ದಾರ್ ರವರು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ.
ಸರ್ಕಾರಿ ರಸ್ತೆಯನ್ನು ದುರಸ್ತಿ ಮಾಡಿ ಬೇರೆಯವರ ಹೆಸರಿಗೆ ಖಾತೆ ಮಾಡಲು ಅವಕಾಶವಿದೆಯೇ? ನ್ಯಾಯಾಲಯದಲ್ಲಿ ಪ್ರಕರಣವು ನಡೆಯುತ್ತಿರುವಾಗ ಖಾತೆ ಬದಲಾವಣೆಗೆ ಅವಕಾಶವಿದೆಯೇ? ಎಂಬುದೇ ಬಹುದೊಡ್ಡ ಪ್ರಶ್ನೆಯಾಗಿ ಉಳಿದಿದೆ. ಸರ್ವೇ ನಂ.131 ಎಂಬುದು ಹಳೆಯ ನಕ್ಷೆಯಲ್ಲಿಯೂ ಸಹ ಇದ್ದು, ಈಗ ಸ್ಥಳ ಮಾಯವಾಗಿದೆ ಅದನ್ನು ತಹಸೀಲ್ದಾರ್‍ರವರು ಹುಡುಕಿಕೊಡಬೇಕು.ದಿನಾಂಕ 20-01-2020ರಲ್ಲಿ ಮಾನ್ಯ ತಹಸೀಲ್ದಾರ್‍ರವರ ನ್ಯಾಯಾಲಯದಲ್ಲಿ ನನ್ನ ಹೆಸರಿಗೆ ಈ ವಿಷಯವಾಗಿ ಕುರಿತು ನ್ಯಾಯಾಲಯಕ್ಕೆ ಹಾಜರಾಗುವಂತೆ ರೈತ ಚಿನ್ನಪ್ಪ ಬಿನ್ ವರದಪ್ಪರವರಿಗೆ ನೋಟೀಸ್ ಜಾರಿಯಾಗಿ, ಈ ನೋಟೀಸಿನ ವಿಷಯಕ್ಕೆ ಸಂಬಂಧಿಸಿದಂತೆ ಪ್ರಕರಣದ ಸಂಖ್ಯೆ ಆರ್.ಆರ್.ಟಿ 685/2019-20 ಚಾಲ್ತಿಯಲ್ಲಿರುತ್ತದೆ. ತಹಸೀಲ್ದಾರ್‍ರವರು ದಿನಾಂಕ 20-01-2020ರಂದು ತಹಸೀಲ್ದಾರ್ ನ್ಯಾಯಾಲಯದ ಮುಂದೆ ವಕಾಲತ್ತನ್ನು ವಕೀಲರ ಮೂಲಕ ಹಾಕಿದ್ದು, ದಿನಾಂಕ 12-03-20ರಲ್ಲಿ ನ್ಯಾಯಾಲಯವು ಸಿಟ್ಟಿಂಗ್ ಇರುವುದಿಲ್ಲ. ಮುಂದಿನ ದಿನಾಂಕವಾದ 30-04-2020 ರಂದು ಕರೋನಾ ವಿಚಾರವಾಗಿ ನ್ಯಾಯಾಲಯ ರಜೆಯಲ್ಲಿರುತ್ತದೆ.
ತಹಸೀಲ್ದಾರ್ ನ್ಯಾಯಲದಲ್ಲಿ ಈ ವಿಷಯವಾಗಿ ಪ್ರಕರಣವು ನಡೆಯುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ತನ್ನ ಬೇಜವಾಬ್ದಾರಿತನದಿಂದ ಯಾವುದೋ ವ್ಯಕ್ತಿಗಳ ಪ್ರಭಾವಕ್ಕೆ ಒಳಗಾಗಿ ಅಥವಾ ಋಶಿವತ್ತುಗಳಿಗೆ ಓಳಗಾಗಿ ಕಾನೂನು ಭಾಹಿರವಾಗಿ ಮುಷೀರ್ ಎಂಬುವರ ಹೆಸರಿಗೆ ಖಾತೆಯನ್ನು ದಿನಾಂಕ 25-02-2020ರಂದು 131/1ನ್ನು ಖಾತೆ ಬದಲಾವಣೆ ಮಾಡಿರುತ್ತಾರೆ.
ಮುಂಗಾರು ಪ್ರಾರಂಭವಾಗಿದ್ದು, ರೈತರು ಹೊಲಗಳನ್ನು ಉಳುಮೆ ಮಾಡಲು, ಗೊಬ್ಬರ ಸಾಗಿಸಲು ಓಡಾಡುವ ಅಗತ್ಯವಿದೆ. ಪ್ರತಿ ವರ್ಷವು ಮೇಲ್ಕಂಡ ರಸ್ತೆಗೆ ಕುಳಿಸಿರುವ ಸರ್ವೇ ನಂ 131/1 ಮತ್ತು 131/2 ಬಂದ್ ಮಾಡಿ ಸುಮಾರು 25 ಕುಟುಂಬಗಳ ರೈತರು ಹೊಲಗಳಿಗೆ ಹೋಗಲು ರಸ್ತೆ ಬಿಡದೆ ತೊಂದರೆ ನೀಡುತ್ತಿದ್ದಾರೆ. ರೈತರಿಗೆ ಬೇರೆ ಯಾವುದೇ ದಾರಿ ಇರುವುದಿಲ್ಲ. ಅಕ್ರಮವಾಗಿ ಖಾತೆ ಮಾಡಿರುವ ಗ್ರಾಮ ಲೆಕ್ಕಿಗ, ಕಂದಾಯ ನಿರೀಕ್ಷಕರು, ಶಿರಸ್ತೆದಾರ್ ರವರ ವಿರುದ್ಧ ಕ್ರಮ ಕೈಗೊಂಡು ಖಾತೆ ರದ್ದುಗೊಳಿಸಿ, 1961ರ ನಕ್ಷೆಯಂತೆ ಒತ್ತುವರಿಯಾಗಿರುವ ರಸ್ತೆಯನ್ನು ತೆರವುಗೊಳಿಸಿ ಸರ್ವೇ ನಂ. 131/1 ಮತ್ತು 131/2ನ್ನು ವಜಾಗೊಳಿಸಿ ರೈತರಿಗೆ ದಾರಿಯ ಅನುಕೂಲ ಮಾಡಿಕೊಡಬೇಕೆಂದು ಕೀಲುಕೋಟೆ ಮತ್ತು ವಿಭೂತಿಪುರ ನಿವಾಸದ ರೈತರು ಕೋಲಾರ ತಾಲ್ಲೂಕು ತಹಸೀಲ್ದಾರ್‍ರವರಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ವಕೀಲ ಸುಬ್ರಮಣಿ, ರೈತರಾದ ಚಿನ್ನಪ್ಪ, ವೆಂಕಟೇಶಪ್ಪ, ನಾರಾಯಣಸ್ವಾಮಿ, ಮುನಿವೆಂಕಟಸ್ವಾಮಿ, ರಾಮಚಂದ್ರಪ್ಪ, ವೆಂಕಟೇಶ್, ಮುನೇಶ್ ಮುಂತಾದ ರೈತರಿದ್ದರು.
