ಕೋಲಾರ:ಜಿಲ್ಲೆಯ ಸಮಾಜ ಮುಖಿ ಸಂಸ್ಥೆಯಾದ ಮನ್ವಂತರ ಪ್ರಕಾಶನದ ಆಶಯದ ಮೇರೆಗೆ ಸಮಾಜ ಸೇವಕ, ಸವಿತಾ ಸಮಾಜದ ಮುಖಂಡ ಎಸ್.ಮಂಜುನಾಥ್ ಅವರು ಸೋಮವಾರ ನಗರ ವ್ಯಾಪ್ತಿಯ ಪತ್ರಕರ್ತರು, ಪೌರ ಕಾರ್ಮಿಕರು ಹಾಗೂ ಸಾರ್ವಜನಿಕರಿಗೆ ಉಚಿತವಾಗಿ ತರಕಾರಿಗಳನ್ನು ವಿತರಿಸಿದರು.
ನಗರದ ಪಿಸಿ ಬಡಾವಣೆಯ ಅಂಚೆ ಕಚೇರಿ ಬಳಿ ಬೆಳಿಗ್ಗೆ 7ರಿಂದ 8.45 ಗಂಟೆಯವರೆಗೆ ಪ್ರತಿಯೊಬ್ಬರಿಗೆ ತಲಾ 5ರಿಂದ 15 ಕೆಜಿ ತರಕಾರಿಯನ್ನು ಹಂಚಿಕೆ ಮಾಡಲಾಯಿತು.ತಾಜಾ ಕ್ಯಾಪ್ಸಿಕಂ, ಹೂಕೋಸು, ಸೌತೆಕಾಯಿ, ಮೂಲಂಗಿ, ಬೀಟ್ರೂಟ್, ಮಂಗಳೂರು ಸೌತೆ ಕಾಯಿ, ಬದನೆಕಾಯಿ, ಹೀರೇಕಾಯಿ, ಟೊಮೋಟೊ ಪಡೆದುಕೊಂಡ ಜನರು ಎಸ್.ಮಂಜುನಾಥ್ ಹಾಗೂ ಮನ್ವಂತರ ಪ್ರಕಾಶನದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕರೊನಾ ಹಾವಳಿಯ ಕುರಿತು ದಿನನಿತ್ಯ ಜನರಿಗೆ ಅರಿವು ಮೂಡಿಸಲು ಹಗಲಿರಳು ಶ್ರಮಿಸುತ್ತಿರುವ ಪತ್ರಕರ್ತರಿಗೆ ತಮ್ಮ ಮನೆಗಳಿಗೆ ಬೇಕಾದ ಅಗತ್ಯ ಪದಾರ್ಥಗಳನ್ನು ಖರೀದಿಸಲು ಸಾಧ್ಯವಾಗದ ಹಿನ್ನಲೆಯಲ್ಲಿ ಮಂಜುನಾಥ್ ಅವರು 4 ಕ್ವಿಂಟಾಲ್ ತರಕಾರಿಯನ್ನು ಉಚಿತವಾಗಿ ನೀಡಿದ್ದರು. ತರಕಾರಿಯನ್ನು ವಿತರಿಸುವ ಜವಾಬ್ದಾರಿ ಹೊತ್ತಿದ್ದ ಮನ್ವಂತರ ಪ್ರಕಾಶನದ ಬಳಗವು ತರಕಾರಿ ಸ್ವೀಕರಿಸಲು ಬಂದಿದ್ದ ಪತ್ರಕರ್ತರ ಕೈಗಳಿಗೆ ಸ್ಯಾನಿಟೈಸರ್ ನೀಡಿ ನಂತರ ಸಾಮಾಜಿಕ ಅಂತರದ ತತ್ವಕ್ಕೆ ಅನುಗುಣವಾಗಿ ಪದಾರ್ಥಗಳನ್ನು ಹಂಚಿತು. ಜನರು ತಮ್ಮ ಮನೆಗಳಿಂದ ಬಟ್ಟೆಯಲ್ಲಿ ಹೊಲಿದ ಕೈ ಚೀಲಗಳನ್ನು ತಂದು ಪ್ಲಾಸ್ಟಿಕ್ ನಿಷೇಧಕ್ಕೆ ಕೈಜೋಡಿಸಿದ್ದು ವಿಶೇಷವಾಗಿತ್ತು.
