ಕೋಲಾರ:- ಎಸ್ಸೆಸ್ಸೆಲ್ಸಿ ಪರೀಕ್ಷೆ ಎಂದರೆ ಭಯ ಬೇಕಾಗಿಲ್ಲ, ಅದೊಂದು ಹಬ್ಬದಂತಿರಲಿ, ವ್ರತದಂತೆ ಆಚರಿಸಿ ಏಕಾಗ್ರತೆಯಿಂದ ಸಾಧನೆ ಮಾಡುವಂತೆಯೂ ಮತ್ತು ಮಕ್ಕಳಿಗೆ ಆತ್ಮಸ್ಥೈರ್ಯ ತುಂಬಲು ಪೋಷಕರ ಸಭೆ ಕರೆದು ಅರಿವು ಮೂಡಿಸಿ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ರಾಜ್ಯ ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಕಿವಿಮಾತು ಹೇಳಿದರು.
ಖಾಸಗಿ ಕಾರ್ಯಕ್ರಮದ ನಿಮಿತ್ತ ತಮಿಳುನಾಡಿಗೆ ಹೊರಟಿದ್ದ ಸಚಿವರನ್ನು ನಗರದ ಬಂಗಾರಪೇಟೆ ವೃತ್ತದಲ್ಲಿನ ಮೇಲುಸೇತೆವೆ ಬಳಿ ಜಿಲ್ಲೆಯ ಶಿಕ್ಷಣ ಇಲಾಖೆ ವತಿಯಿಂದ ಡಿಡಿಪಿಐ ಮತ್ತಿತರ ಅಧಿಕಾರಿಗಳು ಸ್ವಾಗತಿಸಿದ ಸಂದರ್ಭದಲ್ಲಿ ಅವರು ಪರೀಕ್ಷಾ ಪೂರ್ವ ಸಿದ್ದತೆಗಳ ಕುರಿತು ಮಾಹಿತಿ ಪಡೆದು ಮಾತನಾಡುತ್ತಿದ್ದರು.ಮನೆಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಪೋಷಕರು ಕುಳಿತು ಅಧ್ಯಯನಕ್ಕೆ ಸಹಕಾರ ನೀಡಬೇಕು, ಮಕ್ಕಳು ಭಯಪಡದಂತೆ ಅವರಲ್ಲಿ ಧೈರ್ಯ ತುಂಬಬೇಕು ಇದರಿಂದ ಪೋಷಕರ ಆತಂಕವೂ ಕಡಿಮೆಯಾಗಿ ಮಕ್ಕಳಲ್ಲಿ ಕಲಿಕಾಸಕ್ತಿ ವೃದ್ದಿಸುತ್ತದೆ ಎಂದರು.ಅತಿ ಮುಖ್ಯವಾಗಿಮಕ್ಕಳನ್ನು ಭಯದಿಂದ ಮುಕ್ತವಾಗಿಸುವುದು ಅತಿ ಮುಖ್ಯ ಎಂದ ಸಚಿವರು, ಈ ಕಾರ್ಯದಲ್ಲಿ ಶಿಕ್ಷಕರ ಜತೆ ಪೋಷಕರು ಸ್ಪಂದಿಸಲು ಅವರಿಗೆ ಮನವರಿಕೆ ಮಾಡಿಕೊಡಲು ಪೋಷಕರ ಸಭೆ ಕರೆದು ಮಾರ್ಗದರ್ಶನ ನೀಡಿ ಎಂದರು.ಪರೀಕ್ಷೆ ಎಂಬುದು ವ್ರತವಿದ್ದಂತೆ ಮಕ್ಕಳಲ್ಲಿ ವ್ರತದ ಮಹತ್ವವನ್ನು ತಿಳಿಸಿ ಅವರಲ್ಲಿ ಏಕಾಗ್ರತೆ ಹೆಚ್ಚಲು ಶಿಕ್ಷಕರ ಪ್ರಯತ್ನವೂ ಅಗತ್ಯ, ಈ ನಿಟ್ಟಿನಲ್ಲಿ ಉತ್ತಮ ಫಲಿತಾಂಶಕ್ಕಾಗಿ ಅಡ್ಡದಾರಿ ಹಿಡಿಯುವ ಅಗತ್ಯವಿಲ್ಲ, ಮಕ್ಕಳನ್ನು ಸಿದ್ದಪಡಿಸಿದರೆ ಅವರೇ ಸಾಧನೆ ಮಾಡಿ ತೋರಿಸುತ್ತಾರೆ ಎಂದರು.
ಪರೀಕ್ಷೆ ಅಂತ್ಯದವರೆಗೂ ಟಿವಿಯಿಂದ ದೂರವಿರಿ
ಸಚಿವ ಸುರೇಶ್‍ಕುಮಾರ್ ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಗಿಯುವರೆಗೂ ಮಕ್ಕಳು ಟಿವಿಯಿಂದ ದೂರವಿರಬೇಕು, ಈ ಕಾರ್ಯದಲ್ಲಿ ಪೋಷಕರು ಕೈಜೋಡಿಸಬೇಕಾಗಿದ್ದು, ಈ ಅವಧಿಯಲ್ಲಿ ತಂದೆತಾಯಿಯೂ ಟಿವಿ ಕಾರ್ಯಕ್ರಮ ಮರೆತು ಮಕ್ಕಳ ಭವಿಷ್ಯದ ಚಿಂತೆಯೊಂದಿಗೆ ಅವರಿಗೆ ಮಾರ್ಗದರ್ಶನ ನೀಡಬೇಕು ಎಂದರು.
ಪರೀಕ್ಷೆ ಕೇವಲ 22 ದಿನ ಇದೆ, ಈ ಅವಧಿ ಅತಿ ಮುಖ್ಯವಾಗಿದೆ, ಪ್ರತಿನಿತ್ಯ, ಪ್ರತಿ ನಿಮಿಷವೂ ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಿ, ಪರೀಕ್ಷೆ ಅವಧಿಯಲ್ಲಿ ಪ್ರತಿ ಪರೀಕ್ಷೆ ಮುಗಿದ ನಂತರ ಆ ಪರೀಕ್ಷೆಯಲ್ಲಿ ಬರೆದುದರ ಕುರಿತು ಚರ್ಚೆಗೆ ಅವಕಾಶ ಬೇಡ, ಅದನ್ನು ಮರೆತು ನಾಳೆಯ ಪರೀಕ್ಷೆ ಕಡೆ ಮಾತ್ರ ಗಮನವಿಡಲು ತಿಳಿಸಿ ಎಂದರು.
ಪರೀಕ್ಷೆಗೆ ಅಗತ್ಯವಿರುವ ಪೂರ್ವಸಿದ್ದತೆ ಮಾಡಿಕೊಳ್ಳಿ ಎಂದು ಸಲಹೆ ನೀಡಿರುವ ಅವರು, ಅಭ್ಯಾಸದ ಸಂದರ್ಭದಲ್ಲಿ ಉಂಟಾಗಬಹುದಾದ ಗೊಂದಲಗಳನ್ನು ಶಿಕ್ಷಕರು ಪರಿಹರಿಸಬೇಕು, ಮಕ್ಕಳಿಗೆ ಪರೀಕ್ಷೆಗೆ ಅವಶ್ಯವಿರುವ ಕ್ಲಿಪ್‍ಪ್ಯಾಡ್, ಪೆನ್ನುಗಳು,ಜಾಮಿಟ್ರಿ ಬಾಕ್ಸ್ ,ಪೆನ್ಸಿಲ್‍ಗಳು, ಮೆಂಡರ್ ಹಾಗೂ ಅಳಿಸುವರಬ್ಬರ್‍ಗಳನ್ನು ಮೊದಲೇ ಸಿದ್ದಪಡಿಸಿಕೊಂಡಿರುವಂತೆ ಮಾರ್ಗದರ್ಶನ ನೀಡಬೇಕು ಎಂದರು.
ಆರೋಗ್ಯದ ಕಡೆ ಎಚ್ಚರವಿರಲು ತಿಳಿಸಿ
ಮಕ್ಕಳು ಆರೋಗ್ಯದ ಕುರಿತು ಎಚ್ಚರದಿಂದಿರಲು ಶಿಕ್ಷಕರು ಪ್ರತಿನಿತ್ಯ ಅರಿವು ಮೂಡಿಸಿ, ಆರೋಗ್ಯ ಕೆಟ್ಟರೆ ಅದು ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು, ಎಲ್ಲೆಂದರಲ್ಲಿ ತಿನ್ನುವುದನ್ನು ಬಿಡಲು ಹೇಳಿ, ಶಾಲೆಯಲ್ಲಿ ಬಿಸಿಯೂಟ, ಮನೆಯಲ್ಲೂ ಮಕ್ಕಳಿಗೆ ಪರೀಕ್ಷೆ ಮುಗಿಯುವರೆಗೂ ಸಸ್ಯಾಹಾರವನ್ನು ನೀಡಲು ತಿಳಿಸಿ, ಎಣ್ಣೆಯಲ್ಲಿ ಕರಿದ ತಿಂಡಿ ನೀಡದಿರಲು ಪೋಷಕರಿಗೆ ಅರಿವು ಮೂಡಿಸಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಿಡಿಪಿಐ ಕೆ.ರತ್ನಯ್ಯ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಮಾಡಿರುವ ಸಿದ್ದತೆಗಳ ಕುರಿತು ಮಾಹಿತಿ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ, ಇಸಿಒ ಆರ್.ಶ್ರೀನಿವಾಸನ್, ಶಿಕ್ಷಕ ಗೆಳೆಯರ ಬಳಗದ ಚಂದ್ರಪ್ಪ ಮತ್ತಿತರರಿದ್ದರು.
