ಶ್ರೀನಿವಾಸಪುರ: ರೈತರು ಹಸುಗಳ ಆರೋಗ್ಯ ರಕ್ಷಣೆಗೆ ಕಾಳಜಿ ವಹಿಸಬೇಕು ಎಂದು ಕೋಚಿಮುಲ್ ನಿರ್ದೇಶಕ ಎನ್.ಹನುಮೇಶ್ ಹೇಳಿದರು. ಪಟ್ಟಣದ ಕೋಚಿಮುಲ್ ಶಿಬಿರ ಕಛೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಹಾಲು ಉತ್ಪಾದಕರಿಗೆ ಕೌ ಮ್ಯಾಟ್, ಹಾಲು ಕರೆಯುವ ಯಂತ್ರ ಹಾಗೂ ಹಸು ಕಳೆದುಕೊಂಡ ರೈತರಿಗೆ ವಿಮಾ ಹಣದ ಚೆಕ್ ವಿತರಿಸಿ ಮಾತನಾಡಿ, ಹಸಿರು ಮೇವು ಬೆಳೆಯಲು ಇಚ್ಚಿಸುವ ಹಾಲು ಉತ್ಪಾದಕರಿಗೆ ಎಕರೆಯೊಂದಕ್ಕೆೆ ರೂ.3000 ಸಹಾಯ ಧನ ನೀಡಲಾಗುವುದು. ಬಿತ್ತನೆ ಬೀಜವನ್ನು ಉಚಿತವಾಗಿ ಕೊಡಲಾಗುವದು ಎಂದು ಹೇಳಿದರು.

ಪಶು ಆಹಾರದ ಬೆಲೆಯನ್ನು ಟನ್ನೊಂದಕ್ಕೆ ರೂ.1000 ಕಡಿಮೆ ಮಾಡಲಾಗಿದೆ. ಹಸು ಖರೀದಿಸಲು 20 ಗುಂಟೆ ಜಮೀನು ಹೊಂದಿರುವ ರೈತರಿಗೆ ಡಿಸಿಸಿ ಬ್ಯಾಂಕ್ ವತಿಯಿಂದ ರೂ.80 ಸಾವಿರ ಬಡ್ಡಿ ರಹಿತ ಸಾಲ ನೀಡಲಾಗುವುದು. ಹಸುಗಳನ್ನು ತವರು ಜಿಲ್ಲೆಗಳಲ್ಲಿ ಖರೀದಿಸದೆ ಹೊರಗಡೆಯಿಂದ ಖರೀದಿಸಿ ತರಬೇಕಾಗಿದೆ. ಯಂತ್ರದ ಸಹಾಯದಿಂದ ಹಾಲು ಕರೆಯುವ ಹಾಲು ಉತ್ಪಾದಕರಿಗೆ 1 ಲೀಟರ್‌ಗೆ 10 ಪೈಸೆ ಪ್ರೋತ್ಸಾಹ ಧನ ನಿಡಲಾಗುವುದು. ಹಾಲಿನ ದರವನ್ನು ಲೀಟರ್‌ಗೆ ಇನ್ನೂ ರೂ 2 ಹೆಚ್ಚಿಸಲು ಚಿಂತನೆ ನಡೆದಿದೆ ಎಂದು ಹೇಳಿದರು.
ಶಿಬಿರ ಕಚೇರಿಯ ಉಪ ವ್ಯವಸ್ಥಾಪಕ ಡಾ. ಶ್ರೀಕಾಂತ್ ಮಾತನಾಡಿ, ಹಾಲು ಉತ್ಪಾದಕರು ಕೋಮುಲ್ ವಿಮಾ ಯೋಜನೆಗೆ ಸೌಲಭ್ಯ ಪಡೆದಲ್ಲಿ ಸಹಜ ಸಾವಿಗೆ ರೂ.1 ಲಕ್ಷ ಹಾಗೂ ಅಸಹಜ ಸಾವಿಗೆ ರೂ.2 ಲಕ್ಷ ಪರಿಹಾರ ದೊರೆಯುತ್ತದೆ. ಆದ್ದರಿಂದ ಎಲ್ಲ ಅರ್ಹ ರೈತರು ಈ ಜೋಜನೆಯ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.ಸಭೆಯಲ್ಲಿ ಶೇ.50 ರಿಯಾಯಿತಿ ದರದಲ್ಲಿ ಹಾಲು ಉತ್ಪಾದಕರಿಗೆ 1100 ಕೌ ಮ್ಯಾಟ್, 55 ಹಾಲು ಕರೆಯುವ ಯಂತ್ರ ಹಾಗೂ ಹಸುಗಳ ಸಾವಿನಿಂದ ನಷ್ಟ ಅನುಭವಿಸಿದ್ದ 12 ಫಲಾನುಭವಿಗಳಿಗೆ ತಲಾ ರೂ.60 ಸಾವಿರ ವಿಮಾ ಹಣದ ಚೆಕ್ ವಿತರಿಸಲಾಯಿತು. 10 ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಸಾಮೂಹಿಕ ಹಾಲು ಕರೆಯುವ ಯಂತ್ರಗಳನ್ನು ನೀಡಲಾಯಿತು.
ಸಹಾಯಕ ವ್ಯವಸ್ಥಾಪಕ ನರಸಿಂಹಯ್ಯ ಹಾಗೂ ಸಿಬ್ಬಂದಿ ಇದ್ದರು.
