ವಾಮಂಜೂರು : ಧರ್ಮವೆಂದರೆ ಎಲ್ಲರಿಗೂ ಬದುಕುವ ಅವಕಾಶ ಮಾಡಿಕೊಡುವುದು. ಸರ್ವರ ಹಿತ ಬಯಸುವುದು ಮತ್ತು ಗೌರವಿಸುವುದು ಧರ್ಮದ ಆದ್ಯ ಕರ್ತವ್ಯವಾಗಿದೆ. ಸಮಾಜದಲ್ಲಿ ಶಾಂತಿ ವಾತಾವರಣ ನೆಲೆಕಾಣುವಲ್ಲಿ ಗುತ್ತುಗಳು ಮತ್ತು ಅವುಗಳ ಯಜಮಾನರ ಜವಾಬ್ದಾರಿ ಬಹಳಷ್ಟಿದೆ ಎಂದು ಗುರುಪುರ ಗೋಳಿದಡಿ ಗುತ್ತಿನ ಗಡಿಕಾರ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಅಭಿಪ್ರಾಯಪಟ್ಟರು.

ತಿರುವೈಲು ಗುತ್ತಿನ ಕುಟುಂಬಿಕರ `ಅಷ್ಟಪವಿತ್ರ ನಾಗಮಂಡಲೋತ್ಸವ ಸೇವೆ’ಯ ಪ್ರಯುಕ್ತ ಫೆ. 25ರಂದು ಸಂಜೆ ವಾಮಂಜೂರು ಶ್ರೀ ಅಮೃತೇಶ್ವರ ದೇವಸ್ಥಾನದ ಎದುರಿನ ಕಂಬಳ ಗದ್ದೆಯಲ್ಲಿ ಆಯೋಜಿಸಲಾದ `ಧರ್ಮಾವಲೋಕನ ಕೂಟ’ ಧಾರ್ಮಿಕ ಸಭೆಯಲ್ಲಿ ದಿಕ್ಸೂಚಿ ಭಾಷಣಗೈದ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ, ಗುತ್ತಿನ ಯಜಮಾನರು ಧರ್ಮ ದೇವತೆಗಳಿಂದ ದೀವಟಿಕೆ ಗೌರವ, ಸೀಯಾಳ ಸ್ವೀಕರಿಸುವುದಕ್ಕೆ ಮಾತ್ರ ಗುತ್ತಿನ ಯಜಮಾನಿಕೆ ಸೀಮಿತಗೊಳಿಸುವುದು ಧರ್ಮವಾಗದು.
ತೋರಿಕೆಯ ಧರ್ಮಾಚರಣೆ ನಮಗೆ ಬೇಡ. ನಿಜಾರ್ಥದಲ್ಲಿ ಧರ್ಮದ ಪಾಲನೆ ಇಲ್ಲಿಂದಲೇ ಆಗಲಿ. ಈ ನಿಟ್ಟಿನಲ್ಲಿ ಗುತ್ತಿನ ಯಜಮಾನರಾದ ನವೀನ್‍ಚಂದ್ರ ಆಳ್ವರು ಗಡಿ ಸ್ವೀಕಾರ ಮಾಡುವುದು ಈ ಮಣ್ಣಿಗೆ ಸಂಬಂಧಿಸಿದ ದೈವೇಚ್ಛೆಯಾಗಿದೆ ಎಂದರು.ದ್ವೀಪಪ್ರಜ್ವಲನೆ ಮಾಡಿದ ಮೂಡುಶೆಡ್ಡೆಗುತ್ತು ಗಡಿಕಾರ ವೇಣುಗೋಪಾಲ ಅರಸರು ಕೂಟಕ್ಕೆ ಶುಭ ಕೋರಿದರು. ಉಜಿರೆ ತಿಮರೋಡಿ ಬೀಡುವಿನ ಮಹೇಶ್ ತಿಮರೋಡಿ ಮಾತನಾಡಿ, ದಕ, ಉಡುಪಿ ಸೇರಿದಂತೆ ತುಳುನಾಡು ಧರ್ಮಾಡಳಿತ ವ್ಯಾಪ್ತಿಯ ನಾಡಾಗಿತ್ತು. ಕಾರಣಾಂತರಗಳಿಂದ ಗುತ್ತುಗಳು ತಮ್ಮ ನೈಜ ಕೆಲಸದಿಂದ ಹಿಂದೆ ಸರಿದವು.
ಈಗ ಧರ್ಮಾಡಳಿತ ಮರಳಿ ಕಟ್ಟುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಗುರುಪುರದಲ್ಲಿ ಸ್ಥಾಪಿಸಲಾಗಿರುವ ಪ್ರಾಚೀನ ಭಾರತದ ಧರ್ಮಾಡಳಿತ ಪುನರುತ್ಥಾನ ಕೂಟ ಪುನಾ ಗುತ್ತುಗಳ ಕರ್ತವ್ಯ ನೆಲೆಗೊಳಿಸಿ ಸಮಾಜದ ಎಲ್ಲ ವರ್ಗದವರ ಸುಭಿಕ್ಷೆಗೆ ಪ್ರಯತ್ನಿಸುತ್ತಿದೆ ಎಂದರು.ಮೂಡಬಿದಿರೆ ಕೆಲ್ಲಪುತ್ತಿಗೆ ಜಗದೀಶ ಅಧಿಕಾರಿ ಮಾತನಾಡಿ, ಆಳವಾಗಿ ಅಧ್ಯಯನ ಮಾಡಿದಾಗ ನಮ್ಮ ಗ್ರಾಮಕ್ಕೂ ನಮ್ಮ ಸುತ್ತಲಿನ ಮನೆತನಗಳ ಹೆಸರಿಗೂ ಹೋಲಿಕೆ-ಸಂಬಂಧ ಕಂಡು ಬರುತ್ತದೆ.
ತಿರುವೈಲುಗುತ್ತು ದೈವ-ದೇವರ ಸುತ್ತವರಿದ ಒಂದು ಸುಂದರ ಪರಿಸರ. ಶ್ರದ್ಧೆ, ನಂಬಿಕೆಗೆ ಪ್ರಾಧಾನ್ಯತೆ ನೀಡಿರುವುದರಿಂದ ಗುತ್ತುಗಳ ಕುಟುಂಬಗಳು ಇಂದಿಗೂ ಉತ್ತಮ ಸ್ಥಿತಿಯಲ್ಲಿವೆ ಎಂದರು. ವಾಮಂಜೂರು ಮಾಗಣೆ ಬದಿನಡಿ ಶ್ರೀ ಅರಸು ಮುಂಡಿತ್ತಾಯ ದೈವಸ್ಥಾನದ ಭೋಜ ಯಾನೆ ಮುಂಡ ಪೂಜಾರಿಯವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.
ತಿರುವೈಲುಗುತ್ತು ನವೀನ್‍ಚಂದ್ರ ಆಳ್ವ ಅಧ್ಯಕ್ಷತೆ ವಹಿಸಿದ್ದ ವೇದಿಕೆಯಲ್ಲಿ ಬೊಳ್ಳೊಳ್ಳಿಮಾರುಗುತ್ತು(ಪೆರ್ಮುದೆ) ಗಡಿಕಾರ ಗುರುರಾಜ ಮಾಡ, ಏತಮೊಗರುಗುತ್ತು ಗಡಿಕಾರ ಸದಾಶಿವ ಯಾನೆ ಜಯ ಶೆಟ್ಟಿ, ಹಳೆಯಂಗಡಿ ಗರಡಿಮನೆ ಗಡಿಕಾರ ಬಂಕಿ ನಾಯ್ಕರು, ಮೂಡುಕೊಣಾಜೆ ದೊಡ್ಡಮನೆ ಗಡಿಕಾರ ಸದಾಶಿವ ಹೆಗ್ಗಡೆ, ಇರುವೈಲು ದೊಡ್ಡಗುತ್ತು ಗಡಿಕಾರ ಜಗದೀಶ ಶೆಟ್ಟಿ ಯಾನೆ ಇಂರ್ದಾಳ ಕೊರಗ ಶೆಟ್ಟಿ, ಮೂಡುಜಪ್ಪುಗುತ್ತು ಸತೀಶ್ ಶೆಟ್ಟಿ, ಪೆರ್ಮಂಕಿಗುತ್ತು ಕಿಂಞಣ್ಣ ಪಕ್ಕಳ, ಬೊಂಡಂತಿಲಗುತ್ತು ಸಂದೀಪ್ ಶೆಟ್ಟಿ, ಕಾಪೆಟ್ಟುಗುತ್ತು ಸುರೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.ತಿರುವೈಲುಗುತ್ತು ರಾಜಕುಮಾರ ಶೆಟ್ಟಿ ಸ್ವಾಗತಿಸಿ ಪ್ರಸ್ತಾವಿಸಿದರು. ಅಶ್ವಿನ್ ಶೆಟ್ಟಿ ಬೊಂಡಂತಿಲ, ನಿತೇಶ್ ಶೆಟ್ಟಿ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು.
