ಕೈಕಂಬ : ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ(ರಿ) ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಕಂಡು ಬಂದಿರುವ ಕೆಲವು ಗೊಂದಲಗಳು ಮತ್ತು ಚುನಾವಣಾಧಿಕಾರಿ ಹಾಗೂ ಸಿಬ್ಬಂದಿಯ ಬೇಜವಾಬ್ದಾರಿ/ಕರ್ತವ್ಯಲೋಪದಿಂದ ಅರ್ಹ ಮತದಾರರು ಮತದಾನದಿಂದ ವಂಚಿತರಾಗಿದ್ದು, ಚುನಾವಣೆಯಲ್ಲಿ ಒಂದೇ ಬಣದ ಎಲ್ಲ 12 ಮಂದಿ ಗೆಲ್ಲುವಂತಾಯಿತು ಎಂದು ಜಿಲ್ಲಾ ಪಂಚಾಯತ್ ಸದಸ್ಯ(ಗುರುಪುರ) ಯು ಪಿ ಇಬ್ರಾಹಿಂ ಆರೋಪಿಸಿದರು.
ಮತದಾನಕ್ಕೆ ಒಂದು ದಿನ ಮುಂಚೆ 300ಕ್ಕೂ ಹೆಚ್ಚು ಸಾಲಗಾರರಲ್ಲದ ಮಂದಿಗೆ ಮತ ಚಲಾಯಿಸಲು ಹೈಕೋರ್ಟ್ ಆದೇಶ ನೀಡಿ, ಅರ್ಹ ಮತದಾರರ ಪಟ್ಟಿ ಪ್ರಕಟಿಸಿದ್ದರೂ, ಚುನಾವಣಾ ಸಿಬ್ಬಂದಿಯು ಕೂಲಂಕಷವಾಗಿ ಪರಿಶೀಲಿಸದೆ ಮತದಾರರ ಪಟ್ಟಿಯಲ್ಲಿದ್ದ ಅರ್ಹ ಮತದಾರರಿಗೆ ಮತದಾನದ ಹಕ್ಕು ನಿರಾಕರಿಸಿದ್ದಾರೆ. “ಇದು ಪ್ರಜಾಪ್ರಭುತ್ವದಲ್ಲಿ ಮತದಾರರಿಗಾದ ಅವಮಾನ” ಎಂದವರು.ಟೀಕಿಸಿದರು.ಮತದಾರ ಪಟ್ಟಿಯಲ್ಲಿದ್ದ ಸಾಲಗಾರರಲ್ಲದ ಮತದಾರರಿಗೆ ಸಾಲಗಾರರ ಸಾಲಿನಲ್ಲಿ ಮತ ಚಲಾಯಿಸಲು ಅವಕಾಶ ನೀಡಲಾಗಿದೆ. ಇದರಿಂದ ಮತ ಚಲಾಯಿಸುವ ವೇಳೆ ಬಹುತೇಕ ಮತದಾರರಲ್ಲಿ ಗೊಂದಲ ಉಂಟಾಗಿತ್ತು. ಈ ಮಧ್ಯೆ, ಹಲವರು ಮತ ಚಲಾಯಿಸದೆ ಮರಳಿದ್ದಾರೆ. ಚುನಾವಣಾಧಿಕಾರಿಯವರಲ್ಲಿ ಮೊದಲೇ ಈ ಬಗ್ಗೆ ತಿಳಿಸಲಾಗಿದ್ದರೂ, ಸಮರ್ಪಕ ಉತ್ತರ ನೀಡಿಲ್ಲ ಅಥವಾ ಸೂಕ್ತ ಕ್ರಮ ಕೈಗೊಂಡಿಲ್ಲ. ಪರಿಣಾಮ, ಫಲಿತಾಂಶ ಪ್ರಕಟವಾಗುತ್ತಲೇ ಒಂದೇ ಬಣದ ಎಲ್ಲ ಅಭ್ಯರ್ಥಿಗಳು ಸುಲಭವಾಗಿ ಗೆಲ್ಲುವಂತಾಯಿತು ಎಂದಿರುವ ಜಿಪಂ ಕೃಷಿ ಹಾಗೂ ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಇಬ್ರಾಹಿಂ, “ಚುನಾವಣಾ ಪ್ರಕ್ರಿಯೆ ಪ್ರಶ್ನಿಸಿ ನಾವು ನ್ಯಾಯಾಲಯದ ಮೊರೆ ಹೋಗಲು ಚಿಂತಿಸಿದ್ದೇವೆ” ಎಂದರು.

