ಬಂಟ್ವಾಳ: ಮಳೆಯಿಂದ ಹಾನಿಯಾದ ಶಾಲಾ ಕಟ್ಟಡಗಳನ್ನು ಗುಣಮಟ್ಟದ ಕಾಮಗಾರಿಯೊಂದಿಗೆ ಕಾಲಮಿತಿಯಲ್ಲಿ ಪೂರ್ತಿಗೊಳಿಸುವಂತೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಬುಧವಾರ ಬಂಟ್ವಾಳ ತಾಪಂನ ಎಸ್ ಜಿಎಸ್ ವೈ ಸಭಾಂಗಣದಲ್ಲಿ ಕಳೆದ ವರ್ಷದಲ್ಲಿ ಮಳೆಯಿಂದ ಹಾನಿಗೊಳಗಾಗ ಬಂಟ್ವಾಳ ಕ್ಷೇತ್ರದ ಸರಕಾರಿ ಶಾಲೆಗಳ ಕಟ್ಟಡ ದುರಸ್ಥಿ ಕಾರ್ಯದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕರು ಸರಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಮಳೆಯಿಂದ ಹಾನಿಯಾದ ಕಟ್ಟಡಗಳ ರಿಪೇರಿಗೆ ಅನುದಾನ ಬಿಡುಗಡೆಯಾಗಿದ್ದು, ನಿಗದಿತ ಅವಧಿಯೊಳಗೆ ಕಟ್ಟಡದ ದುರಸ್ಥಿ ಕಾರ್ಯವನ್ನು ಪೂರ್ಣಗೊಳಿಸಲು ಮುತುವರ್ಜಿವಹಿಸುವಂತೆ ಸೂಚಿಸಿದರು. ವಿವಿಧ ಗ್ರಾಪಂಗಳ ಪಿಡಿಒ, ಶಾಲಾಮುಖ್ಯೋಪಾಧ್ಯಾಯರುಗಳು, ಇಂಜಿನಿಯರ್ ಗಳು , ಸಿ.ಆರ್.ಪಿ.ಗಳು ಸಭೆಯಲ್ಲಿ ಹಾಜರಿದ್ದರು.
ಕ್ಷೇತ್ರದ 47 ಸರಕಾರಿ ಪ್ರಾಥಮಿಕ ಶಾಲೆಗಳಿಗೆ ಒಟ್ಟು 252.50 ಲಕ್ಷ ಹಾಗೂ 12 ಪ್ರೌಢಶಾಲಾ ಕೊಠಡಿಗಳ ದುರಸ್ಥಿ ಕಾರ್ಯಕ್ಕೆ 136.50 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, ಮಾರ್ಚ್ ಅಂತ್ಯದೊಳಗೆ ಕಾಮಗಾರಿ ಮುಗಿಸಬೇಕಾಗಿರುವುದರಿಂದ ಅಧಿಕಾರಿ ಪರಸ್ಪರ ಹೊಂದಾಣಿಕೆಯೊಂದಿಗೆ ಕೆಲಸ ಮಾಡುವಂತೆ ತಿಳಿಸಿದರುವೇದಿಕೆಯಲ್ಲಿ ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ, ತಾ.ಪಂ. ಇ.ಒ.ರಾಜಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಎ.ಇ.ಇ. ತಾರನಾಥ್ ಸಾಲಿಯಾನ್ ಉಪಸ್ಥಿತರಿದ್ದರು.
