ಕೋಲಾರ: ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟ ಕುರಿತು ದೂರುಗಳು ಬರುತ್ತಿದ್ದು, ಇಲಾಖೆ ವತಿಯಿಂದ ಅನಿರೀಕ್ಷಿತ ದಾಳಿಗಳನ್ನು ನಡೆಸಿ ಅಕ್ರಮ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ತಡೆಗಟ್ಟಲಾಗುವುದು ಎಂದು ಅಬಕಾರಿ ಮತ್ತು ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವರು ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್ ನಾಗೇಶ್ ಅವರು ತಿಳಿಸಿದರು. IMG_20200103_200546
 ಇಂದು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಆರೋಗ್ಯ ಇಲಾಖೆಯಲ್ಲಿ ಡಿ ಗ್ರೂಪ್‍ನ ಶೇ 25 ರಷ್ಟು ನೌಕರರನ್ನು ಕೆಲಸದಿಂದ ಕೈಬಿಟ್ಟಿರುವ ಬಗ್ಗೆ ಮಾನ್ಯ ಆರೋಗ್ಯ ಸಚಿವರೊಂದಿಗೆ ಚರ್ಚಿಸಿ ಪುನಃ ಕೆಲಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು. ಮಾನ್ಯ ಆರೋಗ್ಯ ಸಚಿವರು ಇನ್ನು 15 ದಿನಗಳಲ್ಲಿ ಆಸ್ಪತ್ರೆ ಕಟ್ಟಡ ಉದ್ಘಾಟನೆಗೆ ಜಿಲ್ಲೆಗೆ ಆಗಮಿಸುತ್ತಿದ್ದು, ಜಿಲ್ಲೆಯ ಆರೋಗ್ಯ ಇಲಾಖೆಯಲ್ಲಿ ಇರುವ ಸಮಸ್ಯೆಗಳ ಕುರಿತು ಅವರಿಗೆ 2-3 ದಿನಗಳಲ್ಲಿ ತಿಳಿಸಲಾಗುವುದು ಎಂದರು.
IMG_20200103_200548
 ಸಮಾಜ ಕಲ್ಯಾಣ ಇಲಾಖೆಯಲ್ಲಿ ಹಾಸ್ಟೆಲ್‍ಗಳಿಗೆ ಅಗತ್ಯವಾದ ಸೌಲಭ್ಯಗಳನ್ನು ಕಲ್ಪಿಸುವ ಕಾರ್ಯವನ್ನು ಜಿಲ್ಲಾ ಮಟ್ಟದಲ್ಲಿ ಮಾಡಲು ಅವಕಾಶ ಕಲ್ಪಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಹಾಸ್ಟೆಲ್‍ಗಳಿಗೆ ಬೇಕಾದ ಬೆಡ್, ಕಂಬಳಿ ಇತರೆ ಪರಿಕರಗಳ ವಿತರಣೆಯ ಟೆಂಡರನ್ನು ಜಿಲ್ಲಾ ಮಟ್ಟದಲ್ಲಿ ಕರೆಯುವಂತೆ ಕ್ರಮವಹಿಸಲಾಗುವುದು. ಅರಣ್ಯ ಇಲಾಖೆಯಲ್ಲಿ ಗ್ಯಾಸ್ ಮತ್ತು ಸೋಲಾರ್ ಲೈಟ್‍ಗಳ ವಿತರಣೆ ಕುರಿತ ತನಿಖೆಯನ್ನು ಅಯಾ ತಾಲ್ಲೂಕು ಮಟ್ಟದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರುಗಳ ನೇತೃತ್ವದಲ್ಲಿ ನಡೆಸಲಾಗುವುದು ಎಂದು ತಿಳಿಸಿದರು.
 ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಸಿ.ಎಸ್ ವೆಂಕಟೇಶ್ ಅವರು ಮಾತನಾಡಿ, ಸಮಾಜ ಕಲ್ಯಾಣ ಇಲಾಖೆಯಲ್ಲಿ ಬೆಂಗಳೂರಿನಿಂದ ಟೆಂಡರ್ ಕರೆದು ಅಗತ್ಯಕ್ಕಿಂತ ಹೆಚ್ಚಿನ ಬೆಡ್‍ಗಳನ್ನು ಹಾಸ್ಟೆಲ್ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಗುತ್ತದೆ. ಇದರ ಬದಲು ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು. ಅಧಿಕಾರಿಗಳು ಜಿಲ್ಲಾ ಪಂಚಾಯತ್ ಸದಸ್ಯರು ಕೇಳಿದ ಮಾಹಿತಿಯನ್ನು ಸಾಮಾನ್ಯ ಸಭೆಗೆ ಒಂದು ವಾರಕ್ಕೆ ಮುಂಚೆ ನೀಡಬೇಕು ಎಂದರು.
 ಜಿಲ್ಲೆಯನ್ನು ಒಂದು ಮಾದರಿ ಜಿಲ್ಲೆಯನ್ನಾಗಿ ಅಭಿವೃದ್ಧಿ ಪಡಿಸಲು ಪ್ರತಿಯೊಬ್ಬರೂ ಸಹಕರಿಸಬೇಕು. ಸರ್ಕಾರಿ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರದ ಪ್ರಕಾರ ಜನಪ್ರತಿನಿಧಿಗಳ ಹೆಸರನ್ನು ಹಾಕಬೇಕು. ಶಿಷ್ಟಾಚಾರ ಉಲ್ಲಂಘನೆಯಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಸಭೆಗೆ ಹಾಜರಾಗದ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ತಿಳಿಸಿದರು.
 ಸಂಸದರಾದ ಎಸ್.ಮುನಿಸ್ವಾಮಿ ಅವರು ಮಾತನಾಡಿ, ಕೆರೆಗಳಲ್ಲಿ ಅವೈಜ್ಞಾನಿಕವಾಗಿ ಹೂಳು ತೆಗೆಯುವುದರಿಂದ ತೊಂದರೆಯಾಗುತ್ತಿದೆ. ಕೆರೆಗಳ ಒಂದು ಮೀಟರ್ ಮಣ್ಣನ್ನು ಮಾತ್ರ ತೆಗೆಯಬೇಕು. ರೈತರು ಉಚಿತವಾಗಿ ಕೆರೆ ಮಣ್ಣನ್ನು ತೆಗೆದುಕೊಳ್ಳಲು ಅವಕಾಶ ಕಲ್ಪಿಸಿ, ಇತರೆಯವರೆಗೆ ಸರ್ಕಾರದ ದರದಂತೆ ನಿಗದಿ ಮಾಡಬೇಕು. ಇಟ್ಟಿಗೆ ಕಾರ್ಖಾನೆಯವರಿಗೆ ನಿರ್ದಿಷ್ಟ ದರದಲ್ಲಿ ಮಣ್ಣು ತೆಗೆದುಕೊಳ್ಳಲು ಅವಕಾಶ ಕಲ್ಪಿಸಬೇಕು. ಇದರಿಂದ ಕೋಲಾರ ಜಿಲ್ಲೆಯಲ್ಲಿರುವ 2000 ಕ್ಕೂ ಹೆಚ್ಚು ಕೆರೆಗಳ ಹೂಳು ತೆಗೆಯುವ ಕಾರ್ಯ ಯಶಸ್ವಿಯಾಗುತ್ತದೆ ಎಂದರು.
 ಕೋಲಾರಮ್ಮ ಕೆರೆಯ ಶುಚಿತ್ವವನ್ನು ನನ್ನ ಸ್ವಂತ ಹಣದಲ್ಲಿ ಮಾಡಿಸಲಾಗುತ್ತಿದೆ. ಈ ಕೆರೆಯಲ್ಲಿ ಸುಮಾರು 28 ಎಕರೆ ಒತ್ತುವರಿಯನ್ನು ತೆರವುಗೊಳಿಸಲಾಗಿದೆ. ಜಿಲ್ಲೆಯ ಉಳಿದ ಕೆರೆಗಳ ಸರ್ವೆ ಮಾಡಿಸಿ ಒತ್ತುವರಿಯನ್ನು ತೆರವುಗೊಳಿಸಬೇಕು. ಕೆರೆಗಳನ್ನು ಉಳಿಸಿ ಬೆಳೆಸಿಕೊಂಡರೆ ಮುಂದಿನ ಪೀಳಿಗೆಗೂ ಅಂತರ್ಜಲ ನೀಡಲು ಸಾಧ್ಯವಾಗುತ್ತದೆ. ಕೇಂದ್ರ ಸರ್ಕಾರವು ಅಟಲ್ ಭೂ ಜಲಯೋಜನೆಯನ್ನು ಜಾರಿಗೆ ತಂದಿದ್ದು, ಇದರಲ್ಲಿ ಕರ್ನಾಟಕ ರಾಜ್ಯವನ್ನು ಆಯ್ಕೆ ಮಾಡಿದ್ದು, ಕೋಲಾರ ಜಿಲ್ಲೆಯು ಈ ಯೋಜನೆಯ ವ್ಯಾಪ್ತಿಯಲ್ಲಿದೆ. ಇದರಿಂದ ಜಿಲ್ಲೆಯ ಮನೆ ಮನೆಗೂ ನೀರು ನೀಡುವ ಕಾರ್ಯಕ್ಕೆ ಉಪಯುಕ್ತವಾಗುತ್ತದೆ ಎಂದು ಮಾಹಿತಿ ನೀಡಿದರು.
ಮಾಲೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ. ವೈ ನಂಜೇಗೌಡ ಅವರು ಮಾತನಾಡಿ, ಬಂಗಾರಪೇಟೆ ಮತ್ತು ಮಾಲೂರು ತಾಲ್ಲೂಕುಗಳಲ್ಲಿ ಆನೆಗಳ ಹಾವಳಿ ಇದ್ದು, ಈ ಬಗ್ಗೆ ಅರಣ್ಯ ಇಲಾಖೆಯವರು ಕ್ರಮ ಕೈಗೊಳ್ಳಬೇಕು. ಚಿಲ್ಲರೆ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದು,  ಈ ಬಗ್ಗೆ ಅಬಕಾರಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಕೋಲಾರ ಶಾಸಕರಾದ ಕೆ. ಶ್ರೀನಿವಾಸಗೌಡ ಅವರು ಮಾತನಾಡಿ, ಕೃಷಿ ಹೊಂಡಗಳು ಜಿಲ್ಲೆಯ ರೈತರಿಗೆ ವರದಾನವಾಗಿವೆ. ಕೃಷಿ ಹೊಂಡಗಳ ನಿರ್ಮಾಣದಲ್ಲಿ ಯಾವುದೇ ಲೋಪವಾಗದಂತೆ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಬೇಕು. ಇಂದು ಪೋಷಕರು ತಮ್ಮ ಮಕ್ಕಳನ್ನು ಹೆಚ್ಚಾಗಿ ಖಾಸಗಿ ಶಾಲೆಗಳು ಹಾಗೂ ಇಂಗ್ಲೀಷ್ ಮಾಧ್ಯಮದ ಶಾಲೆಗಳಿಗೆ ಕಳುಹಿಸುತ್ತಿದ್ದು, ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕುಂಠಿತವಾಗಿದೆ. ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ ಹಾಗೂ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಆಕರ್ಷಿಸಬೇಕಿದೆ ಎಂದರು.
 ಜಿಲ್ಲಾ ಪಂಚಾಯತ್ ಸದಸ್ಯರುಗಳು ಮಾತನಾಡಿ, ಸಮಾಜ ಕಲ್ಯಾಣ ಇಲಾಖೆಯ ಹಿಂದಿನ ಅಧಿಕಾರಿಗಳು ಚಾರ್ಜ್ ನೀಡಿಲ್ಲ.  ಹಾಸ್ಟೆಲ್‍ಗಳು ಮಳೆ ಕೊಯ್ಲು ಮತ್ತು ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸುವಲ್ಲಿ ಅಕ್ರಮಗಳಾಗಿದ್ದು, ಸೂಕ್ತ ತನಿಖೆ ನಡೆಸಬೇಕು. ಅರಣ್ಯ ಇಲಾಖೆ ವತಿಯಿಂದ ಎಸ್.ಸಿ, ಎಸ್.ಟಿ ಫಲಾನುಭವಿಗಳಿಗೆ ಗ್ಯಾಸ್ ಸಿಲಿಂಡರ್, ಸೋಲಾರ್ ದೀಪ ಮತ್ತು ವಾಟರ್ ಹೀಟರ್ ವಿತರಣೆಯಲ್ಲಿ ಲೋಪಗಳಾಗಿವೆ. ಕೃಷಿ ಇಲಾಖೆಯಲ್ಲಿ ಫಲಾನುಭವಿಗಳಿಗೆ ಟಾರ್ಪಲ್‍ಗಳನ್ನು ಒಂದು ವರ್ಷದಿಂದ ವಿತರಣೆ ಮಾಡಿಲ್ಲ. ಬಿಲ್ ಕಲೆಕ್ಟರ್‍ಗಳಿಂದ ಗ್ರೇಡ್ 2 ಕಾರ್ಯದರ್ಶಿಗೆ ಬಡ್ತಿ ನೀಡುವಾಗ ಈ ಹಿಂದೆ ಜೇಷ್ಠತಾ ಪಟ್ಟಿಯಲ್ಲಿದ್ದು, ವಂಚಿತರಾಗಿರುವವರನ್ನೇ ಪರಿಗಣಿಸಬೇಕು ಎಂದು ತಮ್ಮ ಅಹವಾಲುಗಳನ್ನು ಸಭೆಯಲ್ಲಿ ಚರ್ಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಹೆಚ್.ವಿ ದರ್ಶನ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಯಶೋಧ ಕೃಷ್ಣಮೂರ್ತಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಂ.ಬಿ ಶ್ರೀನಿವಾಸ್, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾದ ರೂಪಶ್ರೀ ಮಂಜುನಾಥ್ ಅವರು ಸೇರಿದಂತೆ ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *