ಬಂಟ್ವಾಳ: ಬಿ.ಸಿ.ರೋಡ್ ನಲ್ಲಿ ನಿಲ್ಲಿಸಿದ್ದ ಬೈಕ್ ವೊಂದು ಕಳವಾಗಿರುವ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕುರಿಯಾಳ ಗ್ರಾಮದ ಯಜ್ಞೇಶ್ ಪೂಜಾರಿ ಎಂಬವರು ಪೊಲೀಸ್ ದೂರು ನೀಡಿದ್ದಾರೆ. ಡಿ. 27ರಂದು ರಾತ್ರಿ 9ಗಂಟೆಗೆ ಬಿ.ಸಿ.ರೋಡ್ ನಲ್ಲಿ ನಿಲ್ಲಿಸಿದ್ದ ಬೈಕ್ ಕಳವಾಗಿರುವುದಾಗಿ ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅದೇರೀತಿ ಬಿ.ಮೂಡಾ ಸರಕಾರಿ ಪದವಿ ಪೂರ್ವ ಕಾಲೇಜ್ ನಲ್ಲಿ ಸೊತ್ತುಗಳು ಕಳವಾಗಿರುವ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ .ಕಾಲೇಜಿನ ಆಫೀಸ್ ವೊಂದರ ಬೀಗ ಮುರಿದು ಕಪಾಟಿನಲ್ಲಿದ್ದ ಎರಡು ಕ್ಯಾಮರ, ಡಿವಿಆರ್ ಹಾಗೂ 5 ಸಾವಿರ ರೂ. ನಗದು ಕಳವಾಗಿರುವುದಾಗಿ ಬಿಮೂಡಾ ಸರಕಾರಿ ಪದವಿ ಪೂರ್ವ ಕಾಲೇಜ್ ನ ಪ್ರಾಂಶುಪಾಲ ಯೂಸುಫ್ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.ಕಾಲೇಜಿನಲ್ಲಿ ಕಟ್ಟಡವೊಂದರ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ವೀಕ್ಷಣೆ ಮಾಡುವಾಗ ಕಳವು ಕೃತ್ಯ ಬೆಳಕಿಗೆ ಬಂದಿರುವುದಾಗಿ, ಇವುಗಳ ಒಟ್ಟು ಮೊತ್ತ 20 ಸಾವಿರ ರೂ. ಅಂದಾಜಿಸಲಾಗಿದೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ಘಟನಾ ಸ್ಥಳಕ್ಕೆ ಬಂಟ್ವಾಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
