ಮಂಗಳೂರು : ಗುರುಪುರ ಬಂಟರ ಮಾತೃ ಸಂಘ(ರಿ) ಇದರ ರಾಷ್ಟ್ರೀಯ ಬಂಟರ ಭಾವೈಕ್ಯ ಸಂಗಮ ಹಾಗೂ ಬಂಟ ಕಲಾ ಪ್ರತಿಭೆ ಬಿಂಬಿಸುವ `ಬಂಟ ಕಲಾವೀಳ್ಯ’ ಅಂತರ್ ಬಂಟರ ಸಂಘಗಳ ಸ್ಪರ್ಧಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಮಂಗಳೂರಿನ `ಬಂಟರ ಯಾನೆ ನಾಡವರ ಮಾತೃ ಸಂಘ’ದಲ್ಲಿ ಡಿ. 27ರಂದು ನಡೆಯಿತು.

gur-dec-28-bidugade

ಬಂಟರ ಯಾನೆ ನಾಡವರ ಮಾತೃ ಸಂಘ(ರಿ) ಮಂಗಳೂರು ಇದರ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿಯವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ, ಸಮಾಜದ ಒಂದು ಉತ್ತಮ ಕೆಲಸಕ್ಕೆ ಎಲ್ಲರ ಸಹಕಾರ ಅತ್ಯಗತ್ಯ. ಇಂತಹ ಸ್ಪರ್ಧೆಗಳ ಮೂಲಕ ಸಮಾಜ ಬಾಂಧವರ ಒಗ್ಗಟ್ಟು ವ್ಯಕ್ತವಾಗಬೇಕು. ಸ್ಪರ್ಧೆಯಲ್ಲಿ ಗೆಲ್ಲುವುದಕ್ಕಿಂತಲೂ, ಪಾಲ್ಗೊಳ್ಳುವಿಕೆ ಮುಖ್ಯ. ಫಲಿತಾಂಶ ಏನೇ ಇದ್ದರೂ, ಕೆಟ್ಟ ಮಾತುಗಳನ್ನಾಡದೆ ಒಮ್ಮತ, ಒಗ್ಗಟ್ಟು ಪ್ರದರ್ಶಿಸಬೇಕು. ತೀರ್ಪುಗಾರರ ದೃಷ್ಟಿಕೋನ ಭಿನ್ನವಾಗಿದ್ದು, ಅವರು ನೀಡುವ ತೀರ್ಪಿಗೆ ನಾವೆಲ್ಲರೂ ಬದ್ಧರಾಗಬೇಕು ಎಂದರು.

gur-dec-28-malaadi ajit-1

ಬಂಟರ ಯಾನೆ ನಾಡವರ ಮಾತೃ ಸಂಘದ ಕಾರ್ಯದರ್ಶಿ ವಸಂತ ಶೆಟ್ಟಿ ಮಾತನಾಡಿ, `ಕಲಾವೀಳ್ಯ’ ಸ್ಪರ್ಧೆಯು ಗುರುಪುರ ಬಂಟರ ಮಾತೃ ಸಂಘದಿಂದ ಉತ್ತಮವಾಗಿ ಮೂಡಿಬರಲಿದೆ ಎಂಬ ವಿಶ್ವಾಸವಿದೆ. ಇತರ ಬಂಟರ ಸಂಘಗಳಿಗೆ ಇದು ಮಾದರಿ ಕಾರ್ಯಕ್ರಮವಾಗಬೇಕು ಎಂದರು. ಕಲಾ ತಂಡದ ನಿರ್ದೇಶಕ ಪರಮಾನಂದ ಸಾಲ್ಯಾನ್ ಅನಿಸಿಕೆ ವ್ಯಕ್ತಪಡಿಸುತ್ತ, ಒಂದು ಸಮಾಜದ ಕಲಾವಿದರು ನೀಡುವ ಸಮೂಹ ಸ್ಪರ್ಧೆಯಲ್ಲಿ ತೀರ್ಪು ನೀಡುವುದು ಅತ್ಯಂತ ಕಷ್ಟದ ಕೆಲಸ. ತೀರ್ಪುಗಾರರು ಸಾಕಷ್ಟು ಬೈಗುಳ ಕೇಳಬೇಕಾಗುತ್ತದೆ. ಯಾವುದೇ ತಾರತಮ್ಯವಿಲ್ಲದೆ ಎಲ್ಲ ತಂಡಗಳ ಪ್ರದರ್ಶನಗಳ ಮೇಲೆ ಸೂಕ್ಷ್ಮ ಹಾಗೂ ಪಾರದರ್ಶಕ ದೃಷ್ಟಿಕೋನ ಬೀರಬೇಕಾಗುತ್ತದೆ. ಸ್ಪರ್ಧಾ ತಂಡಗಳಿಂದ ಸಣ್ಣ ತಪ್ಪುಗಳಿಗೂ ಆಸ್ಪದಿರಬಾರದು. ಆವಾಗಲೇ ತೀರ್ಪುಗಾರರ ತೀರ್ಪು ಎಷ್ಟು ಸಮಂಜಸ ಎಂಬುದು ಗೊತ್ತಾಗುತ್ತದೆ ಎಂದರು.

gur-dec-28-sudarshan

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ರಾಜಕುಮಾರ್ ಶೆಟ್ಟಿ ತಿರುವೈಲುಗುತ್ತು ಮಾತನಾಡಿ, ತಂಡಗಳು ಮುಂಬೈ ಅಥವಾ ದುಬೈಯಿಂದ ಬರಲಿ, ಉತ್ತಮ ಪ್ರದರ್ಶನ ನೀಡಿದವರಿಗೆ ಬಹುಮಾನ ನೀಡುತ್ತೇವೆ. ತಂಡಗಳು ಆಯ್ಕೆ ಮಾಡುವ ವಿಷಯಗಳಿಗೆ ಸಂಬಂಧಿಸಿದಂತೆ ತೀರ್ಪುಗಾರರಿಗೆ ಮೊದಲೇ ಮನದಟ್ಟು ಮಾಡಿಕೊಡುತ್ತೇವೆ. ಆದ್ದರಿಂದ ತಂಡಗಳು ಆಯ್ಕೆ ಮಾಡುವ ವಿಷಯದಲ್ಲಿ ತೀರ್ಪುಗಾರರಲ್ಲಿ ಯಾವುದೇ ಗೊಂದಲ ಇರಲಾರದು ಎಂದರು.

ವೇದಿಕೆಯಲ್ಲಿ ರವೀಂದ್ರನಾಥ ಮಾರ್ಲ ಪೆರ್ಮಂಕಿ, ಸಂತೋಷ್ ಶೆಟ್ಟಿ ಶೆಡ್ಡೆ, ಜಯರಾಮ ಶೆಟ್ಟಿ `ವಿಜೇತ’, ಚಂದ್ರಹಾಸ ಶೆಟ್ಟಿ ನಾರಳ ಉಪಸ್ಥಿತರಿದ್ದರು. ಆರಂಭದಲ್ಲಿ ಇತ್ತೀಚೆಗೆ ನಿಧನರಾದ ಬಂಟ ಸಮಾಜದ ಕೊಡುಗೈ ದಾನಿ ಸುಬ್ಬಯ್ಯ ಶೆಟ್ಟರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಬಳಿಕ ವಿವಿಧ ಸಂಘದ ಪದಾಧಿಕಾರಿಗಳು ತಮ್ಮ ಅನಿಸಿಕೆ ಮತ್ತು ಸಲಹೆ ನೀಡಿದರು. ಸಂಘದ ಪ್ರಧಾನ ಸಂಚಾಲಕ ಸುದರ್ಶನ ಶೆಟ್ಟಿ ಪೆರ್ಮಂಕಿ ಪ್ರಸ್ತಾವಿಕ ಮಾತನಾಡಿದರು. ರಾಜಕುಮಾರ್ ಶೆಟ್ಟಿ ಸ್ವಾಗತಿಸಿದರೆ, ಜಯರಾಮ ಶೆಟ್ಟಿ ಉಳಾಯಿಬೆಟ್ಟು ಮತ್ತು ಅಶ್ವಿನ್ ಶೆಟ್ಟಿ ಬೊಂಡಂತಿಲಗುತ್ತು ನಿರೂಪಿಸಿದರು. ಸಂಘದ ಯುವ ವಿಭಾಗದ ಕಾರ್ಯದರ್ಶಿ ಮನೋಜ್ ರೈ ಶೆಡ್ಡೆ ವಂದಿಸಿದರು.

By suddi9

Leave a Reply

Your email address will not be published. Required fields are marked *