ಕೋಲಾರ: ಕೋಲಾರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 1 ಲಕ್ಷ ಮಂದಿ ಮಹಿಳಾ ಸಂಘಗಳ ಸದಸ್ಯರಿಗೆ 500 ಕೋಟಿ ರೂ ಸಾಲ ವಿತರಿಸಲು ಯೋಜನೆ ರೂಪಿಸಲಾಗಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಪ್ರಕಟಿಸಿದರು.
ಶುಕ್ರವಾರ ನಗರದ ಪತ್ರಕರ್ತರ ಭವನದಲ್ಲಿ ಡಿಸಿಸಿ ಬ್ಯಾಂಕ್ ವತಿಯಿಂದ 54 ಮಹಿಳಾ ಸ್ವಸಹಾಯ ಸಂಘಗಳಿಗೆ 2.70 ಕೋಟಿ ರೂಗಳ ಸಾಲದ ಚೆಕ್ ವಿತರಿಸಿ ಅವರು ಮಾತನಾಡುತ್ತಿದ್ದರು.
ಡಿಸಿಸಿ ಬ್ಯಾಂಕಿನಿಂದ ಹಮ್ಮಿಕೊಳ್ಳಲಾಗುತ್ತಿರುವ ಜನಪರ ಯೋಜನೆಗಳಿಂದ ವಿರೋಧಿಗಳಿಗೆ ಜೀರ್ಣಸಿಕೊಳ್ಳಲಾಗುತ್ತಿಲ್ಲ, ಬ್ಯಾಂಕಿನ ವಿರುದ್ದ ಸಲ್ಲದ ಹೇಳಿಕೆ ನೀಡುವ ಮೂಲಕ ಕ್ಷುಲ್ಲುಕ ರಾಜಕಾರಣ ಮಾಡುತ್ತಿದ್ದಾರೆ, ಇಂತಹವರಿಗೆ ಸಮರ್ಪಕ ಸಾಲ ಮರುಪಾವತಿ ಮೂಲಕ ತಾಯಂದಿರು ಉತ್ತರ ನೀಡಬೇಕು ಎಂದು ಮನವಿ ಮಾಡಿದರು.
ಈಗಾಗಲೇ ಸಹಕಾರ ಸಂಘಗಳ ಮೂಲಕ ಸದಸ್ಯರಿಗೆ ಗೃಹೋಪಯೋಗಿ ಉಪಕರಣಗಳನ್ನು ಬಡ್ಡಿರಹಿತ ಕಂತುಗಳ ಮೂಲಕ ನೀಡಲಾಗುತ್ತಿದೆ. ಇದರಿಂದ ಅಂಗಡಿಗಳವರಿಗೆ ಸಹಿಸಿಕೊಳ್ಳಲಾಗುತ್ತಿಲ್ಲ, ಮಹಿಳೆಯರು ಅಂಗಡಿಯಲ್ಲಿ ಖರೀದಿ ಮಾಡಬೇಕಾದರೆ ಎಚ್ಚುವರಿ ಹಣ ಪಾವತಿ ಮಾಡಬೇಕು ಎಂದ ಅವರು ಯಾವುದೇ ವ್ಯಾಪಾರದ ಉದ್ದೇಶವಲ್ಲದ ಸೇವಾ ಮನೋಭಾವದಿಂದ ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಖಾಸಗಿ ವ್ಯಕ್ತಿಗಳಿಂದ ಶೇ.5ಕ್ಕೂ ಹೆಚ್ಚು ದರದ ಬಡ್ಡಿಗೆ ಸಾಲ ಪಡೆಯುತ್ತೀರಿ ಆದರೆ ಬ್ಯಾಂಕಿನಿಂದ ಪಡೆದುಕೊಂಡಿರುವ ಶೂನ್ಯ ಬಡ್ಡಿ ಸಾಲವನ್ನು ಕಂತು ಲೆಕ್ಕದಲ್ಲಿ ಮರು ಪಾವತಿ ಮಾಡಿದರೆ ಸಾಕು, ಇದರಿಂದ ನಿಮಗೆ ಯಾವುದೇ ರೀತಿ ಹೊರೆಯಾಗುವುದಿಲ್ಲ, ಬಡ್ಡಿ ಮಾಫಿಯಾಗಳು ಬೀದಿಗೆ ಬರುವ ತನಕ ನಮ್ಮ ಈ ಪ್ರಯತ್ನ ಮುಂದುವರೆಯುತ್ತಲೇ ಇರುತ್ತದೆ, ಇದಕ್ಕೆ ಮಹಿಳೆಯರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ವಿ.ದಯಾನಂದ್, ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕಿನಿಂದ ಹಮ್ಮಿಕೊಂಡಿರುವ ಕಾರ್ಯಕ್ರಮಗಳು ದೇಶಕ್ಕೆ ಮಾದರಿಯಾಗಿವೆ, ಈ ನಮ್ಮ ಯೋಜನೆಗಳನ್ನು ಹೊರಗಿನ ರಾಜ್ಯದವರು ಜಾರಿಗೆ ತರಲು ಮುಂದಾಗಿದ್ದಾರೆ ಎಂದು ತಿಳಿಸಿದರು.
ಮಹಿಳಾ ಸ್ವ ಸಹಾಯ ಸಂಘಗಳ ಸದಸ್ಯರು, ರೈತರು ಬ್ಯಾಂಕಿನ ಶಕ್ತಿಯಿದ್ದಂತೆ. ಪ್ರತಿ ವಾರ ಕಡ್ಡಾಯವಾಗಿ ಸಭೆ ನಡೆಸಲು. ಜತೆಗೆ ಲೆಕ್ಕ ಪರಿಶೋಧನೆ ಮಾಡಿಸಬೇಕು. ಇದರಿಂದ ಸುಲಭವಾಗಿ ಸಾಲ ಪಡೆದುಕೊಳ್ಳಲು ಅನುಕೂಲವಾಗುತ್ತದೆ. ಉಳಿತಾಯ ಹಣವನ್ನು ಡಿಸಿಸಿ ಬ್ಯಾಂಕಿನಲ್ಲಿ ಠೇವಣಿ ಇಡಬೇಕು ಎಂದು ಹೇಳಿದರು .ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಲ್.ಅನಿಲ್ ಕುಮಾರ್, ಡಿಸಿಸಿ ಬ್ಯಾಂಕಿಗೆ 6 ವರ್ಷಗಳ ಹಿಂದೆ ಯಾವುದೇ ರೀತಿ ಸಾಲ ನೀಡುವ ಶಕ್ತಿ ಇಲ್ಲದೇ ದಿವಾಳಿಯಾಗಿತ್ತು ಎಂದ ಅವರು, ಈಗ ಗೋವಿಂದಗೌಡ ನೇತೃತ್ವದ ಆಡಳಿತ ಮಂಡಳಿಯ ಸತತ ಪ್ರಯತ್ನದಿಂದ ಈಗ ಜನ ಮನೆಮಾತಾಗಿದೆ ಎಂದು ಅಭಿಪ್ರಾಯಪಟ್ಟರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರು ವಾಣಿಜ್ಯ ಬ್ಯಾಂಕಿಲ್ಲಿ ಮಹಿಳಾ ಸಂಘಗಳಿಗೆ ಬಡ್ಡಿಗೆ ಸಾಲ ಕೊಡಿಸುತ್ತಾರೆ. ಇದರಿಂದ ಮಹಿಳೆಯರು ಆರ್ಥಿಕವಾಗಿ ಸಲಬರಾಗಲು ಸಹಕಾರಿಯಾಗುವುದಿಲ್ಲ. ಡಿಸಿಸಿ ಬ್ಯಾಂಕ್‍ನಿಂದ ನೀಡುವ ಸಾಲ ಪಡೆದುಕೊಂಡು ಸದುದ್ದೇಶಕ್ಕೆ ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.ಪ್ರತಿಯೊಬ್ಬರು ತಮ್ಮ ವೈಯುಕ್ತಿಕ ಬ್ಯಾಂಕ್ ಖಾತೆಯನ್ನು ಡಿಸಿಸಿ ಬ್ಯಾಂಕಿನಲ್ಲಿ ಮಾಡಿಸಬೇಕು. ತಮ್ಮ ಉಳಿದಿರುವ ಹಣ ಬ್ಯಾಂಕಿನಲ್ಲಿ ಠೇವಣಿ ಇಟ್ಟರೆ ಬಡ್ಡಿ ನೀಡಲಾಗುತ್ತದೆ. ಸಾಲ ಪಡೆದುಕೊಳ್ಳುವುದು ಡಿಸಿಸಿ ಬ್ಯಾಂಕ್, ಹಣಕಾಸು ವ್ಯವಹಾರ ನಡೆಸುವುದು ವಾಣಿಜ್ಯ ಬ್ಯಾಂಕಿನಲ್ಲಿ ಆದರೆ ಹೇಗೆ ಎಂದು ಪ್ರಶ್ನಿಸಿದರು.
ಕಾರ್ಯಕ್ರಮದಲ್ಲಿ ಸಹಕಾರಿ ಯೂನಿಯನ್ ನಿರ್ದೇಶಕ ನಾಗರಾಜ್, ಅಣ್ಣಿಹಳ್ಳಿ ಎಸ್‍ಎಫ್‍ಸಿಎಸ್ ಉಪಾಧ್ಯಕ್ಷ ನಾಗರಾಜ್‍ಗೌಡ, ನಗರಸಭೆ ಮಾಜಿ ಸದಸ್ಯ ಅಫೆÇ್ರೀಜ್‍ಪಾಷ, ಸೂಪರ್‍ವೈಸರ್ ಅಮಿನಾ ಮತ್ತಿತರರ ಉಪಸ್ಥಿತರಿದ್ದರು.
